ನವದೆಹಲಿ (ನ. 27): ವೀರ ರಾಜನಿದ್ದಾಗ ಜಾಣ ಮಂತ್ರಿ ಹೋದರೆ ಇನ್ನೊಬ್ಬನನ್ನು ತರಬಹುದು. ಆದರೆ ರಾಜವಂಶವೇ ಸಂಕಟದಲ್ಲಿರುವಾಗಲೇ ಮಂತ್ರಿಯೂ ಹೋದರೆ ಕಥೆಯೇನು? ಅಹ್ಮದ್‌ ಪಟೇಲ್ ಇಲ್ಲದ ಕಾಂಗ್ರೆಸ್‌ ಮತ್ತು ಗಾಂಧಿ ಕುಟುಂಬದ ಸ್ಥಿತಿ ಹೀಗೇ ಆಗಿದೆ. ಗಾಂಧಿ ಕುಟುಂಬ ಇಲ್ಲದ ಕಾಂಗ್ರೆಸ್‌ ಬದುಕುವುದೂ ಕಷ್ಟಹೌದು.

ಆದರೆ ಇವತ್ತಿನ ಸ್ಥಿತಿಯಲ್ಲಿ ಪಕ್ಕಾ ನಿಷ್ಠಾವಂತ ಅಹ್ಮದ್‌ ಭಾಯಿ ನಿಧನದ ನಂತರ ಗಾಂಧಿ ಕುಟುಂಬದ ವರ್ಚಸ್ಸು ಉಳಿಯುತ್ತಾ? ಉತ್ತರ ಕೊಡುವುದು ಕಷ್ಟ. 2005ರಲ್ಲಿ ಬಿಜೆಪಿಯ ಎಲ್ಲಾ ರಹಸ್ಯ ಗೊತ್ತಿದ್ದ ಪ್ರಮೋದ್‌ ಮಹಾಜನ್‌ ಸಾವನ್ನಪ್ಪಿದಾಗ ಅಡ್ವಾಣಿ ಸ್ಥಿತಿ ಎನಿತ್ತೋ, ಇವತ್ತು ಸೋನಿಯಾ ಗಾಂಧಿ ಸ್ಥಿತಿ ಹಾಗೇ ಆಗಿದೆ. ಸೋನಿಯಾರದು ಬರೀ ಹೆಸರು ಮಾತ್ರ. ಆದರೆ ಕಾಂಗ್ರೆಸ್‌ ಪಕ್ಷ ಸಂಘಟನೆ, ದುಡ್ಡು ಕಾಸು, ಮಿತ್ರರು, ಶತ್ರುಗಳು, ತಂತ್ರಗಳು, ಕುತಂತ್ರಗಳು, ಜೊತೆಗೆ ಒಳಗಿನ ನೂರೆಂಟು ಬಣಗಳನ್ನು 21 ವರ್ಷದಿಂದ ಸಂಭಾಳಿಸುತ್ತಿದ್ದ ಅಹ್ಮದ್‌ ಪಟೇಲ್ ಸಾವು ಕಾಂಗ್ರೆಸ್‌ ಅನ್ನು ವಿಘಟಿಸಿದರೂ ಆಶ್ಚರ್ಯವಿಲ್ಲ.

ಶಿರಾ, ಆರ್‌ಆರ್ ನಗರ ಉಪಚುನಾವಣೆಗಾದ ಖರ್ಚೆಷ್ಟು?

ಸೋನಿಯಾರ ಕಣ್ಣು ಕಿವಿ ಮೂಗು

ತಳಮಟ್ಟದ ರಾಜಕೀಯ ಸಮೀಕರಣ ಗೊತ್ತಿರದೇ ಇದ್ದರೂ ಸೋನಿಯಾ ದೇಶ ಆಳಲು ಮುಖ್ಯ ಕಾರಣ ಅಹ್ಮದ್‌ ಭಾಯಿ ಪಟೇಲ್ ಒಂದು ರೀತಿಯಲ್ಲಿ ಸೋನಿಯಾರ ಕಣ್ಣು, ಕಿವಿ, ಮೂಗು ಎಲ್ಲವೂ ಅಹ್ಮದ್‌ ಪಟೇಲ… ಅವರೇ. ಕರ್ನಾಟಕದಲ್ಲಿ ಸಿದ್ದರಾಮಯ್ಯರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬರುವುದು, ಶಿವಸೇನೆ ಜೊತೆ ಮೈತ್ರಿ, ಅಶೋಕ್‌ ಗೆಹ್ಲೋಟ್‌ ಸರ್ಕಾರ ಉಳಿಸಿದ್ದು, ಪ್ರಣಬ್‌ ದಾ ಅವರನ್ನು ರಾಷ್ಟ್ರಪತಿ ಮಾಡಿದ್ದು ಎಲ್ಲವೂ ಅಹ್ಮದ್‌ ಭಾಯಿ ನಿರ್ಣಯಗಳೇ. ಆದರೆ ಹೆಸರಷ್ಟೇ ಸೋನಿಯಾರದ್ದು. ಮೋದಿ ಅವರಿಗೆ ಅಮಿತ್‌ ಶಾ ಮುಂದೆ ನಿಂತು ಏನು ತಂತ್ರ ಹೆಣೆಯುತ್ತಾರೋ, ಸೋನಿಯಾರಿಗೆ ತೆರೆಯ ಹಿಂದೆ ನಿಂತು ತಂತ್ರಗಾರಿಕೆ ಅಹ್ಮದ್‌ ಭಾಯಿ ಮಾಡುತ್ತಿದ್ದರು.

ಅತ್ತೆ ಮತ್ತು ಗಂಡನ ನಿಧನದ ನಂತರ ರಾಜಕೀಯ ನಿರ್ಣಯ ತೆಗೆದುಕೊಳ್ಳಲು ಸೋನಿಯಾ ಅವರು ಅಹ್ಮದ್‌ ಪಟೇಲ್ ಮೇಲೆಯೇ ಅವಲಂಬಿತರಾಗಿದ್ದರು. ಅಹ್ಮದ್‌ ಪಟೇಲ… ಅಳೆದು ತೂಗಿ ಸಲಹೆ ನೀಡುತ್ತಿದ್ದರು. ಸೋನಿಯಾ ಕಣ್ಣು ಮುಚ್ಚಿ ಆದೇಶ ಹೊರಡಿಸುತ್ತಿದ್ದರು ಅಷ್ಟೇ. ಕಳೆದ 20 ವರ್ಷದಲ್ಲಿ ಗಾಂಧಿ ಕುಟುಂಬಕ್ಕೆ ಏನೆಲ್ಲಾ ಒಳ್ಳೆಯದು, ಕೆಟ್ಟದ್ದು ಆಗಿದೆ ಅದರಲ್ಲಿ ಅಹ್ಮದ್‌ ಪಟೇಲ್‌ ಅವರ ಪಾಲಿದೆ.

ಕಾಂಗ್ರೆಸ್‌ನಲ್ಲಿ ಪರಸ್ಪರ ಕಚ್ಚಾಡುವ 108 ಬಣಗಳಿವೆ. ಆದರೆ ಅವು ರಾಜಸತ್ತೆಯ ಅಂದರೆ ಸೋನಿಯಾ ವಿರುದ್ಧ ತಿರುಗಿ ಬೀಳದಂತೆ ನೋಡಿಕೊಂಡಿದ್ದು ಮಾತ್ರ ಅಹ್ಮದ್‌ ಪಟೇಲ್ ವಿಪರ್ಯಾಸ ಅಂದರೆ ಸೋನಿಯಾ ಎಷ್ಟುಅಹ್ಮದ್‌ರನ್ನು ನಂಬುತ್ತಿದ್ದರೋ ಪುತ್ರ ರಾಹುಲ್‌ಗೆ ಅಷ್ಟೇ ಅಪನಂಬಿಕೆ ಇತ್ತು.

ಬಿಹಾರದಂತಹ ಕ್ಲಿಷ್ಟ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಲ್ಲೂ ಮೋದಿ ಮಾಡಿದ ಮ್ಯಾಜಿಕ್ ಏನು?

ಕಾಂಗ್ರೆಸ್‌ ಸಂಸ್ಕೃತಿ ರಕ್ಷಕರು

ಪಂಡಿತ ನೆಹರುರಿಗೆ ಚಮಚಾಗಳು ಕಡಿಮೆ. ಪಂಡಿತ್‌ ಜಿ ಒಬ್ಬ ಬುದ್ಧಿಜೀವಿ ಜೊತೆಗೆ ಭಾವನಾ ಜೀವಿ. ಆದರೆ ಇಂದಿರಾರಿಂದ ಈಗ ರಾಹುಲ…ವರೆಗೆ ಕಾಂಗ್ರೆಸ್‌ಅನ್ನು ನಡೆಸುತ್ತಿರುವುದು ಕೆಲ ನಿಷ್ಠಾವಂತರು ಮತ್ತು ಶುದ್ಧ ಚಮಚಾಗಳು. ಇಂದಿರಾ ಎಷ್ಟೇ ಪವರ್‌ಫುಲ್ ಆಗಿದ್ದರೂ ಪುತ್ರ ಸಂಜಯ್‌ ಸ್ಟೆನೋಗ್ರಾಫರ್‌ ಆರ್‌.ಕೆ.ಧವನ್‌, ಕಾರ್ಯದರ್ಶಿ ಎಂ. ಎಲ್ ಫೋತೆದಾರ್‌ ಮಾತು ತುಂಬಾ ಕೇಳುತ್ತಿದ್ದರು. ರಾಜೀವ್‌ ಅವಧಿಯಲ್ಲಿ ಮಿತ್ರರಾದ ಅರುಣ್‌ ಸಿಂಗ್‌, ಅರುಣ್‌ ನೆಹರು, ಅಮಿತಾಭ್‌ ಬಚ್ಚನ್‌, ಸುಮನ್‌ ದುಬೆರದ್ದೇ ಸಾಮ್ರಾಜ್ಯ.

ರಾಜಕೀಯ ಎಂದರೇನು ಗೊತ್ತಿರದ ಸೋನಿಯಾರನ್ನು ಕೆಲ ದಿವಸ ಅವರ ಸ್ಟೆನೋಗ್ರಾಫರ್‌ ವಿನ್ಸೆಂಟ್‌ ಜಾಜ್‌ರ್‍ ನಿಯಂತ್ರಿಸಿದರು. ಆದರೆ ಅವರನ್ನೆಲ್ಲ ದೂರ ಸರಿಸಿ ಸೋನಿಯಾರಿಗೆ ಪೂರ್ತಿ ನಿಷ್ಠೆ ತೋರಿಸಿ, ದರ್ಬಾರಿ ಆಗಿ 20 ವರ್ಷ ಆವರಿಸಿಕೊಂಡವರೆಂದರೆ ಶತ ಪ್ರತಿಶತ ನಿಷ್ಠಾವಂತ ಅಹ್ಮದ್‌ ಪಟೇಲ್‌. 10 ವರ್ಷ ದೇಶವನ್ನೇ ನಡೆಸಿದರೂ ಅಹ್ಮದ್‌ ಭಾಯಿ ಒಂದು ಹಳೆಯ ಹೋಂಡಾ ಗಾಡಿ ಓಡಿಸುತ್ತಾ ಲ್ಯುಟಿನ್ಸ್‌ ದಿಲ್ಲಿಯಲ್ಲಿ ಕಾಣಿಸುತ್ತಿದ್ದರು.

ಸರ್ಕಾರ ಇದ್ದಾಗಲೂ ಎಳ್ಳಷ್ಟೂಭದ್ರತೆ ಇಲ್ಲದೆ ಸ್ವಂತ ಕಾರು ಓಡಿಸಿಕೊಂಡು ಕಾಂಗ್ರೆಸ್‌ ಆಫೀಸಿಗೆ ಬರುತ್ತಿದ್ದ ಅಹ್ಮದ್‌ ಪಟೇಲ್ ನಿವಾಸ 23 ಮದರ್‌ ತೇರೇಸಾ ಕ್ರೇಸೆಂಟ್‌ನಲ್ಲಿ ರಾತ್ರಿ 2 ಗಂಟೆ ವರೆಗೆ ದರ್ಬಾರ್‌ ನಡೆಯುತ್ತಿತ್ತು. ದಿಲ್ಲಿಗೆ ಕಾಂಗ್ರೆಸ್‌ನ ಯಾರೇ ಬರಲಿ ಅಲ್ಲಿ ಹಾಜರಿ ಹಾಕೋದು ಅನಿವಾರ್ಯ ಆಗಿತ್ತು. ಒಂದು ಕಾಲದಲ್ಲಿ ಗಾಂಧಿಗಳ ಗೇಟ್‌ ಕಾಯುವ ಪಹರೆಯವನಿಗೂ ಕಾಂಗ್ರೆಸ್‌ ಮುಖ್ಯಮಂತ್ರಿಗಳು ಮುಜರಾ ಮಾಡುತ್ತಿದ್ದರು; ಇನ್ನು ಅಹ್ಮದ್‌ ಭಾಯಿಗೆ ಕೇಳಬೇಕೆ? ಕಾಂಗ್ರೆಸ್‌ನ ಸಂಸ್ಕೃತಿ ಪೋಷಣೆಯಲ್ಲಿ ಅಹ್ಮದ್‌ ಪಟೇಲ್‌ ಅವರ ಕೊಡುಗೆ ಬಹಳ ಇದೆ.

ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ,