Asianet Suvarna News Asianet Suvarna News

NCPಯಲ್ಲಿ ಭಿನ್ನಮತದ ಬೇಗುದಿ? ಸಭೆ ನಡುವೆಯೇ ಹೊರನಡೆದ ಶರದ್‌ ಪವಾರ್‌ ಅಳಿಯ ಅಜಿತ್‌ 

Rift in NCP: ನ್ಯಾಷನಲ್‌ ಕಾಂಗ್ರೆಸ್‌ ಪಕ್ಷದಲ್ಲಿ ಮತ್ತೊಂದು ಸುತ್ತಿನ ಭಿನ್ನಮತ ಭುಗಿಲೇಳುವ ಸಾಧ್ಯತೆ ಸೃಷ್ಟಿಯಾಗಿದೆ. ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಸಭೆಯ ನಡುವೆಯೇ ಅಜಿತ್‌ ಪವಾರ್‌ ಆಚೆ ನಡೆದಿದ್ದಾರೆ. ಇದರಿಂದ ಸಾಕಷ್ಟು ಊಹಾಪೋಹಗಳು ಕೇಳಿ ಬಂದಿವೆ.

Ajit Pawar leaves NCP national conference in the middle sparks rift in the party
Author
First Published Sep 12, 2022, 12:21 PM IST

ಮುಂಬೈ: ಮಹಾರಾಷ್ಟ್ರ ಮಾಜಿ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಈ ಹಿಂದೆ ರಾತ್ರೋರಾತ್ರಿ ಬಿಜೆಪಿ ಜತೆಗೂಡಿ ಸರ್ಕಾರ ರಚನೆಗೆ ಮುಂದಾಗಿ ಶರದ್‌ ಪವಾರ್‌ ನಿರ್ಧಾರದ ವಿರುದ್ಧ ನಡೆದುಕೊಂಡಿದ್ದರು. ಅದಾದ ನಂತರ ಪಕ್ಷದ ಶಾಸಕರು ಶರದ್‌ ಪವಾರ್‌ ಕಡೆ ನಿಂತ ಪರಿಣಾಮ ವಾಪಸ್‌ ಬಂದು ಉಪ ಮುಖ್ಯಮಂತ್ರಿಯಾಗಿಯೂ ಆಯ್ಕೆಯಾದರು. ಇದೀಗ ಮತ್ತೊಂದು ಸುತ್ತಿನ ಭಿನ್ನಮತ ಎನ್‌ಸಿಪಿಯಲ್ಲಿ ಆರಂಭವಾಗಿದೆಯಾ ಎಂಬ ಪ್ರಶ್ನೆ ಅಜಿತ್‌ ಪವಾರ್‌ ನಡೆಯಿಂದ ಸೃಷ್ಟಿಯಾಗಿದೆ. ಎನ್‌ಸಿಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಅಜಿತ್‌ ಪವಾರ್‌ಗಿಂತ ಮುಂಚೆ ಜಯಂತ್‌ ಪಾಟೀಲ್‌ರಿಗೆ ಮಾತನಾಡಲು ಅವಕಾಶ ಕೊಟ್ಟ ತಕ್ಷಣ ಅಜಿತ್‌ ಪವಾರ್‌ ಸಭೆಯಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಜಯಂತ್‌ ಪಾಟೀಲ್‌ ಮತ್ತು ಅಜಿತ್‌ ಪವಾರ್‌ ನಡುವೆ ಮುಸುಕಿನ ಗುದ್ದಾಟವಿದ್ದು, ತಿಳಿದೂ ಮೊದಲು ಜಯಂತ್‌ ಪಾಟೀಲ್‌ಗೆ ಮಾತನಾಡಲು ಅವಕಾಶ ಕೊಟ್ಟಿದ್ದರಿಂದ ಅಜಿತ್‌ ಪವಾರ್‌ ಸಿಟ್ಟಾಗಿದ್ದಾರೆ ಎನ್ನಲಾಗುತ್ತಿದೆ. ಅಜಿತ್‌ ಪವಾರ್‌ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರೂ ಸಭೆಯಲ್ಲಿ ಮಾತನಾಡದೇ ಹೊರಹೋಗಿದ್ದು ಹಲವಾರು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. 

ಇದನ್ನೂ ಓದಿ: ಕಪಿಲ್‌ ಸಿಬಲ್‌ ಆವೇಶದ ನಡುವೆಯೂ ಶಿವಸೇನೆ ವಿವಾದವನ್ನು ಮತ್ತೆ ಮುಂದೂಡಿದ ಸುಪ್ರೀಂ ಕೋರ್ಟ್!

ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅಜಿತ್‌ ಪವಾರ್‌, ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾದ್ದರಿಂದ ತಾವು ಮಾತನಾಡಲಿಲ್ಲ ಎಂದು ಹೇಳಿದ್ದಾರೆ. ಎನ್‌ಸಿಪಿ ಸಂಸದ ಪ್ರಫುಲ್‌ ಪಟೇಲ್‌ ಶರದ್‌ ಪವಾರ್‌ ಅವರ ಕಾರ್ಯಕ್ರಮದ ವಿದಾಯ ಭಾಷಣಕ್ಕೂ ಮುನ್ನ ಅಜಿತ್‌ ಪವಾರ್‌ ಮಾತನಾಡುತ್ತಾರೆ ಎಂದು ಅನೌನ್ಸ್‌ ಮಾಡಿದ ಸಮಯದಲ್ಲಿ ಅಜಿತ್‌ ಪವಾರ್‌ ವೇದಿಕೆಯ ಮೇಲೆ ಇರಲೇ ಇಲ್ಲ. ಅದನ್ನು ಗಮನಿಸಿದ ಪ್ರಫುಲ್‌ ಪಟೇಲ್‌, ಅಜಿತ್‌ ಪವಾರ್‌ ಶೌಚಾಲಯಕ್ಕೆ ತೆರಳಿದ್ದಾರೆ ಎಂದು ಸಬೂಬು ನೀಡಿದರು. ಇದರ ನಡುವೆ ಸುಪ್ರಿಯಾ ಸುಳೆ ಅಜಿತ್‌ ಪವಾರ್‌ರನ್ನು ಕಾರ್ಯಕ್ರಮಕ್ಕೆ ವಾಪಸ್‌ ಬರುವಂತೆ ಮನವೊಲಿಸುವ ಯತ್ನ ಮಾಡುತ್ತಿರುವುದು ಕಂಡುಬಂದಿದೆ. 

ಇದನ್ನೂ ಓದಿ: ಶಿವಸೇನೆ ಯಾರದ್ದು..? ನಿರ್ಧಾರ ಮಾಡಲಿದೆ ಸಾಂವಿಧಾನಿಕ ಪೀಠ!

ಮಹಾರಾಷ್ಟ್ರ ರಾಜಕಾರಣದಲ್ಲಿ ತಿಂಗಳ ಹಿಂದೆ ಅನಿರೀಕ್ಷಿತ ಬೆಳವಣಿಗೆಗಳಾದವು. ಶಿವಸೇನೆ ಪಕ್ಷ ಇಬ್ಬಾಗವಾಗಿ ಉದ್ಧವ್‌ ಠಾಕ್ರೆ ವಿರುದ್ಧವೇ ಏಕನಾಥ ಶಿಂಧೆ ಬಿಜೆಪಿ ಜತೆಗೂಡಿ ಸರ್ಕಾರ ರಚಿಸಿದರು. ಉದ್ಧವ್‌ ಠಾಕ್ರೆ ಅವರ ನಿಕಟವರ್ತಿ ಅನಿಸಿಕೊಂಡಿದ್ದ ಶಿಂಧೆ ನಡೆಸಿದ ರಾಜಕೀಯ ಕ್ಷಿಪ್ರಕ್ರಾಂತಿಯಿಂದ ಮಹಾಘಟ ಬಂಧನ ಸರ್ಕಾರ ಅಸ್ತಿತ್ವ ಕಳೆದುಕೊಂಡಿತ್ತು. ಶಿವಸೇನೆಯಂತೆಯೇ ಎನ್‌ಸಿಪಿ ಪಕ್ಷವನ್ನೂ ಒಡೆದು ಇಬ್ಬಾಗ ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಯಾಕೆಂದರೆ ದೇವೇಂದ್ರ ಫಡ್ನವೀಸ್‌ ಜೊತೆಗೂರಿ ಅಜಿತ್‌ ಪವಾರ್‌ ಒಮ್ಮೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವನ್ನು ಪಡೆದಿದ್ದಾರೆ. ನಂತರ ಪಕ್ಷದ ಶಾಸಕರ ಬೆಂಬಲವಿಲ್ಲದ ಕಾರಣ ಶರದ್‌ ಪವಾರ್‌ ಅವರ ಕಡೆ ತಿರುಗಿ ಹೋಗಿದ್ದಾರೆ. ಈಗ ಅಜಿತ್‌ ಪವಾರ್‌ ಮತ್ತೆ ಪಕ್ಷದ ವಿರುದ್ಧ ನಡೆಯುತ್ತಾರ ಅಥವಾ ಮುಂದಿನ ರಾಜಕೀಯ ಬೆಳವಣಿಗೆ ಏನಾಗಿರಲಿದೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: Sena Vs Sena: ಕೈ ಮುರಿಯಲಾಗದಿದ್ದರೆ ಕಾಲು ಮುರಿಯಿರಿ ಎಂದ ಶಿಂಧೆ ಬಣದ ಶಾಸಕನ ವಿರುದ್ಧ ಕೇಸ್

ಶರದ್‌ ಪವಾರ್‌ ಈಗಾಗಲೇ ಪರೋಕ್ಷವಾಗಿ ಅವರ ನಂತರ ಎನ್‌ಸಿಪಿ ನಾಯಕತ್ವವನ್ನು ಅಜಿತ್‌ ಪವಾರ್‌ ಅವರೇ ಹೊರಲಿದ್ದಾರೆ ಎಂಬುದನ್ನು ಹಲವು ಸಂದರ್ಭದಲ್ಲಿ ಹೇಳಿದ್ದಾರೆ. ರಾಜಕೀಯ ಮುತ್ಸದ್ದಿ ಶರದ್‌ ಪವಾರ್‌ ಅವರ ಉತ್ತರಾಧಿಕಾರಿ ಸ್ಥಾನ ಅಜಿತ್‌ ಪವಾರ್‌ ಅವರಿಗೇ ಒಲಿಯಲಿದೆ. ಆದರೆ ಅಲ್ಲಿಯವರೆಗೂ ಕಾಯುವ ಸಹನೆ ಅಜಿತ್‌ ಪವಾರ್‌ ಅವರಲ್ಲಿ ಇದೆಯಾ ಮತ್ತು ಶರದ್‌ ಪವಾರ್‌ ಅವರಿಗೆ ಅಜಿತ್‌ ನಿಷ್ಟೆ ತೋರುತ್ತಾರ ಎಂಬುದೂ ಯಕ್ಷಪ್ರಶ್ನೆಯಾಗಿದೆ. ಒಂದೆಡೆ ಬಿಜೆಪಿ ಪ್ರಾದೇಶಿಕ ಪಕ್ಷಗಳಲ್ಲಿನ ಶಾಸಕರನ್ನು ಬರಮಾಡಿಕೊಳ್ಳಲು ಸದಾ ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಎನ್‌ಸಿಪಿಯಲ್ಲಿನ ಬಿರುಕಿನಿಂದ ರಾಜಕೀಯ ಲಾಭವಾಗುವುದು ಬಿಜೆಪಿಗೆ ಎಂಬುದರಲ್ಲಿ ಸಂಶಯವಿಲ್ಲ. 

Follow Us:
Download App:
  • android
  • ios