ಬೆಂಗಳೂರು (ನ. 20): ಆರ್‌ಆರ್‌ ನಗರ ಮತ್ತು ಶಿರಾ ಉಪ ಚುನಾವಣೆಗಳಲ್ಲಿ ಆಗಿರುವ ಖರ್ಚಿನ ಬಾಬ್ತು ಕೇಳಿ ಸ್ವತಃ ದಿಲ್ಲಿ ನಾಯಕರೇ ಬೇಸ್ತು ಬಿದ್ದಿದ್ದಾರೆ. ಒಬ್ಬ ಉನ್ನತ ನಾಯಕರು ಹಿಂದಿ ಪತ್ರಕರ್ತರಿಗೆ ಹೇಳಿರುವ ಪ್ರಕಾರ, ಎರಡು ಉಪ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮಾಡಿರುವ ಖರ್ಚಿನಲ್ಲಿ ಬಿಹಾರದ 120 ಕ್ಷೇತ್ರಗಳ ಖರ್ಚು ನಿಭಾಯಿಸಬಹುದು.

ಅಂದಹಾಗೆ, ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲೂ ಹಣ ನೀರಿನಂತೆ ಹರಿದಿದೆ. ಪದವೀಧರ ಮತದಾರರ ಪ್ರತಿ ವೋಟಿಗೆ ಉಭಯ ಪಕ್ಷಗಳು 800ರಿಂದ 1000 ರುಪಾಯಿ ನೀಡಿವೆಯಂತೆ. ದೊಡ್ಡ ದೊಡ್ಡ ಸಿದ್ಧಾಂತದ ಚರ್ಚೆ ಒಂದು ಕಡೆ, ಪ್ರಜಾಪ್ರಭುತ್ವದ ಅಣಕ ಇನ್ನೊಂದು ಕಡೆ.

ಕೋವಿಡ್‌ ಲಸಿಕೆಯ ಗಡಿಬಿಡಿ

ಕೋವಿಡ್‌ ಲಸಿಕೆ ಬಿಡುಗಡೆಗಾಗಿ ಅಂತಾರಾಷ್ಟ್ರೀಯ ಔಷಧ ಕಂಪನಿಗಳಾದ ಫೈಝರ್‌ ಮತ್ತು ಮಾಡೆರ್ನಾ ನಡುವೆ ಪೈಪೋಟಿ ವಿಕೋಪಕ್ಕೆ ಹೋಗುತ್ತಿದೆ. ನಾ ಮೊದಲು ನೀ ಮೊದಲು ಎನ್ನುವಷ್ಟುಸ್ಪರ್ಧೆ ಜೋರಾಗಿದ್ದು, ಲಸಿಕೆಗೆ ಒಪ್ಪಿಗೆ ಸಿಗುವ ಮೊದಲೇ ಉತ್ಪಾದನೆ ಶುರುವಾಗಿ ಸ್ಟಾಕ್‌ ಮಾಡಿಡಲಾಗುತ್ತಿದೆ.

1955 ರಲ್ಲಿ ಪೋಲಿಯೋ ಲಸಿಕೆ ಬಂದಾಗ ಒಂದು ಅಮೆರಿಕನ್‌ ಕಂಪನಿ ತಪ್ಪಾಗಿ ಸಕ್ರಿಯ ಪೋಲಿಯೋ ವೈರಸ್ಸು ಇದ್ದ 50 ಸಾವಿರ ಸ್ಟಾಕ್‌ ಅನ್ನು ತರಾತುರಿಯಲ್ಲಿ ಮಾರುಕಟ್ಟೆಗೆ ಬಿಟ್ಟಿದ್ದರಿಂದ ಸಾವಿರಾರು ಮಕ್ಕಳಿಗೆ ಪಾಶ್ರ್ವವಾಯು ಬಡಿದಿತ್ತು. ಹೀಗಾಗಿ ಒಂದೆರಡು ವಾರ ತಡವಾದರೂ ಸರಿ ಪೂರ್ತಿ ಪರೀಕ್ಷೆ ನಡೆಸಿದ ನಂತರವೇ ಲಸಿಕೆ ಮಾರಾಟ ಮಾಡುವುದು ಒಳ್ಳೆಯದು. ಈಗಲೂ ಕೆಲ ಕಂಪನಿಗಳು ಗಡಿಬಿಡಿಯಲ್ಲಿ ಉತ್ಪಾದನೆ ಮಾಡಿ ದಾಸ್ತಾನು ಇಡುತ್ತಿವೆ.

ಸಂಪುಟ ವಿಸ್ತರಣೆ ಸರ್ಕಸ್ : ಬಿಜೆಪಿ ಹೈಕಮಾಂಡ್ ಮನಸ್ಸಿನಲ್ಲಿ ಏನಿದೆ?

ವಿಜಯೇಂದ್ರ ಬಗ್ಗೆ ಕುತೂಹಲ

ದಿಲ್ಲಿ ಬಿಜೆಪಿ ನಾಯಕರು ಮುಖ್ಯಮಂತ್ರಿ ಪುತ್ರ ವಿಜಯೇಂದ್ರರ ಬೆಳೆಯುತ್ತಿರುವ ಪ್ರಭಾವದ ಬಗ್ಗೆ ಕುತೂಹಲದಿಂದ ಇದ್ದಾರೆ. ಆದರೆ ಯಡಿಯೂರಪ್ಪ ವಿರೋಧಿ ಬಣ ಮಾತ್ರ ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ದಿಲ್ಲಿಗೆ ಮಾಹಿತಿ ಮುಟ್ಟಿಸುತ್ತಲೇ ಇದೆ.

ತಂದೆ ಮುಖ್ಯಮಂತ್ರಿ ಆದಾಗ ಮಗನಿಗೆ ಮೋದಿ, ಶಾ ಟಿಕೆಟ್‌ ಕೊಡೋದಿಲ್ಲ ಎಂದು ಗೊತ್ತಿರುವುದರಿಂದ ಯಡಿಯೂರಪ್ಪನವರು ವಿವಾದವೇ ಬೇಡವೆಂದು ಬಸವಕಲ್ಯಾಣಕ್ಕೆ ವಿಜಯೇಂದ್ರ ಆಕಾಂಕ್ಷಿಯೇ ಅಲ್ಲವೆಂದು ಘೋಷಿಸಿಬಿಟ್ಟಿದ್ದಾರೆ. ಆದರೆ ಹೈಕಮಾಂಡ್‌ಗೂ ಚೆನ್ನಾಗಿ ಗೊತ್ತಿದೆ; ಲಿಂಗಾಯತರಲ್ಲಿ ಯಡಿಯೂರಪ್ಪ ಬಿಟ್ಟರೆ ಬೇರೆ ನಾಯಕ ಇಲ್ಲವೆಂದು. ಹೀಗಾಗಿ ವಿಜಯೇಂದ್ರರನ್ನು ಬೆಳೆಯಲು ಬಿಟ್ಟರೂ ಕಷ್ಟ, ತಡೆಯಲು ಹೋದರೂ ಕಷ್ಟ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ