Asianet Suvarna News Asianet Suvarna News

Karnataka Assembly Election: 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ತೆರೆಮರೆ ತಾಲೀಮು..!

*  ಕಾಂಗ್ರೆಸ್‌, ಜೆಡಿಎಸ್‌, ಆಮ್‌ ಆದ್ಮಿ ಸೇರಿ ಮತ್ತಿತರ ಪಕ್ಷಗಳಿಂದ ಚುನಾವಣೆ ಸಿದ್ಧತೆ 
*  ಸ್ಪರ್ಧೆಗೆ ಇಳಿದವರಂತೆ ರಾಜಕೀಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ನಾಯಕರು
*  ವರಿಷ್ಠರ ಓಲೈಕೆಗೆ ತೆರೆಮರೆ ಕಸರತ್ತು
 

All Political Parties Starts Preparation to Karnataka Assembly Election 2023 in Vijayapura grg
Author
Bengaluru, First Published May 14, 2022, 3:09 PM IST

ರುದ್ರಪ್ಪ ಆಸಂಗಿ

ವಿಜಯಪುರ(ಮೇ.14):  ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ(Karnataka Assembly Election) ಇನ್ನೂ ಒಂದು ವರ್ಷ ಕಾಲಾವಧಿ ಇದೆ. ಆದರೆ, ಎಲ್ಲ ರಾಜಕೀಯ ಪಕ್ಷಗಳಿಗೆ ಈಗಲೇ ಚುನಾವಣೆ ವರ್ಷ ಆರಂಭವಾಗಿದೆ. ಹಾಲಿ, ಮಾಜಿ ಹಾಗೂ ಹೊಸಬರು ಟಿಕೆಟ್‌ ಗಟ್ಟಿಮಾಡಿಕೊಳ್ಳಲು ಈಗಲೇ ತಾಲೀಮು ಶುರುಮಾಡಿದ್ದಾರೆ.

ವಿಧಾನ ಪರಿಷತ್‌(Vidhan Parishat) ದ್ವೈವಾರ್ಷಿಕ ಶಿಕ್ಷಕರ, ಪದವೀಧರರ ಕ್ಷೇತ್ರಗಳ ಚುನಾವಣೆಗೆ ಚುನಾವಣೆ ಆಯೋಗ(Election Commission) ಅಧಿಸೂಚನೆ ಹೊರಡಿಸಿದೆ. ಆದರೆ, ಬಹುತೇಕ ರಾಜಕೀಯ ಪಕ್ಷಗಳಿಗೆ ಈ ವಿಧಾನ ಪರಿಷತ್‌ ಚುನಾವಣೆಗಿಂತ 2023ರಲ್ಲಿ ಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಕಡೆ ಹೆಚ್ಚು ಗಮನ ಹೆಚ್ಚಿದೆ. ಬಿಜೆಪಿ(BJP), ಕಾಂಗ್ರೆಸ್‌(Congress), ಜೆಡಿಎಸ್‌(JDS), ಆಮ್‌ ಆದ್ಮಿ(AAP), ಮತ್ತಿತರ ಪಕ್ಷಗಳ ನಾಯಕರು ಚುನಾವಣೆ ಸಿದ್ಧತೆಗೆ ಸ್ಪರ್ಧೆಗೆ ಇಳಿದವರಂತೆ ರಾಜಕೀಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Shaurya Puraskar ಹುತಾತ್ಮನಾದ ಕರ್ನಾಟಕದ ಯೋಧನಿಗೆ ಮರಣೋತ್ತರ ಶೌರ್ಯಪ್ರಶಸ್ತಿ

ಆಯಾ ಪಕ್ಷಗಳಲ್ಲಿ ಹಾಲಿ ಶಾಸಕರು ಮುಂದಿನ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಗುರಿಯೊಂದಿಗೆ ಈಗಲೇ ಹತ್ತಾರು ಯೋಚನೆಗಳನ್ನು ಮಾಡುತ್ತಿದ್ದಾರೆ. ಮತದಾರರಿಗೆ ಈಗ ಎಲ್ಲಿಲ್ಲದ ಗೌರವ, ಆದರಾತಿಥ್ಯ ಶುರು ಹಚ್ಚಿಕೊಂಡಿದ್ದಾರೆ. ಹಾಲಿ ಶಾಸಕರು ಸದ್ಯಕ್ಕೆ ತಮ್ಮ ಕ್ಷೇತ್ರದ ಕಡೆಗೆ ಮುಖ ಮಾಡಿ ಬೆಳ್ಳಂಬೆಳಗ್ಗೆ ಪ್ರವಾಸಕ್ಕೆ ಮುಂದಾಗುತ್ತಿದ್ದಾರೆ. ಕೆಲ ಜನಪ್ರತಿನಿಧಿಗಳು ಇನ್ನೂ ಸೂರ್ಯೋದಯ ಆಗುವ ಮುನ್ನವೇ ಕ್ಷೇತ್ರದಲ್ಲಿ ಪ್ರವಾಸಕ್ಕೆ ಹೋಗಿಬಿಡತ್ತಾರೆ. ಮದುವೆ, ಜಾತ್ರೆ, ಉರುಸ್‌, ಭೂಮಿಪೂಜೆ, ಉದ್ಘಾಟನೆ ಸಮಾರಂಭ ಇವೇ ಮುಂತಾದ ಯಾವುದೇ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು ಭಾಗವಹಿಸಿ ಮತದಾರರ ಮಧ್ಯದಲ್ಲಿಯೇ ಇದ್ದುಕೊಂಡು ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ಪಕ್ಷದ ರಾಜಕಾರಣಿಗಳು(Politicians), ಕಾರ್ಯಕರ್ತರು ಜನರ ಮನೆಬಾಗಿಲಿಗೆ ತೆರಳಿ ಅವರ ಸಮಸ್ಯೆಗಳನ್ನು ಅರಿತುಕೊಳ್ಳುತ್ತಿದ್ದಾರೆ. ಆಡಳಿತ ಪಕ್ಷದವರು ಸರ್ಕಾರ ಮನೆ ಬಾಗಿಲಿಗೆ ಬರುತ್ತಿದೆ. ಏನೇ ಸಮಸ್ಯೆ ಇದ್ದರೂ ನಮಗೆ ತಿಳಿಸಬೇಕು. ಡಿಸಿ, ಎಸ್ಪಿ, ಎಸಿ, ಸಿಎಸ್‌ ಸೇರಿದಂತೆ ಸರ್ಕಾರಿ ಅಧಿಕಾರಿಗಳು ನಿಮ್ಮ ಮನೆಬಾಗಿಲಿಗೆ ಕಳುಹಿಸಿಕೊಡುತ್ತೇವೆ. ಇದು ನಿಮ್ಮದೇ ಸರ್ಕಾರ ಎಂದು ಆಡಳಿತ ಪಕ್ಷದ ರಾಜಕಾರಣಿಗಳು, ಕಾರ್ಯಕರ್ತರು ಭರವಸೆ ನೀಡುವುದು ಹೆಚ್ಚಾಗಿದೆ.

ಪ್ರತಿಪಕ್ಷದ ಕಾಂಗ್ರೆಸ್‌ ವರಸೆಯೇ ಬೇರೆಯಾಗಿದೆ. ಕಾಂಗ್ರೆಸ್‌ ಪಕ್ಷ ಮಾತ್ರ ನಿಮ್ಮ ಸಮಸ್ಯೆ ಪರಿಹರಿಸಲು ಸಾಧ್ಯ. ಬಿಜೆಪಿ ಬರೀ ಜನರ ಭಾವನೆಗಳನ್ನು ಕೆರಳಿಸಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡು ಮತ ಬೇಟೆಯಾಡುತ್ತಿದೆ. ನಿಜವಾದ ಅಭಿವೃದ್ಧಿ ಬೇಕಿದ್ದರೆ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಾಧ್ಯ. ಸರ್ಕಾರ ನಿಮ್ಮ ಸಮಸ್ಯೆ ಪರಿಹರಿಸದಿದ್ದರೆ ತಮಗೆ ತಿಳಿಸಿ, ಹೋರಾಟ ಮಾಡಿಯಾದರೂ ನಿಮಗೆ ನ್ಯಾಯದೊರಕಿಸಿ ಕೊಡುತ್ತೇವೆ ಎಂದು ಜನರಿಗೆ ವಾಗ್ದಾನ ಮಾಡುತ್ತಿದ್ದಾರೆ. ಇನ್ನು ಕೆಲ ರಾಜಕಾರಣಿಗಳು ತಮ್ಮ ಜೇಬಿನಿಂದ ಹಣ ನೀಡಿ ಜನರ ಕಣ್ಣೀರು ಒರೆಸುವ ಧಾರಾಳತನ ಮೆರೆಯುತ್ತಿದ್ದಾರೆ!

ಜೆಡಿಎಸ್‌ ಪಕ್ಷದ ನಡೆ ಇದಕ್ಕಿಂತಲೂ ಭಿನ್ನ. ನಮ್ಮ ಕುಮಾರಣ್ಣ ನಿಜವಾಗಲೂ ಬಡ, ಮಧ್ಯಮ ಹಾಗೂ ಜನ ಸಾಮಾನ್ಯರ ಜೀವನದ ಬಗೆಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಬಡವರ ಉದ್ಧಾರ. ಶ್ರಮಿಕರ ಜೀವನ ಸುಧಾರಿಸಲು ಜೆಡಿಎಸ್‌ ಪಕ್ಷವೇ ಹೇಳಿ ಮಾಡಿಸಿದ್ದಂತಿದೆ. ಬಿಜೆಪಿ, ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆಯೇ. ಜನರ ಸಮಸ್ಯೆಗಳಿಗೆ ನಿಜವಾಗಿಯೂ ಶಾಶ್ವತ ಪರಿಹಾರ ಜೆಡಿಎಸ್‌ನಿಂದ ಮಾತ್ರ ಸಾಧ್ಯ ಎಂದು ಭರವಸೆ ನೀಡಿ ಕ್ಷೇತ್ರದಲ್ಲಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಮಿಂಚಿನ ಸಂಚಾರ ನಡೆಸಿದ್ದಾರೆ.

ಟಿಕೆಟ್‌ಗೆ ತಾಲೀಮು ಜೋರು

ಆಯಾ ಪಕ್ಷದ ಹಾಲಿ, ಮಾಜಿ ಶಾಸಕರು ಹಾಗೂ ಹೊಸಬರು ಟಿಕೆಟ್‌ ಗಿಟ್ಟಿಸಿಕೊಳ್ಳಲು ಮತದಾರರ ಓಲೈಕೆಗೆ ಮುಂದಾಗಿದ್ದಾರೆ. ಹೊಸಬರು ಆಯಾ ಪಕ್ಷದ ಧುರೀಣರನ್ನು ಓಲೈಸಿಕೊಳ್ಳಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಯಾವುದೇ ಕ್ಷೇತ್ರದ ಯಾವುದೇ ಬಡಾವಣೆ, ಗ್ರಾಮಗಳಲ್ಲಿ ಸಣ್ಣ, ಪುಟ್ಟಕಾರ್ಯಕ್ರಮಗಳಿದ್ದರೂ ಅಲ್ಲಿ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಆದರಾತಿಥ್ಯ ನೀಡಿ ತನ್ನ ಹಿಂದೆ ಜನರ ದೊಡ್ಡ ಬೆಂಬಲ ಇದೆ ಎಂಬುವುದನ್ನು ರಾಜಕೀಯ ನಾಯಕರಿಗೆ ಪ್ರದರ್ಶಿಸುತ್ತಿದ್ದಾರೆ. ಯುವಕರು, ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿಯೂ ಹೊಸ ಟಿಕೆಟ್‌ ಆಕಾಂಕ್ಷಿಗಳು ಆಯಾ ಪಕ್ಷದ ವರಿಷ್ಠರನ್ನು ಓಲೈಸಲು ಏನೆಲ್ಲಾ ಕಸರತ್ತು ಈಗಲೇ ಶುರು ಮಾಡಿದ್ದಾರೆ.

ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ಸಿನ ಹಾಲಿ ಶಾಸಕ ಎಂ.ಬಿ.ಪಾಟೀಲ, ವಿಜಯಪುರ ಬಿಜೆಪಿ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬಸವನ ಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್ಸಿನ ಹಾಲಿ ಶಾಸಕ ಶಿವಾನಂದ ಪಾಟೀಲ, ಮುದ್ದೇಬಿಹಾಳದ ಹಾಲಿ ಬಿಜೆಪಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ, ಸಿಂದಗಿ ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ರಮೇಶ ಭೂಸನೂರ, ಇಂಡಿ ಕ್ಷೇತ್ರದ ಕಾಂಗ್ರೆಸ್ಸಿನ ಹಾಲಿ ಶಾಸಕ ಯಶವಂತರಾಯಗೌಡ ಪಾಟೀಲ, ದೇವರ ಹಿಪ್ಪರಗಿ ಬಿಜೆಪಿ ಹಾಲಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ನಾಗಠಾಣ ಮೀಸಲು ಕ್ಷೇತ್ರದ ಜೆಡಿಎಸ್‌ ಶಾಸಕ ದೇವಾನಂದ ಚವ್ಹಾಣ ಅವರು ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳಲು ಈಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ಸಿನ ಮಾಜಿ ಶಾಸಕರಾದ ರಾಜು ಆಲಗೂರ, ವಿಠಲ ಕಟಕದೊಂಡ ಅವರು ಈ ಬಾರಿ ಟಿಕೆಟ್‌ ಪಡೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸಿಡಿ ತೋರಿಸಿ ಮಂತ್ರಿಗಿರಿ ಪಡೆದಿದ್ದಾರೆ, ಸಿಡಿ ಬಾಂಬ್ ಸ್ಫೋಟಿಸಿದ ಯತ್ನಾಳ್

ಮುದ್ದೇಬಿಹಾಳ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಮಾಜಿ ಸಚಿವ ಸಿ.ಎಸ್‌.ನಾಡಗೌಡ ಅಪ್ಪಾಜಿ, ವಿಜಯಪುರ ಕ್ಷೇತ್ರದಲ್ಲಿ ಕಡಿಮೆ ಅಂತರದಲ್ಲಿ ಸೋಲು ಕಂಡಿರುವ ಕಾಂಗ್ರೆಸ್ಸಿನ ಅಭ್ಯರ್ಥಿ ಅಬ್ದುಲ್‌ಹಮೀದ ಮುಶ್ರೀಫ್‌, ಬಬಲೇಶ್ವರ ಕ್ಷೇತ್ರದಲ್ಲಿ ಪರಾಭವ ಹೊಂದಿದ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ, ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ, ಇಂಡಿ ಕ್ಷೇತ್ರದಲ್ಲಿ ಮಾಜಿ ಶಾಸಕ ರವಿಕಾಂತ ಪಾಟೀಲ, ಜೆಡಿಎಸ್‌ನ ಪರಾಭವ ಅಭ್ಯರ್ಥಿ ಬಿ.ಡಿ.ಪಾಟೀಲ ಹಂಜಗಿ ಮುಂತಾದ ಮುಖಂಡರು ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಪೈಪೋಟಿಗೆ ಇಳಿದಿದ್ದಾರೆ.

ವರಿಷ್ಠರ ಓಲೈಕೆಗೆ ತೆರೆಮರೆ ಕಸರತ್ತು

ಆಯಾ ಪಕ್ಷದ ವರಿಷ್ಠರನ್ನು ಓಲೈಸಿಕೊಂಡು ಟಿಕೆಟ್‌ ಗಿಟ್ಟಿಸಿಕೊಳ್ಳಲು ಎಲ್ಲ ರಾಜಕೀಯ ಪಕ್ಷಗಳಲ್ಲಿ(Political Parties) ಟಿಕೆಟ್‌ ಆಕಾಂಕ್ಷಿಗಳು ತೆರೆಮರೆಯಲ್ಲಿ ಜಿದ್ದಾಜಿದ್ದಿ ಶುರು ಹಚ್ಚಿಕೊಂಡಿದ್ದಾರೆ. ಹೊಸ ಟಿಕೆಟ್‌ ಆಕಾಂಕ್ಷಿಗಳು ಯಾವ ಪಕ್ಷದ ಟಿಕೆಟ್‌ ಗಿಟ್ಟಿಸಿಕೊಂಡರೆ ಲಾಭವಾಗುತ್ತದೆ. ಚುನಾವಣೆಯಲ್ಲಿ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ ಎಂಬ ಲೆಕ್ಕಾಚಾರದೊಂದಿಗೆ ವಿವಿಧ ಪಕ್ಷಗಳ ಬಾಗಿಲು ಬಡಿಯುವ ಕೆಲಸ ಆರಂಭಿಸಿದ್ದಾರೆ. ಇನ್ನೂ ಒಂದು ವರ್ಷ ಇರುವಾಗಲೇ ಎಲ್ಲ ರಾಜಕೀಯ ಪಕ್ಷಗಳಲ್ಲಿ 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ನಡೆದಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಬಾರಿ ವಿಧಾನಸಭೆ ಚುನಾವಣೆ ಹಿಂದೆಂದಿಗಿಂತಲೂ ಈ ಬಾರಿ ಮತ್ತಷ್ಟುರಂಗೇರುವ ಸಾಧ್ಯತೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ.
 

Follow Us:
Download App:
  • android
  • ios