ಖರ್ಗೆ ಮುಳುಗುತ್ತಿರುವ ಹಡಗಿನ ಪ್ರೆಸಿಡೆಂಟ್: ಗೋವಿಂದ ಕಾರಜೋಳ
ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಲಹ ಆರಂಭಗೊಂಡಿದೆ. ಕಾಂಗ್ರೆಸ್‌ನಲ್ಲಿ ಭಿನ್ನಮತ ಅಷ್ಟೇ ಇಲ್ಲ. ಹಲವರಿಗೆ ನಿರಾಶೆಯೂ ಆಗಿದೆ. ಗೆದ್ದು ಬಂದ ಬಳಿಕ ಒಂದೇ ಒಂದು ರೂಪಾಯಿ ಕೆಲಸ ಮಾಡೋಕೆ ಕೂಡ ಆಗುತ್ತಿಲ್ಲ: ಮಾಜಿ ಡಿಸಿಎಂ ಗೋವಿಂದ ಕಾರಜೋಳ
ಬಾಗಲಕೋಟೆ(ಅ.11): ಕಳೆದ 5 ತಿಂಗಳಿಂದ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಸರ್ಕಾರ, ಜನಪರ ಕಾಳಜಿ ಇಲ್ಲದ, ನಿಷ್ಕ್ರಿಯ ಸರ್ಕಾರವಾಗಿದೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲಿ ತೊಡಗಿದ ಸರ್ಕಾರ ಇದಾಗಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಟೀಕಿಸಿದರು.
ಜಮಖಂಡಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ, ಬೆಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಕೃಷಿ ಕಾರ್ಮಿಕರಿಗೆ ಉದ್ಯೋಗ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ. ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ, ನಿರಂತರ ಲೋಡ್ ಶೆಡ್ಡಿಂಗ್ ಆಗುತ್ತಿದೆ. ರೈತರು ಹೆಸ್ಕಾಂ ಕಚೇರಿಗಳಿಗೆ ಮುತ್ತಿಗೆ ಹಾಕುತ್ತಿರುವುದು ಸಾಮಾನ್ಯವಾಗಿದೆ ಎಂದು ಸರ್ಕಾರದ ವ್ಯಫಲ್ಯಗಳ ಪಟ್ಟಿ ಮಾಡಿದರು.
ಕಾಂಗ್ರೆಸ್ ಅಧಿಕಾರದಲ್ಲಿ ಮುಸ್ಲಿಂ ಅಧಿಕಾರಿಯ ದರ್ಪ: ಸ್ವಪಕ್ಷದ ವಿರುದ್ಧವೇ ಸಿಡಿದೆದ್ದ ಶಾಸಕ
ಈ ವರ್ಷ ಮಳೆ ಸರಿಯಾಗಿ ಆಗುವುದಿಲ್ಲ ಎಂದು ಹವಾಮಾನ ಇಲಾಖೆ ಸಾಕಷ್ಟು ಮುಂಚೆಯೇ ವರದಿ ನೀಡಿತ್ತು. ಈ ವರದಿಯಿಂದ, ಎಚ್ಚೆತ್ತುಕೊಂಡು ಸರ್ಕಾರ ಕಲ್ಲಿದ್ದಲು ಖರೀದಿಸಿ ಇಡಬೇಕಿತ್ತು. ನಮ್ಮ ನಾಲ್ಕು ಥರ್ಮಲ್ ಪವರ್ ಪ್ರೊಜೆಕ್ಟ್‌ನಿಂದ 5 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದಿತ್ತು. ಆದರೆ, ಪ್ರಸ್ತುತ ಕಲ್ಲಿದ್ದಲು ಇಲ್ಲದ್ದಕ್ಕೆ ಎಲ್ಲವೂ ಬಂದ್ ಆಗಿವೆ. ಇನ್‌ಸ್ಟಾಲ್ಡ್ ಕೆಪಾಸಿಟಿ 32 ಸಾವಿರ ಮೆಗಾ ವ್ಯಾಟ್ ಇದೆ. ನಮಗೆ ಕೇವಲ 16 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಅವಶ್ಯಕತೆ ಇದೆ. ಆದರೆ, ಈಗ 6 ಸಾವಿರ ಮೆಗಾವ್ಯಾಟ್ ವಿದ್ಯುತ್ ಸಹ ಸಿಗುತ್ತಿಲ್ಲ. ಸಕ್ಕರೆ ಕಾರ್ಖಾನೆಗಳು ಕೂಡ ಬಂದ್ ಆಗಿರುವುದರಿಂದ ಕೋಜೆನ್ ವಿದ್ಯುತ್ ಕೂಡ ಲಭಿಸುತ್ತಿಲ್ಲ. ಹಳ್ಳಿಗಳಲ್ಲಿ ರೈತರ ನೀರಾವರಿಗೆ ಹಾಗೂ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಿಗುತ್ತಿಲ್ಲ. ಪಟ್ಟಣದಲ್ಲೂ ಲೋಡ್ ಶೆಡ್ಡಿಂಗ್ ಹಾವಳಿ ಹೆಚ್ಚಾಗಿದೆ. ಆಡಳಿತದಲ್ಲಿರುವ ಕಾಂಗ್ರೆಸ್‌ನ ಭ್ರಷ್ಟ, ನಿಷ್ಕ್ರಿಯ, ನಿರ್ಲಕ್ಷ್ಯ ಧೋರಣೆಯಿಂದ ಈ ಎಲ್ಲ ಸಮಸ್ಯೆಗಳು ತಲೆದೋರಿವೆ ಎಂದು ಆರೋಪಿಸಿದರು.
ಕೂಡಲೇ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಕೊಡಬೇಕು. ಅದು ಆಗದೇ ಇದ್ದಲ್ಲಿ ಕೂಡಲೇ ಕುರ್ಚಿ ಬಿಟ್ಟು ಕೆಳಗಿಳಿಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಲಹ
ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಲಹ ಆರಂಭಗೊಂಡಿದೆ. ಕಾಂಗ್ರೆಸ್‌ನಲ್ಲಿ ಭಿನ್ನಮತ ಅಷ್ಟೇ ಇಲ್ಲ. ಹಲವರಿಗೆ ನಿರಾಶೆಯೂ ಆಗಿದೆ. ಗೆದ್ದು ಬಂದ ಬಳಿಕ ಒಂದೇ ಒಂದು ರೂಪಾಯಿ ಕೆಲಸ ಮಾಡೋಕೆ ಕೂಡ ಆಗುತ್ತಿಲ್ಲ. ಶಾಸಕರಿಗೆ ಅನುದಾನ ಸಿಗುತ್ತಿಲ್ಲ. ಹೇಳಿದ ಅಧಿಕಾರಿಗಳ ಪೋಸ್ಟಿಂಗ್, ವರ್ಗಾವಣೆ ಕೂಡ ಆಗುತ್ತಿಲ್ಲ. ಅಧಿಕಾರಿಗಳು ಮಂತ್ರಿಗಳಿಗೆ ಲಂಚ ನೀಡಿ ತಮಗೆ ಬೇಕಾದಲ್ಲಿ ವರ್ಗಾವಣೆ ಪಡೆಯುತ್ತಿದ್ದಾರೆ. ಈ ಕುರಿತು ಕಾಂಗ್ರೆಸ್ ಶಾಸಕರೇ ಬಂಡೆದಿದ್ದಾರೆ ಎಂದು ಕಾರಜೋಳ ಆರೋಪಿಸಿದರು.
ಇತ್ತ ವೀರಶೈವ- ಲಿಂಗಾಯತ ಮುಖಂಡ ಶಾಮನೂರು ಶಿವಶಂಕರಪ್ಪನವರು ಸಿಎಂ ವಿರುದ್ಧ ಸೆಡ್ಡು ಹೊಡೆದಿದ್ದಾರೆ. ಇದೇ ತಿಂಗಳು 23ಕ್ಕೆ ದಾವಣಗೆರೆಯಲ್ಲಿ ವೀರಶೈವ- ಲಿಂಗಾಯತ ಸಮುದಾಯದ ಶಕ್ತಿ ಪ್ರದರ್ಶನವನ್ನೂ ಅವರು ಮಾಡುತ್ತಿದ್ದಾರೆ. ಇದು ಬಹಳ ದಿನಗಳ ಸರ್ಕಾರವಲ್ಲ ಎಂದು ವ್ಯಂಗ್ಯವಾಡಿದರು.
ಅಧಿಕಾರದ ಆಸೆಗೆ ಬಿಜೆಪಿ ಸಂಗ ಮಾಡಿದ ಜೆಡಿಎಸ್‌ನ ನಿಜ ಬಣ್ಣ ಬಯಲು: ಸಚಿವ ತಿಮ್ಮಾಪೂರ
ರಾಜ್ಯದ ಜನ ಛೀ.. ಥೂ.. ಎನ್ನುತ್ತಿದ್ದಾರೆ!
ಅಬಕಾರಿ ಸಚಿವ ತಿಮ್ಮಾಪೂರ ಅವರೇ 3 ಸಾವಿರ ಜನಸಂಖ್ಯೆ ಇರುವ ಹಳ್ಳಿಗಳಲ್ಲಿ ಶೀಘ್ರದಲ್ಲಿ ಬಾರ್ ಓಪನ್ ಮಾಡುತ್ತೇವೆ ಎಂದು ಹೇಳಿದ್ದಾರೆ. ರಾಜ್ಯದ ಜನರು ಇದಕ್ಕೆ ಛೀ... ಥೂ... ಎಂದು ಬೈದ ನಂತರ ಸಿಎಂ ಮೊನ್ನೆ ಬಾರ್ ತೆರೆಯುವ ಪ್ರಸ್ತಾಪ ಇಲ್ಲ ಎಂದು ಹೇಳಿಕೆ ನೀಡಿ ತೇಪೆ ಹಚ್ಚುವ ಕೆಲಸ ಮಾಡಿದರು. ಆದರೆ, ತಕ್ಷಣ ಡಿಸಿಎಂ ಡಿಕೆಶಿ ಇದಕ್ಕೆ ಕೌಂಟರ್ ನೀಡಿ, ನಾವು ಉದ್ಯೋಗ ಸೃಷ್ಟಿ ಮಾಡಲು ಬಾರ್‌ಗಳನ್ನು ತೆರೆದೇ ತೆರೆಯುತ್ತೇವೆ ಎಂದು ಹೇಳಿದರು. ಇದು ಎಂಥ ಕೆಟ್ಟ ಸರ್ಕಾರ. ಇಲ್ಲಿ ಸಿಎಂ ಅವರನ್ನು ನಂಬುವುದೋ, ಡಿಸಿಎಂ ಅವರನ್ನು ನಂಬುವುದೋ ತಿಳಿಯುತ್ತಿಲ್ಲ. ಇಂಥ ಕೆಟ್ಟ ಸರ್ಕಾರ ಈ ರಾಜ್ಯದಲ್ಲಿ ಇರಬೇಕಾ? ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಖರ್ಗೆ ಮುಳುಗುತ್ತಿರುವ ಹಡಗಿನ ಪ್ರೆಸಿಡೆಂಟ್
ಮುಂಬರುವ ಪಂಚ ರಾಜ್ಯ ಚುನಾವಣೆ ಬಿಜೆಪಿಗೆ ಸೆಂಡ್ ಆಫ್ ಕಾರ್ಯಕ್ರಮ ಆಗಲಿದೆ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕಾರಜೋಳ, ಈ ಐದೂ ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಖರ್ಗೆ ಅವರಿಗೆ ಖಂಡಿತ ನಿರಾಸೆ ಕಾದಿದೆ. ಖುದ್ದು ಕಾಂಗ್ರೆಸ್ ಪಕ್ಷವೇ ಅವಸಾನದ ಅಂಚಿನಲ್ಲಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಮುಳುಗುತ್ತಿರುವ ಕಾಂಗ್ರೆಸ್ ಹಡಗಿಗೆ ಪ್ರೆಸಿಡೆಂಟ್ ಆಗಿದ್ದಾರೆ. ಪಾಪ ಪ್ರೆಸಿಡೆಂಟ್ ಆಗಿ ಏನಾದರೂ ಹೇಳಬೇಕು ಎಂದು ತಳಬುಡವಿಲ್ಲದ ಹೇಳಿಕೆ ಕೊಡುತ್ತಿದ್ದಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.