Asianet Suvarna News Asianet Suvarna News

ಭಾರತ ಸಂಕಲ್ಪ ಯಾತ್ರೆಗೆ ಖರ್ಗೆ ವಿರೋಧ

'ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಸಾಧನೆಗಳ ಪ್ರಚಾರಕ್ಕೆ ನೀವು ಸರ್ಕಾರದ ಅಧಿಕಾರ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ’ ಎಂದು ಆಕ್ಷೇಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಖರ್ಗೆ 

AICC President Mallikarjun Kharge Opposes Bharat Sankalpa Yatra grg
Author
First Published Oct 23, 2023, 12:00 AM IST

ನವದೆಹಲಿ(ಅ.23): ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳಲು ದೇಶಾದ್ಯಂತ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ನಡೆಸುವಂತೆ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿರುವುದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಖರ್ಗೆ, ‘ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಸಾಧನೆಗಳ ಪ್ರಚಾರಕ್ಕೆ ನೀವು ಸರ್ಕಾರದ ಅಧಿಕಾರ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ’ ಎಂದು ಆಕ್ಷೇಪಿಸಿದ್ದಾರೆ.
ಅಲ್ಲದೆ, ‘ರಕ್ಷಣಾ ಸಚಿವಾಲಯವು ರಜೆಯಲ್ಲಿರುವ ಯೋಧರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡುವಂತೆ ಸೂಚನೆ ನೀಡಿದೆ’ ಎಂದು ಹಿಂದಿನ ಸೂಚನೆಯೊಂದನ್ನು ಉಲ್ಲೇಖಿ ಆರೋಪಿಸಿರುವ ಅವರು, ಅದಕ್ಕೂ ವಿರೋಧ ವ್ಯಕ್ತಪಡಿಸಿದ್ದಾರೆ.

ಖರ್ಗೆ ಮುಳುಗುತ್ತಿರುವ ಹಡಗಿನ ಪ್ರೆಸಿಡೆಂಟ್: ಗೋವಿಂದ ಕಾರಜೋಳ

‘ಅಧಿಕಾರಿಗಳು ಹಾಗೂ ಸೈನಿಕರನ್ನು ಯಾವಾಗಲೂ ರಾಜಕೀಯದಿಂದ ದೂರವಿಡಬೇಕು. ಅದರಲ್ಲೂ ಚುನಾವಣೆ ಹತ್ತಿರ ಬರುತ್ತಿರುವಾಗ ಅವರನ್ನು ಇಂತಹ ಕೆಲಸಕ್ಕೆ ಬಳಸಿಕೊಳ್ಳಬಾರದು. ಹೀಗಾಗಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗಾಗಿ ಕೂಡಲೇ ಈ ಎರಡೂ ಆದೇಶಗಳನ್ನು ಹಿಂಪಡೆಯಿರಿ’ ಎಂದು ಖರ್ಗೆ ಆಗ್ರಹಿಸಿದ್ದಾರೆ.

‘ಇದು ಕೇವಲ ಇಂಡಿಯಾ ಪಕ್ಷಗಳಿಗೆ ಸಂಬಂಧಿಸಿದ ಕಳಕಳಿಯಲ್ಲ. ಬದಲಿಗೆ ಇಡೀ ದೇಶದ ಜನರಿಗೆ ಸಂಬಂಧಿಸಿದ ವಿಷಯ. ಆಡಳಿತಾರೂಢ ಪಕ್ಷದ ಅನುಕೂಲಕ್ಕಾಗಿ ಸರ್ಕಾರದ ಆಡಳಿತ ಯಂತ್ರದ ದುರ್ಬಳಕೆ ಇದಾಗಿದೆ. ಇದು ಕೇಂದ್ರ ನಾಗರಿಕ ಸೇವೆಗಳ ನಿಯಮದ ಉಲ್ಲಂಘನೆಯೂ ಆಗಿದೆ. ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡುವಂತಿಲ್ಲ ಎಂದು ನಿಯಮ ಹೇಳುತ್ತದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಹಾಗೂ ಕಲ್ಯಾಣ ಯೋಜನೆಗಳಿಗೆ ಪೂರ್ಣ ಪ್ರಮಾಣದಲ್ಲಿ ಫಲಾನುಭವಿಗಳನ್ನು ನೋಂದಣಿ ಮಾಡಿಸಲು ದೇಶದ 2.7 ಲಕ್ಷ ಗ್ರಾಮ ಪಂಚಾಯ್ತಿಗಳ ಮಟ್ಟದಲ್ಲಿ ನ.20ರಿಂದ ಜ.25ರವರೆಗೆ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ನಡೆಸಬೇಕು ಎಂದು ಕೇಂದ್ರ ಕೃಷಿ ಸಚಿವಾಲಯವು ಅ.14ರಂದು ಆಂತರಿಕ ಸುತ್ತೋಲೆ ಹೊರಡಿಸಿತ್ತು. ಇದರ ಬೆನ್ನಲ್ಲೇ 6 ತಿಂಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಜನರನ್ನು ತಲುಪಲು ಯಾತ್ರೆ ಹಮ್ಮಿಕೊಳ್ಳುವಂತೆ ಮೋದಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಶನಿವಾರ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು.

Follow Us:
Download App:
  • android
  • ios