Asianet Suvarna News Asianet Suvarna News

ಕಪಿಲ್‌ ಸಿಬಲ್‌ ಆವೇಶದ ನಡುವೆಯೂ ಶಿವಸೇನೆ ವಿವಾದವನ್ನು ಮತ್ತೆ ಮುಂದೂಡಿದ ಸುಪ್ರೀಂ ಕೋರ್ಟ್!

ಶಿವಸೇನೆ ಪಕ್ಷ ಯಾರದ್ದು ಎನ್ನುವ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ 77ನೇ ದಿನವೂ ಸ್ಪಷ್ಟ ತೀರ್ಮಾನ ಸಿಕ್ಕಿಲ್ಲ. ಬುಧವಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಸೆ. 27ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ದು, ಎಲ್ಲಾ ಅರ್ಜಿಗಳನ್ನು ಏಕಕಾಲಕ್ಕೆ ವಿಚಾರಣೆ ಮಾಡುವುದಾಗಿ ತಿಳಿಸಿದೆ.
 

Hearing in Shinde-Uddhav dispute on September 27 Supreme Court said will hear all the petitions together san
Author
First Published Sep 7, 2022, 1:27 PM IST

ನವದೆಹಲಿ (ಸೆ.7): ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ನಡುವೆ, ಶಿವಸೇನೆ ವಿವಾದವನ್ನು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಶಿಂಧೆ ಬಣದ ಪರ ವಕೀಲ ನೀರಜ್ ಕಿಶನ್ ಕೌಲ್, ಪಕ್ಷದ ಚಿಹ್ನೆಯ ವಿಚಾರವನ್ನು ಚುನಾವಣಾ ಆಯೋಗ ನಿರ್ಧರಿಸಲಿ ಎಂದು ಹೇಳಿದ್ದಾರೆ. ಇದಕ್ಕೆ ಉದ್ಧವ್ ಬಣ ತೀವ್ರ ವಿರೋಧ ವ್ಯಕ್ತಪಡಿಸಿದೆ. ಶಾಸಕರ ಅನರ್ಹತೆಯ ವಿಚಾರಣೆ ನಡೆಯಬೇಕಿದೆ ಎಂದು ಉದ್ಧವ್ ಬಣದ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ. ಅನರ್ಹತೆಯ ವಿಚಾರ ಇತ್ಯರ್ಥ ಆಗುವುದಕ್ಕೂ ಮುನ್ನ ಚುನಾವಣಾ ಆಯೋಗ ಶಾಸಕರ ಯಾವುದೇ ಬೇಡಿಕೆಯನ್ನು ಕೇಳಲು ಹೇಗೆ ಸಾಧ್ಯ ಎಂದಿದ್ದಾರೆ. ಅದರಲ್ಲದೆ, ಶಿವಸೇನೆಯ ಶಿಂಧೆ ಬಣವು ಶಿವಸೇನೆಯ ಗುರುತನ್ನು ಪಡೆದಲ್ಲಿ ಸಂಪೂರ್ಣ ವಿಚಾರಣೆಯೇ ಅರ್ಥಹೀನವಾಗುತ್ತದೆ ಎಂದಿದ್ದಾರೆ. ಇದರ ಬೆನ್ನಲ್ಲಿಯೇ ಸುಪ್ರೀಂ ಕೋರ್ಟ್‌ ಪ್ರಕರಣದ ವಿಚಾರಣೆಯನ್ನು ಸೆ. 27ಕ್ಕೆ ಮುಂದೂಡಿಕೆ ಮಾಡಿದ್ದು, ಅಂದು ಈ ಪ್ರಕರಣದ ಎಲ್ಲಾ ಅರ್ಜಿಯನ್ನು ಏಕಕಾಲದಲ್ಲಿ ವಿಚಾರಣೆ ಮಾಡುವುದಾಗಿ ತಿಳಿಸಿದೆ. ಪ್ರಸ್ತುತ ಶಿವಸೇನೆ ಯಾರದ್ದು ಎನ್ನುವ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿ 77 ದಿನಗಳಾಗಿವೆ.

ಸಾಂವಿಧಾನಿಕ ಪೀಠದಿಂದ ವಿಚಾರಣೆ: ಆಗಸ್ಟ್ 25 ರಂದು, ಸುಪ್ರೀಂ ಕೋರ್ಟ್, 3 ತಿಂಗಳ ವಿಚಾರಣೆಯ ನಂತರ, ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ (Constitutional Bench) ವರ್ಗಾಯಿಸಿತು. ಜೂನ್ 20 ರಂದು ಶಿಂಧೆ ನೇತೃತ್ವದಲ್ಲಿ 20 ಶಾಸಕರು ಸೂರತ್ ಮೂಲಕ ಗುವಾಹಟಿಗೆ ತೆರಳಿದಾಗ ಶಿವಸೇನೆ ವಿವಾದ ಪ್ರಾರಂಭವಾಯಿತು. ಇದಾದ ನಂತರ ಶಿಂಧೆ ಬಣವು ಶಿವಸೇನೆಯ 55 ಶಾಸಕರಲ್ಲಿ 39 ಶಾಸಕರು ತಮ್ಮ ಬಣದ ಜೊತೆಗಿರುವುದಾಗಿ ಹೇಳಿಕೊಂಡಿತು, ನಂತರ ಉದ್ಧವ್ ಠಾಕ್ರೆ (uddhav thackeray) ಮಹಾರಾಷ್ಟ್ರ ಸಿಎಂ (Maharashtra CM) ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಬಿಜೆಪಿಯ ಬೆಂಬಲದೊಂದಿಗೆ ಏಕನಾಥ್‌ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು.

ಕಳೆದ ವಿಚಾರಣೆ ವೇಳೆ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರು ಅನರ್ಹತೆಯ (disqualification) ಆರೋಪವನ್ನು ನಮ್ಮ ವಿರುದ್ಧ ತಪ್ಪಾಗಿ ಮಾಡಲಾಗಿದೆ ಎಂದು ಹೇಳಿದ್ದರು. ನಾವು ಈಗಲೂ ಶಿವಸೈನಿಕರು. ಮತ್ತೊಂದೆಡೆ, ಸುಪ್ರೀಂ ಕೋರ್ಟ್‌ನಲ್ಲಿ, ಉದ್ಧವ್ ಠಾಕ್ರೆ ಬಣದ ಪರ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್, ಶಿಂಧೆ ಬಣಕ್ಕೆ ಹೋಗುವ ಶಾಸಕರು ಬೇರ್ಪಟ್ಟ ಬಣವನ್ನು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳಿಸಿದರೆ ಮಾತ್ರ ಸಂವಿಧಾನದ 10 ನೇ ಶೆಡ್ಯೂಲ್ ಅಡಿಯಲ್ಲಿ ಅನರ್ಹತೆಯನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ. ಅದರ ಹೊರತಾಗಿ ಅವರನ್ನು ಉಳಿಸಲು ಬೇರೆ ಮಾರ್ಗವಿಲ್ಲ ಎಂದಿದ್ದಾರೆ.

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನಲ್ಲಿ ಇಲ್ಲಿಯವರೆಗೂ ಆಗಿದ್ದೇನು?

ಜೂನ್‌ 20: 15 ಶಿವಸೇನೆ ಶಾಸಕರು ಹಾಗೂ 10 ಸ್ವತಂತ್ರ ಶಾಸಕರು ಸೂರತ್‌ಗೆ ತೆರಳಿ ಅಲ್ಲಿಂದ ಗುವಾಹಟಿಗೆ ಶಿಫ್ಟ್‌ ಆಗಿದ್ದರು.

ಜೂನ್‌ 23: ಏಕನಾಥ್‌ ಶಿಂಧೆ ಮೊದಲ ಪತ್ರ, ತಮಗೆ 35 ಶಿವಸೇನೆ ಶಾಸಕರ ಬೆಂಬಲ ಇದೆ ಎಂದು ಘೋಷಣೆ.

ಜೂನ್‌ 25: 16 ರೆಬಲ್‌ ಶಾಸಕರಿಗೆ ಸದಸ್ಯತ್ವವನ್ನು ರದ್ದು ಮಾಡುವ ಕುರಿತಾಗಿ ಉಪಸಭಾಪತಿಯಿಂದ ನೋಟಿಸ್‌

ಜೂನ್‌ 26: ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಶಿವಸೇನೆ, ಕೇಂದ್ರ, ಮಹಾರಾಷ್ಟ್ರ ಪೊಲೀಸರು ಮತ್ತು ಉಪಸಭಾಪತಿಗೆ ನೋಟಿಸ್ ಕಳುಹಿಸಿತ್ತು. ಬಂಡಾಯ ಶಾಸಕರು ಇದರಿಂದ ರಿಲೀಫ್‌ ಪಡೆದುಕೊಂಡಿದ್ದರು.

ಜೂನ್‌ 28: ದೇವೇಂದ್ರ ಫಡ್ನವಿಸ್‌ ಅವರ ಮನವಿಯ ಮೇರೆಗೆ, ಮಹಾರಾಷ್ಟ್ರ ಗವರ್ನರ್‌ ಉದ್ಧವ್‌ ಠಾಕ್ರೆಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚನೆ.

ಜೂನ್‌ 29: ವಿಶ್ವಾಸಮತ ಯಾಚನೆಗೆ ತಡೆ ನೀಡಲು ಸುಪ್ರೀಂ ನಕಾರ. ಇದರ ಬೆನ್ನಲ್ಲಿಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಉದ್ದವ್‌ ಠಾಕ್ರೆ,

ಜೂನ್‌ 30: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾದ ಏಕನಾಥ್‌ ಶಿಂಧೆ. ಬಿಜೆಪಿಯ ದೇವೇಂದ್ರ ಫಡ್ನವಿಸ್‌ ಉಪಮುಖ್ಯಮಂತ್ರಿ ಸ್ಥಾನಕ್ಕೆ.

ಜುಲೈ 3: ವಿಧಾನಸಭೆಯ ನೂತನ ಸ್ಪೀಕರ್ ಶಿಂಧೆ ಬಣಕ್ಕೆ ಸದನದಲ್ಲಿ ಮನ್ನಣೆ ನೀಡಿದರು. ಮರುದಿನ ಶಿಂಧೆ ವಿಶ್ವಾಸ ಮತ ಗೆದ್ದರು.

ಆಗಸ್ಟ್‌ 3: ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದ ಸುಪ್ರೀಂ ಕೋರ್ಟ್‌, ನಾವು ವಿಚಾರಣೆಯನ್ನು 10 ದಿನಗಳವರೆಗೆ ಮುಂದೂಡಿದ್ದೇವೆ ಅಷ್ಟರ ಒಳಗೆ ನೀವು (ಶಿಂಧೆ) ಸರ್ಕಾರ ರಚಿಸಿದ್ದೀರಿ ಎಂದು ಪ್ರಶ್ನೆ

ಶಿವಸೇನೆ ಯಾರದ್ದು..? ನಿರ್ಧಾರ ಮಾಡಲಿದೆ ಸಾಂವಿಧಾನಿಕ ಪೀಠ!

ಆಗಸ್ಟ್‌ 4: ಸುಪ್ರೀಂ ಕೋರ್ಟ್‌ ಹೇಳಿಕೆ, ಇದರ ವಿಚಾರಣೆ ಇನ್ನೂ ಪ್ರಗತಿಯಲ್ಲಿದೆ. ತೀರ್ಪು ಬರುವವರೆಗೂ ಈ ಪಕ್ಷದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವಂತಿಲ್ಲ ಎಂದು ಚುನಾವಣಾ ಆಯೋಗಕ್ಕೆ ಸೂಚನೆ. ಇದಾದ ಬಳಿಕ ಸುಪ್ರೀಂ ಕೋರ್ಟ್‌ 3 ಬಾರಿ ವಿಚಾರಣೆಯನ್ನು ಮುಂದೂಡಿಕೆ ಮಾಡಿತ್ತು. 8, 12 ಹಾಗೂ 22 ರಂದು ನಡೆದ ವಿಚಾರಣೆಯ ವೇಳೆ ಯಾವುದೇ ತೀರ್ಮಾನ ನೀಡಿರಲಿಲ್ಲ.

ಸಚಿವ ಸ್ಥಾನ ಸಿಗದ ಕಾರಣಕ್ಕೆ ಸಂಜಯ್ ಶಿರ್ಸತ್ ಸಿಟ್ಟು, ಶಿವಸೇನೆ ಏಕನಾಥ್‌ ಶಿಂಧೆ ಕ್ಯಾಂಪ್‌ನಲ್ಲಿ ಬಂಡಾಯ?

ಆಗಸ್ಟ್ 23: ವಿಷಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಯಿತು.

Follow Us:
Download App:
  • android
  • ios