BS Yadiyurappa: 40 ವರ್ಷಗಳ ಬಳಿಕ ವಿಧಾನಸೌಧದ ನಂಟು ಕಳಚಿದ ರಾಜಾಹುಲಿ!

 ಪುರಸಭಾ ಸದಸ್ಯರಾಗಿ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟು, ಏಕಾಂಗಿಯಾಗಿ ಪಕ್ಷ ಕಟ್ಟಿ, ಕರ್ನಾಟಕ ಚುನಾವಣಾ ರಾಜಕೀಯದಲ್ಲಿ ಬೆಂಕಿ ಬಿರುಗಾಳಿಯಂತೆ ಮಿಂಚಿ, ಬೆಳಗಿ, ಇತಿಹಾಸ ಸೃಷ್ಟಿಸಿ, ಅದೇ ಗತ್ತು-ಗೈರತ್ತಿನಲ್ಲಿಯೇ ವಿಧಾನಸಭೆಯಿಂದ ಹೊರಟ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಎಂದೂ ಮರೆಯದ ಮಾಣಿಕ್ಯವಾಗಿ ಉಳಿದಿದ್ದಾರೆ

After 40 years Rajahuli has lost its connection with Vidhana Soudha rav

ಗೋಪಾಲ್‌ ಯಡಗೆರೆ

ಶಿವಮೊಗ್ಗ (ಫೆ.25) : ಪುರಸಭಾ ಸದಸ್ಯರಾಗಿ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟು, ಏಕಾಂಗಿಯಾಗಿ ಪಕ್ಷ ಕಟ್ಟಿ, ಕರ್ನಾಟಕ ಚುನಾವಣಾ ರಾಜಕೀಯದಲ್ಲಿ ಬೆಂಕಿ ಬಿರುಗಾಳಿಯಂತೆ ಮಿಂಚಿ, ಬೆಳಗಿ, ಇತಿಹಾಸ ಸೃಷ್ಟಿಸಿ, ಅದೇ ಗತ್ತು-ಗೈರತ್ತಿನಲ್ಲಿಯೇ ವಿಧಾನಸಭೆಯಿಂದ ಹೊರಟ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಎಂದೂ ಮರೆಯದ ಮಾಣಿಕ್ಯವಾಗಿ ಉಳಿದಿದ್ದಾರೆ.

ಶುಕ್ರವಾರ ವಿಧಾನಸಭೆ(Assembly)ಯಲ್ಲಿ ತಮ್ಮ ಕೊನೆಯ ವಿದಾಯ ಭಾಷಣ ಮಾಡುವ ಮೂಲಕ ಮತ್ತೆ ವಿಧಾನಸೌಧ(Vidhanasoudha)ದ ಸದನದ ಅಂಗಳಕ್ಕೆ ಕಾಲಿಡುವ ಅವಕಾಶದಿಂದ ದೂರ ಹೊರಟ ಯಡಿಯೂರಪ್ಪ(BS Yadiyurappa) ತಮ್ಮ ಸುದೀರ್ಘ 40 ವರ್ಷಗಳ ಕಾಲದ ಚುನಾವಣಾ ರಾಜಕಾರಣಕ್ಕೆ ವಿದಾಯ ಹೇಳಿದ್ದಾರೆ.

Shivamogga: 27ಕ್ಕೆ ಏರ್‌​ಪೋರ್ಟ್ ಉದ್ಘಾ​ಟ​ನೆ: 1 ಲಕ್ಷ ಆಸನಗಳ ವ್ಯವಸ್ಥೆ- ಡಿಸಿ

1983ರ ಮೇ ತಿಂಗಳಲ್ಲಿ ಮೊದಲ ಬಾರಿಗೆ ಸದನ ಪ್ರವೇಶಿಸಿದ ಯಡಿಯೂರಪ್ಪ ಮೊದಲ ಅಧಿವೇಶನದಲ್ಲಿಯೇ ತಮ್ಮ ಸಾಮರ್ಥ್ಯದ ಕುರುಹು ತೋರಿದ್ದರು. ಎ.ಕೆ. ಸುಬ್ಬಯ್ಯ(AK Subbaiah), ವಿ.ಎಸ್‌. ಆಚಾರ್ಯ(VS Accharya) ಮತ್ತಿತರ ಘಟಾನುಘಟಿಗಳ ನಡುವೆ ತಮ್ಮ ಛಾಪು ತೋರುವ ಸವಾಲು ಹೊಂದಿದ್ದ ಯಡಿಯೂರಪ್ಪ ಎಚ್ಚರಿಕೆಯ ಮತ್ತು ಕಲಿಕೆಯ ಗುಣಗಳನ್ನು ಮೈಗೂಡಿಸಿಕೊಂಡು ಮುಂದಡಿಯಿಟ್ಟರು. ಶಿಕಾರಿಪುರದಲ್ಲಿ ತಾವು ರೂಪಿಸಿದ ಹೋರಾಟಗಳ ಹಾದಿಯನ್ನು ಬಿಜೆಪಿ ನಾಯಕರಿಗೆ ವಿವರಿಸಿದರು. ಇದುವರೆಗೆ ಹಳ್ಳಿಗಾಡಿನಲ್ಲಿ ಇಂತಹ ಹೋರಾಟ ರೂಪಿಸದೇ ಇದ್ದ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಹೋರಾಟ ಅಚ್ಚರಿ ಮೂಡಿಸಿತ್ತು. ಆರಂಭದಲ್ಲಿ ಇದನ್ನು ಗಮನಕ್ಕೆ ಹಾಕಿಕೊಳ್ಳದ ನಾಯಕರು ನಿಧಾನವಾಗಿ ಯಡಿಯೂರಪ್ಪ ಸಾಮರ್ಥ್ಯದ ಕಡೆ ಕಣ್ಣು ಹಾಯಿಸಿದ್ದರು.

1985ರಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ, 1988 ರಲ್ಲಿ ರಾಜ್ಯಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದರು. ರಾಜ್ಯ ಬಿಜೆಪಿ ಹಾದಿಯಲ್ಲಿ ಇದೊಂದು ಮಹತ್ವದ ತಿರುವು, ಹೊಸ ಮೈಲಿಗಲ್ಲು. ರಾಜ್ಯದಲ್ಲಿ ಬಿಜೆಪಿ ಸಂಘಟನೆಯ ಚಿತ್ರಣವನ್ನೇ ಬದಲು ಮಾಡಿದರು. ನಗರ ಪಕ್ಷ ಎಂಬ ಹಣೆಪಟ್ಟಿಹೊತ್ತಿದ್ದ ಬಿಜೆಪಿಯನ್ನು ಗ್ರಾಮೀಣದತ್ತ ಒಯ್ದರು. ಮತ್ತೆಂದೂ ಹಿಂದಿರುಗಿ ನೋಡದೆ ಬಿಜೆಪಿಯ ಎತ್ತರದತ್ತಲೇ ದೃಷ್ಟಿಇಟ್ಟರು. ಕೊನೆಗೆ ಅಧಿಕಾರದಲ್ಲಿ ಕೂರಿಸುವಷ್ಟರ ಮಟ್ಟಿಗೆ ಬೆಳೆಸಿದರು. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಬ್ಬಾಗಿಲು ತೆರೆದರು. ‘ಬಿಜೆಪಿ ಎಂದರೆ ಯಡಿಯೂರಪ್ಪ’ ಎಂಬ ಮಾತಿಗೆ ಪುಷ್ಠಿಯಾದರು. ಇದೇ ವೇಳೆಗೆ ಸದನದ ಒಳಗೆ ಒಬ್ಬ ಜನಪ್ರತಿನಿಧಿ, ಹೋರಾಟಗಾರ, ಜನರ ಸಮಸ್ಯೆಗಳ ಬಗ್ಗೆ ಆಳ ಅಗಲದ ಅಧ್ಯಯನದೊಂದಿಗೆ ಆಡುತ್ತಿದ್ದ ಮಾತುಗಳ ಮೂಲಕ ಯಡಿಯೂರಪ್ಪ ಎಂದರೆ ಬೆಂಕಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಕೊನೆಗೆ ಯಡಿಯೂರಪ್ಪ ಘರ್ಜಿಸಿದರೆ ವಿಧಾನಸೌಧ ನಡುಗುವುದು ಎಂಬ ದೃಷ್ಟಾಂತದ ಮಾತಿನಲ್ಲಿಗೆ ಬಂದು ನಿಂತರು.

ಇದು ಯಡಿಯೂರಪ್ಪ. ಅವರಿಗೆ ಅವರೇ ಸಾಟಿ. ಅವರನ್ನು ಹೊರತುಪಡಿಸಿದ ಬಿಜೆಪಿಯನ್ನು ಊಹಿಸಲು ಸಾಧ್ಯವಿಲ್ಲದ ಮಾತು ಎಂಬುದು ಪ್ರತಿ ಕಾರ್ಯಕರ್ತರ ಮಾತು. ಇದು ಪ್ರತಿ ಹಂತದಲ್ಲಿಯೂ ನಿಜವಾಗುತ್ತಲೇ ಬಂದಿದೆ. ಇದೆಲ್ಲ ರಾಜಕಾರಣದ ಮಾತು. ಮೇಲ್ನೋಟಕ್ಕೆ ಯಡಿಯೂರಪ್ಪ ಎಂದರೆ ಬೆಂಕಿ ಚೆಂಡು, ಸಿಟ್ಟಿನ ವ್ಯಕ್ತಿ ಎಂಬ ಮಾತು ಕೇಳಿ ಬರುತ್ತಲೇ ಇದೆ.

ಎಷ್ಟೋ ಬಾರಿ ಒರಟು ಮಾತುಗಳು ಆಡಿದ್ದಿದೆ. ಆದರೆ ಯಡಿಯೂರಪ್ಪ ಒಳಗೊಬ್ಬ ಮೃದು, ಮಾತೃಹೃದಯಿ ವ್ಯಕ್ತಿತ್ವವಿದೆ ಎಂಬುದು ಅವರನ್ನು ಹತ್ತಿರದಿಂದ ಬಲ್ಲ ಎಲ್ಲರ ಅರಿವಿಗೆ ಬಂದಿರುವ ವಿಚಾರ. ಕಷ್ಟದಲ್ಲಿ ಇದ್ದವರನ್ನು ಕಂಡರೆ ಕರಗಿಬಿಡುತ್ತಾರೆ. ಕಷ್ಟಪರಿಹರಿಸಲು ಏನಾದರೂ ಮಾಡಲು ತವಕಿಸುತ್ತಾರೆ. ಅಂದುಕೊಂಡ ಕೆಲಸ ಆಗದಿದ್ದಾಗ ಕಠಿಣವಾಗಿ ಮಾತನಾಡುತ್ತಾರೆ. ಅಧಿಕಾರಿಗಳನ್ನು, ಕಾರ್ಯಕರ್ತರನ್ನು, ನಾಯಕರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಆದರೆ ಇದುವರೆಗೆ ಯಾವುದೇ ಕಾರ್ಯಕರ್ತ, ಅಧಿಕಾರಿ, ನಾಯಕ ಎಂದೂ ಯಡಿಯೂರಪ್ಪ ಅವರಿಂದ ಬೇಸರಗೊಂಡಿಲ್ಲ. ಅದಮ್ಯವಾಗಿ ಪ್ರೀತಿಸುವ ವ್ಯಕ್ತಿಗೆ ಮಾತ್ರ ತಮ್ಮನ್ನು ಗದರಿಸುವ ಅಧಿಕಾರವಿದೆ ಎಂದುಕೊಳ್ಳುತ್ತಾರೆ. ಯಡಿಯೂರಪ್ಪ ನೀಡಿದ ನೆರವು, ಮಾಡಿದ ಉಪಕಾರವನ್ನು ನೆನಪು ಮಾಡಿಕೊಳ್ಳುತ್ತಾರೆ. ತಮ್ಮ ತಲೆಗೆ ಬಂದ ಯಾವುದೇ ಕೆಲಸ ಆಗುವ ತನಕ ಅದರ ಜೊತೆ ಹೋಗುತ್ತಾರೆ. ಯಾರಿಗಾದರೂ ಮಾತುಕೊಟ್ಟಿದ್ದರೆ ಮರೆಯದೇ ಆ ಕೆಲಸ ಮಾಡಿ ಅವರು ಸಿಕ್ಕಾಗ ಅದರ ಮಾಹಿತಿ ನೀಡುತ್ತಾರೆ. ದಾಖಲೆಗಳಿದ್ದರೆ ಜೇಬಿನಿಂದ ತೆಗೆದುಕೊಡುತ್ತಾರೆ. ಈ ಅನುಭವ ಅವರ ಹತ್ತಿರದಲ್ಲಿ ಇದ್ದವರಿಗೆಲ್ಲ ಆಗಿದೆ. ಒಮ್ಮೆ ನಂಬಿದರೆ ಅವರನ್ನೆಂದೂ ಕೈ ಬಿಟ್ಟಉದಾಹರಣೆಯೇ ಇಲ್ಲ ಎನ್ನುವುದು ಹತ್ತಿರದವರ ಮಾತು.

Karnataka Election 2023: ಅಮಿತ್‌ ಶಾ ಭಾಷಣ 8ನೇ ಅದ್ಭುತ: ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯ

ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾದ ಬಳಿಕ ಇಡೀ ರಾಜ್ಯದ ಜೊತೆಗೆ ಶಿಕಾರಿಪುರ ಮತ್ತು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯ ಕಡೆಗೆ ಅವರು ತೋರಿದ ಕಾಳಜಿ, ಬದ್ಧತೆಯನ್ನು ಶಿವಮೊಗ್ಗದ ಜನ ಮರೆಯಲಾಗದು. ವಿಪಕ್ಷ ಮುಖಂಡರು ಕೂಡ ಈ ವಿಷಯದಲ್ಲಿ ಯಡಿಯೂರಪ್ಪನವರ ತಂಟೆಗೆ ಬರುವುದಿಲ್ಲ. ತೆರೆಮರೆಯಲ್ಲಿ ನಿಂತು ಯಡಿಯೂರಪ್ಪ ಅವರನ್ನು ಹೊಗಳುತ್ತಾರೆ. ಆಧುನಿಕ ಶಿವಮೊಗ್ಗದ ನಿರ್ಮಾತೃ ಎಂಬ ಹೆಗ್ಗಳಿಕೆಯನ್ನು ಜನ ನೀಡುತ್ತಾರೆ.

Latest Videos
Follow Us:
Download App:
  • android
  • ios