ಬಿಹಾರದಂತಹ ಕ್ಲಿಷ್ಟ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಲ್ಲೂ ಮೋದಿ ಮಾಡಿದ ಮ್ಯಾಜಿಕ್ ಏನು?
2005ರ ನಂತರ ಮೊದಲ ಬಾರಿಗೆ ಚುನಾವಣೆಯಲ್ಲಿ ಬಿಜೆಪಿಗಿಂತ ನಿತೀಶ್ ಸೀಟು ಕಡಿಮೆ ಆಗಿವೆ. ಇಷ್ಟು ವರ್ಷ ನಿತೀಶ್ ಜನಪ್ರಿಯತೆ ಮೇಲೆ ಎನ್‌ಡಿಎ ಗೆಲ್ಲುತ್ತಿತ್ತು. ಆದರೆ ಈಗ ನಿತೀಶ್ ಕುಸಿದರೂ ಮೋದಿಯಿಂದ ಒಕ್ಕೂಟ ಗೆದ್ದು ತೋರಿಸಿದೆ.
ನವದೆಹಲಿ (ನ. 12): ಪ್ರಬಲ ಆಸ್ಪ್ರೇಲಿಯಾ ವಿರುದ್ಧ ಅಪರೂಪಕ್ಕೆ ಶತಕ ಬಾರಿಸಿ ಗೆಲ್ಲುವ ಹಂತಕ್ಕೆ ತಂದಿದ್ದ ಬಾಂಗ್ಲಾದೇಶದ ಕಪ್ತಾನ ಇನ್ನೊಂದು ಬದಿಗೆ ನಿಂತಾಗ ಕೊನೆಯ ಓವರ್‌ನಲ್ಲಿ 4 ರನ್ ಬೇಕಾದಾಗ ಹಿರಿಯ ಆಟಗಾರ 2 ರನ್ ಹೊಡೆದರೆ ಏನಾಗಬಹುದು? ಕಾಂಗ್ರೆಸ್ಸನ್ನು ನಂಬಿದ್ದ ತೇಜಸ್ವಿ ಯಾದವ್ ಸ್ಥಿತಿ ಕೂಡ ಬಿಹಾರದಲ್ಲಿ ಹೀಗೇ ಆಗಿದೆ.
ತಂದೆ ಜೈಲಿನಲ್ಲಿದ್ದಾಗ 15 ವರ್ಷದ ನಿತೀಶ್ ಸರ್ಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಸಂದರ್ಭದಲ್ಲಿ ಕೂಡ ತೇಜಸ್ವಿ ಫಿನಿಶಿಂಗ್ ಲೈನ್ ಮುಟ್ಟಲಾಗದೆ ತಲೆ ಮೇಲೆ ಕೈಇಟ್ಟು ನಿಲ್ಲುವ ಪರಿಸ್ಥಿತಿ ತಂದಿದ್ದು ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷ. 243 ರಲ್ಲಿ ಕಾಡಿ ಬೇಡಿ 70 ಸೀಟು ತೆಗೆದುಕೊಂಡ ಕಾಂಗ್ರೆಸ್ ಗೆದ್ದಿದ್ದು ಕೇವಲ 18. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್‌ರನ್ನು ಮುಳುಗಿಸಿದ್ದ ಕಾಂಗ್ರೆಸ್, ಬಿಹಾರದಲ್ಲಿ ತೇಜಸ್ವಿ ಯಾದವ್‌ರ ಹಡಗನ್ನು ಮುಳುಗಿಸಿದೆ. ಇಷ್ಟೆಲ್ಲಾ ಆದ ಮೇಲೂ ಹೇಳಲೇಬೇಕು ‘ವೆಲ್ ಪ್ಲೇಯ್ಡ್ ತೇಜಸ್ವಿ ಯಾದವ್’ ಎಂದು.
ಪಶ್ಚಿಮ ಬಂಗಾಳದಲ್ಲಿ ಕೆಂಪು ಪಕ್ಷಗಳ ದೌರ್ಬಲ್ಯ ಏನು?
ಕೂದಲು ಎಳೆಯ ಅಂತರ
ಬಿಹಾರದಲ್ಲಿ ಮಹಾಗಠಬಂಧನಕ್ಕಿಂತ ಎನ್‌ಡಿಎ 13 ಸೀಟು ಜಾಸ್ತಿ ಪಡೆದರೂ ಶೇಕಡಾವಾರು ಮತಗಳ ಅಂತರ ಇರುವುದು ಕೇವಲ 0.03% ಅಷ್ಟೆ. ನಿಖರವಾಗಿ ಹೇಳಬೇಕೆಂದರೆ 12,768 ಮತಗಳ ಅಂತರ ಮಾತ್ರ. ಸುಮಾರು 10 ಕ್ಷೇತ್ರಗಳಲ್ಲಿ 900ಕ್ಕಿಂತ ಕಡಿಮೆ ಅಂತರಗಳಿಂದ ಮಹಾಗಠಬಂಧನ ಸೋತಿದೆ. 33 ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿದ್ದು, ಈ ಪೈಕಿ 26 ಬಿಜೆಪಿ ಗೆದ್ದಿದ್ದರೆ, 7ರಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. ಮುಸ್ಲಿಂ ಬಾಹುಳ್ಯದ ಸೀಮಾಂಚಲದ ಕ್ಷೇತ್ರಗಳನ್ನು ತೇಜಸ್ವಿ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದರು. ಆದರೆ ಅಲ್ಲಿ ಕೂಡ ಕಾಂಗ್ರೆಸ್‌ಗೆ ಜಾಸ್ತಿ ಗೆಲ್ಲಲು ಸಾಧ್ಯ ಆಗಿಲ್ಲ.
ಡೌಟೇ ಇಲ್ಲ, ಮೋದಿ ಪಂದ್ಯ ಶ್ರೇಷ್ಠ
ಸರ್ಕಾರಿ ವ್ಯವಸ್ಥೆಗೆ ಸವಾಲು ಎಸೆದ ಕೋವಿಡ್ ಮತ್ತು ಕುಸಿಯುತ್ತಿರುವ ಆರ್ಥಿಕತೆ ಡೊನಾಲ್ಡ್ ಟ್ರಂಪ್‌ರಂಥವರನ್ನೇ ಆಪೋಷನ ತೆಗೆದುಕೊಂಡಿದೆ. ಆದರೆ ಕೋವಿಡ್ ವಲಸಿಗರ ಸಮಸ್ಯೆಯ ಜೊತೆಗೆ 15 ವರ್ಷದ ಆಡಳಿತ ವಿರೋಧಿ ಅಲೆಯ ನಡುವೆಯೂ ಬಿಜೆಪಿ ಬಿಹಾರದಲ್ಲಿ ಗೆಲುವಿನ ದಡ ತಲುಪಲು ಕಾರಣ ಮೋದಿ ಹೆಸರಿಗೆ ಇರುವ ವಿಶ್ವಾಸಾರ್ಹತೆ. ಆಶ್ಚರ್ಯ ಎಂದರೆ ನಿತೀಶ್ ಕುಮಾರ್ ಅವರಿಗೆ ಆಡಳಿತ ವಿರೋಧಿ ಅಲೆ ಜೋರಾಗಿಯೇ ಬಡಿದಿದೆ. ಆದರೆ ಮೋದಿ ಕಾರಣದಿಂದ ಬಿಜೆಪಿಗೆ ಬಡಿದಿಲ್ಲ.
ಮೋದಿ ಅಂದುಕೊಂಡಿದ್ದನ್ನು ಜಾಣತನದಿಂದ ಸಾಧಿಸಿದ್ದಾರೆ. ನಿತೀಶ್‌ಗೆ ಅವರ ಜಾಗ ತೋರಿಸಿದ್ದಾರೆ, ಆದರೆ ಸರ್ಕಾರ ಉಳಿಸಿಕೊಂಡಿದ್ದಾರೆ. 15 ವರ್ಷದಲ್ಲಿ ಸಹಜವಾಗಿ ಮಡುಗಟ್ಟಿದ ಅಸಮಾಧಾನಗಳು, ಜನಪ್ರಿಯರಲ್ಲದ ರಾಜ್ಯ ನಾಯಕರು ಮತ್ತು ನಿರುದ್ಯೋಗದ ಕೂಗಿನ ಮಧ್ಯೆ ಜಾತಿ ಸೂಕ್ಷ್ಮವಾದ ಹಾಗೂ ರಾಜಕೀಯ ಪ್ರಾಜ್ಞ ಜನರನ್ನು ಹೊಂದಿರುವ ರಾಜ್ಯವನ್ನು ಗೆದ್ದುಕೊಳ್ಳುವುದು ಸುಲಭದ ಮಾತಲ್ಲ. ಎಷ್ಟೇ ಪ್ರತಿರೋಧವಿದ್ದರೂ ತನ್ನ ಜನಪ್ರಿಯತೆಯಿಂದ ಪಕ್ಷವನ್ನು ಇಳಿಜಾರಿನಲ್ಲಿ ಹಿಡಿದಿಡುವ ಶಕ್ತಿ ಇವತ್ತಿನ ಸಂದರ್ಭದಲ್ಲಿ ಪ್ರಧಾನಿಗಿದೆ.
ಬಂಗಾಳದಲ್ಲಿ ಮಮತಾ ಮಾಡುತ್ತಿರುವ ತಪ್ಪೇನು?
ದಿಲ್ಲಿಯಲ್ಲಿ ಅಧಿಕಾರ ಹಿಡಿದು 6 ವರ್ಷದ ನಂತರವೂ ಬಿಜೆಪಿ ಮತದಾರರು ಸ್ಥಳೀಯವಾಗಿ ಎಷ್ಟೇ ಅಸಮಾಧಾನ ಇದ್ದರೂ ಮೋದಿ ಕಾರಣದಿಂದ ಗಟ್ಟಿಯಾಗಿ ನಿಲ್ಲುತ್ತಾರೆ ಎಂಬುದೇ ಬಿಜೆಪಿಗಿರುವ ದೊಡ್ಡ ಲಾಭ. ಸ್ವಲ್ಪ ಮಟ್ಟಿಗೆ ಪುರುಷರು ನಿತೀಶ್‌ರಿಂದ ದೂರ ಹೋದರೂ ಮಹಿಳೆಯರು ಮೋದಿ ಮತ್ತು ನಿತೀಶ್ ಜೊತೆ ನಿಂತುಕೊಂಡಿದ್ದು ಎನ್‌ಡಿಎ ಅಧಿಕಾರ ಉಳಿಸಿಕೊಳ್ಳಲು ಕಾರಣ. ಇವತ್ತಿನ ಮಟ್ಟಿಗೆ ಮೋದಿ ಹೆಸರು, ಆರ್‌ಎಸ್‌ಎಸ್ ಪ್ರಣೀತ ಅಮಿತ್ ಶಾ ನೇತೃತ್ವದ ಸಂಘಟನೆ ಮತ್ತು ಸೌಕರ್ಯ ಕ್ರೋಢೀಕರಣದ ಸಮೀಕರಣವನ್ನು ಭೇದಿಸುವ ತಾಕತ್ತು ಯಾರಲ್ಲೂ ಕಾಣುತ್ತಿಲ್ಲ.
ಸೋತರೂ ಹೊಡೆತ ಕೊಟ್ಟ ಚಿರಾಗ್ ಕಿಂಗ್‌ಮೇಕರ್ ಆಗುವ ಕನಸು ಕಾಣುತ್ತಿದ್ದ ಚಿರಾಗ್ ಪಾಸ್ವಾನ್ 5.5 ಪ್ರತಿಶತ ಮತ ಪಡೆದು ಸ್ವತಃ ಸೋತು ಸುಣ್ಣವಾಗಿದ್ದಾರೆ. ಆದರೆ 27ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಿತೀಶ್‌ರನ್ನು ಕೆಡವಿ ಹಾಕಿ, ಜೆಡಿಯುವನ್ನು 60ರಿಂದ 45ರ ಕೆಳಗೆ ತಂದಿದ್ದಾರೆ.
ಚಿರಾಗರ ಪಾರ್ಟಿ ಪಡೆದ ಮತಗಳು 12ರಿಂದ 15 ಸಾವಿರ, ಜೆಡಿಯುನ ಸೋಲಿನ ಅಂತರ ಕೂಡ ಅಷ್ಟೇ. ಇನ್ನೊಂದು ವಿಷಯ ಎಂದರೆ, ಪಾಸ್ವಾನರ ಪಕ್ಷದಿಂದ ಸ್ಪರ್ಧಿಸಿದ್ದ ಬಿಜೆಪಿ ನಾಯಕರು ಸಂಘ ಪರಿವಾರ ಮೂಲದವರು. ಬರೀ ದಲಿತ, ಪಾಸ್ವಾನರ ಮತ ಇಟ್ಟುಕೊಂಡು ಚಿರಾಗ್ ಪಾಸ್ವಾನ್ ನಿತೀಶ್ ವಿರುದ್ಧ ಹೋಗುವ ಧೈರ್ಯ ಮಾಡಿರಲಾರರು. ನಿತೀಶರ ದುರ್ಬಲತೆಯಿಂದ ಲಾಭ ಯಾರಿಗೆ ಎನ್ನುವುದು ಕೂಡ ಮುಖ್ಯ. ಆದರೆ ಯಾರೋ ಹೇಳಿದಂತೆ ಮಾಡಲು ಹೋಗಿ ಚಿರಾಗ್ ಕೂಡ ಸದ್ಯಕ್ಕೆ ಪ್ರಸ್ತುತತೆ ಕಳೆದುಕೊಂಡಿದ್ದಾರೆ.
ಇನ್ನೆಷ್ಟು ದಿನ ನಿತೀಶ್?
2005ರ ನಂತರ ಮೊದಲ ಬಾರಿಗೆ ಚುನಾವಣೆಯಲ್ಲಿ ಬಿಜೆಪಿಗಿಂತ ನಿತೀಶ್ ಸೀಟು ಕಡಿಮೆ ಆಗಿವೆ. ಇಷ್ಟುವರ್ಷ ನಿತೀಶ್ ಜನಪ್ರಿಯತೆ ಮೇಲೆ ಎನ್‌ಡಿಎ ಗೆಲ್ಲುತ್ತಿತ್ತು. ಆದರೆ ಈಗ ನಿತೀಶ್ ಕುಸಿದರೂ ಮೋದಿಯಿಂದ ಒಕ್ಕೂಟ ಗೆದ್ದು ತೋರಿಸಿದೆ. ಅರ್ಥಾತ್, ನಿತೀಶ್ ಮುಖ್ಯಮಂತ್ರಿ ಆದರೂ ಮಿತ್ರರ ಮೇಲಿನ ಹಿಡಿತ ಕಳೆದುಕೊಳ್ಳಲಿದ್ದಾರೆ. ಪ್ರತಿಯೊಂದಕ್ಕೂ ಮೋದಿ ಕಡೆ ನೋಡುವುದು ನಿತೀಶ್‌ಗೆ ಅನಿವಾರ್ಯ. ತಕ್ಷಣಕ್ಕೆ ಮುಖ್ಯಮಂತ್ರಿ ಸ್ಥಾನದ ಮೇಲೆ ಬಿಜೆಪಿ ಮತ್ತು ಮೋದಿಗೆ ಕಣ್ಣಿಲ್ಲ. ಆದರೆ ನಿತೀಶ್ ನಂತರದ 15 ಪ್ರತಿಶತ ವೋಟಿನ ಮೇಲೆ ಕಣ್ಣಿದೆ. ಗುಜರಾತ್‌ನಲ್ಲಿ ಚಿಮನ್ ಭಾಯಿ ಪಟೇಲ್, ನಂತರ ಕರ್ನಾಟಕದಲ್ಲಿ ಹೆಗಡೆ, ಪಟೇಲರ ನಂತರ ಬಿಜೆಪಿ ಬಲಿಷ್ಠವಾಗಿ ಬೆಳೆದಿದ್ದು ಇದೇ ಜನತಾದಳದ ಶೂನ್ಯತೆಯಿಂದ ಅಲ್ಲವೇ? ಒಂದು ರೀತಿಯಲ್ಲಿ ನಿತೀಶ್ ಪಶ್ಚಿಮಾಭಿಮುಖದ ಸೂರ್ಯ.
ಈಗಿನ ಯುವಜನತೆ 'ಕೇಸರಿ'ಯತ್ತ ವಾಲುತ್ತಿರುವುದೇಕೆ?
ಎಕ್ಸಿಟ್ ಪೋಲ್ ತಪ್ಪಿದ್ದೆಲ್ಲಿ?
ಯಾವುದೇ ಸರ್ವೇ ಮಾಡುವ ಸಂಸ್ಥೆಗೆ ಎರಡಕ್ಕಿಂತ ಹೆಚ್ಚು ಪಕ್ಷಗಳು ಮತ್ತು ಕ್ಲೋಸ್ ಫೈಟ್ ಇರುವಲ್ಲಿ ನಿಖರವಾಗಿ ಹೇಳುವುದು ತ್ರಾಸದಾಯಕ. ಸರ್ವೇಯಲ್ಲಿ ಗಾಳಿ ಎತ್ತ ಕಡೆ ಎಂದು ಹೇಳುವುದು ವಿಜ್ಞಾನ. ಆದರೆ ಸಂಖ್ಯೆ ಹೇಳುವುದು ಒಂದು ಜೂಜು ಅಷ್ಟೆ. ಸರಿ ಇದ್ದರೆ ಭರಪೂರ ಪ್ರಶಂಸೆ, ಸುಳ್ಳಾದರೆ ಬೈಗುಳ. ಬಿಹಾರದಲ್ಲಿ ನಿತೀಶ್ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಎಂದು ಹೇಳಿದ್ದು ಸರಿ ಇತ್ತಾದರೂ ಲಾಭವನ್ನು ತೇಜಸ್ವಿ ಪಡೆದಂತೆ ಕಾಂಗ್ರೆಸ್ ಪಡೆಯೋದಿಲ್ಲ ಮತ್ತು ಓವೈಸಿ 20 ಕ್ಷೇತ್ರಗಳಲ್ಲಿ ಏಟು ಕೊಡುತ್ತಾರೆ ಎಂದು ಅಂದಾಜಿಸಲು ಸಾಧ್ಯ ಆಗಲಿಲ್ಲ.
ಗಂಡನ ಮಾತಿಗೆ ಜಾಸ್ತಿ ಮಹತ್ವ ಕೊಟ್ಟು, ಅದೇ ಮನೆಯ ಹೆಂಡತಿ ಏನೋ ಬೇರೆಯೇ ಹೇಳುತ್ತಿದ್ದಾಳೆ ಎಂದು ಗ್ರಹಿಸಲು ಸಾಧ್ಯವಾಗದೆ ಎಕ್ಸಿಟ್ ಪೋಲ್‌ಗಳು ಕೊಂಚ ಏರುಪೇರಾದವು. ಪ್ರತಿಯೊಂದು ಚುನಾವಣೆ ರಾಜಕೀಯ ಪಕ್ಷಗಳಿಗೆ ಹೇಗೋ, ಪತ್ರಕರ್ತರು ಮತ್ತು ಸರ್ವೇ ಕಂಪನಿಗಳಿಗೂ ಪಾಠವೇ. ಇನ್ನಷ್ಟುಭೂಮಿಗೆ ಕಿವಿ ಹಚ್ಚುವುದು ಒಂದೇ ಮಾರ್ಗ.
ಸ್ಟಾಲಿನ್, ಮಮತಾಗೆ ಚಿಂತೆ ಶುರು
2021ರಲ್ಲಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಚುನಾವಣೆಗಳು ನಡೆಯಲಿದ್ದು, ಬಿಹಾರದ ಮೋದಿ ಗೆಲುವು ಸ್ಟಾಲಿನ್ ಮತ್ತು ಮಮತಾರಿಗೆ ಸಮಸ್ಯೆ. ಕಾಂಗ್ರೆಸ್ ಜೊತೆ ಮೈತ್ರಿಯಲ್ಲಿರುವ ಸ್ಟಾಲಿನ್ ಕಳೆದ ಬಾರಿ 2016ರಲ್ಲಿ 41 ಸೀಟು ಕೊಟ್ಟಿದ್ದರು. ಅದರಲ್ಲಿ ಕಾಂಗ್ರೆಸ್ ಗೆದ್ದದ್ದು 8 ಮಾತ್ರ. ಹೀಗಾಗಿ ಈಗ ಕಡಿಮೆ ಸೀಟು ಕೊಡುವುದು ಸ್ಟಾಲಿನ್‌ಗೆ ಅನಿವಾರ್ಯ. ಇನ್ನು ಮೋದಿ ಜನಪ್ರಿಯತೆ ಕೋವಿಡ್ ನಂತರ ಕೂಡ ಹಾಗೇ ಉಳಿದಿರುವುದು ಮಮತಾಗೆ ಒಳ್ಳೆ ಸುದ್ದಿ ಏನಲ್ಲ. ಅದರಲ್ಲಿ ಹಿಂದುತ್ವ, ಬಾಂಗ್ಲಾದೇಶೀಯರು, ನಾಗರಿಕ ಕಾಯ್ದೆಗಳ ಮೇಲೆ ಮೋದಿಯನ್ನು ಎದುರಿಸುವುದು ಅತಿ ಕಷ್ಟ. ಓವೈಸಿ, ಕಾಂಗ್ರೆಸ್, ಎಡ ಪಕ್ಷಗಳ ಪ್ರತ್ಯೇಕ ಸ್ಪರ್ಧೆ ಮುಸ್ಲಿಮರ ಮತ ಇನ್ನಷ್ಟುವಿಭಜಿಸುತ್ತದೆ ಎನ್ನುವುದು ಮಮತಾ ಚಿಂತೆ ಹೆಚ್ಚಿಸಿರಬಹುದು.
- ಪ್ರಶಾಂತ್ ನಾತು, ದೆಹಲಿ ಪ್ರತಿನಿಧಿ
'ಇಂಡಿಯಾ ಗೇಟ್', ದೆಹಲಿಯಿಂದ ಕಂಡ ರಾಜಕಾರಣ