ನರೇಂದ್ರ ಮೋದಿ ಅಳುವ ಕೂಸು: ಮಲ್ಲಿಕಾರ್ಜುನ ಖರ್ಗೆ
ಮೋದಿ ಬೆಳಗ್ಗಿನಿಂದ ಸಂಜೆವರೆಗೆ ಅಳುತ್ತಿರುತ್ತಾರೆ, ಕಾಂಗ್ರೆಸ್‌ನ್ನು ಟೀಕಿಸಿದ್ದರೂ ನಾವ್ಯಾರು ಅಳುತ್ತಿಲ್ಲ, ಇದ್ದಕ್ಕಿದ್ದಂತೆ ಮೋದಿ, ಶಾ, ಸಿಎಂಗೆ ಕಲಬುರಗಿ ಮೇಲೆ ಪ್ರೀತಿ ಬಂದಿದೆ. ನಾನು ದಲಿತ, ಮೋದಿಗಿಂತಲೂ ಕೆಳಗಿದ್ದೇನೆ. ಕಾಂಗ್ರೆಸ್ ವಿರುದ್ಧ ಮೋದಿ ಟೀಕೆ ಮರೆಯಲಾಗದು: ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ(ಮೇ.04): ಬೆಳಗ್ಗೆಯಿಂದ ಸಂಜೆವರೆಗೆ ಅಳುತ್ತಲೇ ಇರುವುದು ಪ್ರಧಾನಿ ಮೋದಿ ಅವರಿಗೆ ರೂಢಿಯಾಗಿ ಬಿಟ್ಟಿದೆ. ಅವರೊಬ್ಬ ಅಳುವ ಕೂಸು (ಕ್ರೈಯಿಂಗ್ ಬೇಬಿ) ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ. ಆಳಂದದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಪಾಟೀಲ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ನಾಯಕರು 91 ಬಾರಿ ನನ್ನನ್ನು ವೈಯಕ್ತಿಕವಾಗಿ ನಿಂದಿಸಿದ್ದಾರೆ ಎನ್ನುವ ಮೋದಿ, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಡಿರುವ ಹಗುರ ಮಾತುಗಳನ್ನು ಮರೆತಿದ್ದಾರೆ. ಸೋನಿಯಾ ಗಾಂಧಿಗೆ ವಿಡೋ (ವಿಧವೆ), ಇಟಲಿ ಗರ್ಲ್ ಎನ್ನುವ ಪದ ಬಳಸಿದ್ದರು. ರಾಹುಲ್ ಗಾಂಧಿ ಒಬ್ಬ ಹೈಬ್ರಿಡ್ ಎಂದಿದ್ದರು. ಇಷ್ಟೆಲ್ಲಾ ಹಗುರವಾದ ಮಾತುಗಳನ್ನು ನಮ್ಮ ಪಕ್ಷದ ಹೈಕಮಾಂಡ್ ವಿರುದ್ಧ ಆಡಿದ್ದರೂ ನಾವ್ಯಾರೂ ಮೋದಿ ಅವರಂತೆ ಅಳುತ್ತಾ ಕುಳಿತಿಲ್ಲ. ಇದೊಂದು ಯುದ್ಧವೆನ್ನುವುದು ನಮಗೆ ಗೊತ್ತು. ಬರೀ ಅಳುತ್ತಾ ಕುಳಿತುಕೊಂಡರೆ ಆಗಲ್ಲ ಎಂದು ಮೋದಿಗೆ ಮಾತಲ್ಲೇ ಕುಟುಕಿದರು.
ತಾವೊಬ್ಬ ಹಿಂದುಳಿದ ವರ್ಗದ ವ್ಯಕ್ತಿ ಆಗಿರುವುದರಿಂದ ತಮ್ಮ ವಿರುದ್ಧ ಇಲ್ಲಸಲ್ಲದ ಟೀಕೆಗಳನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಮೋದಿ ಪದೇಪದೆ ಉಲ್ಲೇಖಿಸುತ್ತಾರೆ. ಆದರೆ, ಮೋದಿಯವರು ಒಂದು ಅಂಶವನ್ನು ನೆನಪಿಡಬೇಕು. ನಾನು ದಲಿತ. ಮೋದಿಗಿಂತಲೂ ಕೆಳಗೆ ಇದ್ದೇನೆ. ಮೊದಲು ನನ್ನ ತಲೆಯ ಮೇಲೆ ಕಾಲಿಟ್ಟಮೇಲೆಯೇ ನಿಮ್ಮ ಕಡೆಗೆ ಬರುತ್ತಾರೆ ಎಂದು ಸೂಚ್ಯವಾಗಿ ನುಡಿದರು.
ಖರ್ಗೆಗೆ 80 ವರ್ಷವಾಗಿದೆ, ಯಾವಾಗ ಬೇಕಾದ್ರೂ ಮೇಲೆ ಹೋಗಬಹುದು: ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ
ಸಿಎಂ ಬಸವರಾಜ ಬೊಮ್ಮಾಯಿ ಅವರು ನನ್ನ ಹಿಂದೆ ಮೋದಿ, ಶಾ ಇದ್ದಾರೆ ಎನ್ನುತ್ತಾರೆ. ನಮ್ಮ ಹಿಂದೆ ಜನರಿದ್ದಾರೆ ಎಂದು ಹೇಳುತ್ತಿಲ್ಲ. 40% ಭ್ರಷ್ಟಾಚಾರ ಮುಚ್ಚಿಕೊಳ್ಳಲು ಮೋದಿ, ಶಾ, ಯೋಗಿಯನ್ನು ಕಲಬುರಗಿಗೆ ಕರೆದುಕೊಂಡು ಬರುತ್ತಿದ್ದಾರೆ. ಮತಕ್ಕಾಗಿ ಪ್ರಧಾನಿ ಮೋದಿ, ಶಾ, ಯೋಗಿ ಇಲ್ಲಿಗೆ ಬಂದು ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ. ಇದ್ದಕ್ಕಿದ್ದಂತೆ ಇವರಿಗೆ ಕಲಬುರಗಿ ಮೇಲೆ ಪ್ರೀತಿ ಬಂದು ಬಿಟ್ಟಿದೆ ಎಂದು ಟೀಕಾಪ್ರಹಾರ ನಡೆಸಿದರು.
ಸಿಎಂ ಆದ್ಮೇಲೆ ಯೋಗಿಗೆ ಕೆಟ್ಟ ಬುದ್ದಿ ಬಂದಿದೆ:
ಯೋಗಿ ಆದಿತ್ಯನಾಥ ಅವರು ಉತ್ತರ ಪ್ರದೇಶ ಸಿಎಂ ಆದ ಮೇಲೆ ಅವರಿಗೆ ಕೆಟ್ಟಬುದ್ಧಿ ಬಂದಿದೆ. ಕಾನೂನು ಕೈಗೆತ್ತಿಕೊಂಡು ಅರಾಜಕತೆ ಹುಟ್ಟು ಹಾಕುತ್ತಿದ್ದಾರೆ. ಅಭಿವೃದ್ಧಿಗೆ ಒತ್ತು ಕೊಡುವ ಬದಲು ಬುಲ್ಡೋಜರ್ ಹಾಯಿಸುವ ಕೆಲಸ ಮಾಡುತ್ತಿದ್ದಾರೆ. ಗೂಂಡಾಗಳನ್ನು ಗಲ್ಲಿಗೇರಿಸುತ್ತೇವೆ ಎನ್ನುತ್ತಾ ಗುಂಡು ಹಾರಿಸುವ ಮಾತನಾಡಿ ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ. ತಪ್ಪಿತಸ್ಥರು ಯಾವುದೇ ಧರ್ಮೀಯರಾಗಿರಲಿ, ಕಾನೂನಿನಡಿ ಶಿಕ್ಷೆ ಕೊಡಲು ಕೋರ್ಚ್‌ಗಳಿವೆ. ಆದರೆ, ಇವರೇ ಕಾನೂನು ಕೈಗೆತ್ತಿಕೊಂಡು ಬುಲ್ಡೋಜರ್ ಹಾಯಿಸಿರುವ ಕ್ರಮ ಸರಿಯಲ್ಲ ಎಂದರು.
ಯೋಗಿ ಸಂಸತ್‌ನಲ್ಲಿದ್ದಾಗ ನನ್ನ ಭಾಷಣಕ್ಕೆ ಅಳಲು ಶುರು ಮಾಡಿದ್ದರು. ‘ಯೋಗಿಯವರೇ ಅಳಬೇಡಿ, ಏಕೆ ಅಳುತ್ತಿದ್ದೀರಿ’ ಎಂದು ಸ್ಪೀಕರ್ ಮಹಾಜನ್ ಕೇಳಿದಾಗ, ಖರ್ಗೆಯವರು ನನಗೆ ಮುಖದಲ್ಲಿ ರಾಮ, ಬಗಲಲ್ಲಿ ಚೂರಿ ಎಂದಿದ್ದಾರೆ ಎಂದು ಮರುಗಿದ್ದರು. ನಾವು ಈ ದೇಶದ ಮೂಲನಿವಾಸಿಗಳು. ಇಲ್ಲಿಯೇ ಹುಟ್ಟಿ, ಇಲ್ಲಿನ ಮಣ್ಣಿಗೆ ಸೇರುತ್ತೇವೆ. ಹೊರಗಿನಿಂದ ಬಂದವರು ಈ ದೇಶವನ್ನು ಲೂಟಿಮಾಡಿದ್ದಾರೆ ಎಂದು ಹೇಳಿದ್ದೆ. ಸಾಧು, ಸಂತರ ವಸ್ತ್ರ ಧರಿಸಿ, ಕಾವಿ ತೊಟ್ಟು ಮನುಷ್ಯ ಕುಲಕ್ಕೆ ಉದ್ದಾರ ಮಾಡುತ್ತೀರೋ, ಮನುಷ್ಯ ಕುಲದಲ್ಲೇ ಜಗಳ ಹಚ್ಚುತ್ತೀರೋ ಎಂದು ಯೋಗಿಯನ್ನು ಪ್ರಶ್ನಿಸಿದರು.