ಸೊರಬ: ಕಾಂಗ್ರೆಸ್‌ನ ಮಧು ಬಂಗಾರಪ್ಪ ಪರ ಇಂದು ಶಿವರಾಜಕುಮಾರ್ ಪ್ರಚಾರ
ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರದ ಆನವಟ್ಟಿಯಲ್ಲಿ ನಟ ಶಿವರಾಜ್‌ಕುಮಾರ್, ಪತ್ನಿ ಗೀತಾ ರೋಡ್ ಶೋ ಇಂದು, ಮಧು ಬಂಗಾರಪ್ಪ ಸೇರಿದಂತೆ ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಕ್ಕಾಗಿ ಪ್ರಚಾರ, ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಪಕ್ಷ ಸಭೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗಿ.
ಶಿವಮೊಗ್ಗ(ಏ.30): ಸೊರಬ ತಾಲೂಕು ಆನವಟ್ಟಿಯಲ್ಲಿ ಏ.30ರಂದು ಮಧ್ಯಾಹ್ನ 12ಕ್ಕೆ ನಟ ಶಿವರಾಜ್‌ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರ ರೋಡ್ ಶೋ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ನ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್. ರಮೇಶ್ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಗೀತಾ ಶಿವರಾಜ್‌ಕುಮಾರ್ ಈಗಾಗಲೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಅಭ್ಯರ್ಥಿ ಮಧು ಬಂಗಾರಪ್ಪ ಅವರೂ ಸೇರಿದಂತೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಉದ್ದೇಶದಿಂದ ತಮ್ಮ ಪತಿ ಶಿವರಾಜ್‌ಕುಮಾರ್ ಅವರೊಂದಿಗೆ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ಈ ರೋಡ್ ಶೋ ಸುಮಾರು 2 ಕಿ.ಮೀ. ಇರುತ್ತದೆ. ಮಧ್ಯಾಹ್ನ 4 ಗಂಟೆಗೆ ಆನವಟ್ಟಿಯ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಬಹಿರಂಗ ಸಭೆ ಇರುತ್ತದೆ. ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಭಾಗವಹಿಸಲಿದ್ದಾರೆ ಎಂದರು.
ಶಿಕಾರಿಪುರ ವಿಧಾನಸಭಾ ಕ್ಷೇತ್ರ: ವಿಜಯೇಂದ್ರ ಓಟಕ್ಕೆ ನಾಗರಾಜ ಅಡ್ಡಿಯಾಗುವರೇ?
ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏ.30ರಂದು ಬೆಳಿಗ್ಗೆ 10ಕ್ಕೆ ಹಾಸನದಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಬರಲಿದ್ದಾರೆ. ಶಿವಮೊಗ್ಗದಲ್ಲಿ 10.30ಕ್ಕೆ ಪತ್ರಿಕಾಗೋಷ್ಠಿ ಇದ್ದು, 11.30ಕ್ಕೆ ಡಿವಿಎಸ್ ಕಾಂಪೋಸಿಟ್ ಕಾಲೇಜಿನ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. ನಂತರ ಅವರು ಸೊರಬಕ್ಕೆ ತೆರಳುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಭೂಪಾಲ್, ರವಿಕುಮಾರ್, ಮಧು, ಎಲ್.ಸತ್ಯನಾರಾಯಣ ರಾವ್, ಚಂದ್ರಶೇಖರ್ ಮುಂತಾದವರಿದ್ದರು.
ಮೇ 2ರಂದು ತೀರ್ಥಹಳ್ಳಿಗೆ ರಾಹುಲ್ ಗಾಂಧಿ
ನಗರದಲ್ಲಿ ಕಾಂಗ್ರೆಸ್- ಬಿಜೆಪಿಗೂ ಗ್ರಾಮಾಂತರದಲ್ಲಿ ಕಾಂಗ್ರೆಸ್- ಜೆಡಿಎಸ್‌ಗೂ ನೇರ ಸ್ಪರ್ಧೆ ಇರುತ್ತದೆ. ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸಲಿದೆ ಎಂದು ಎಚ್.ಎಸ್. ಸುಂದರೇಶ್ ಹೇಳಿದರು.
ಬಿಜೆಪಿ ಸರ್ಕಾರ ಇಲ್ಲದ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಅಪೂರ್ಣ: ಶೋಭಾ ಕರಂದ್ಲಾಜೆ
ಕಾಂಗ್ರೆಸ್ ಅಭ್ಯರ್ಥಿಗಳು ಈಗಾಲೇ ಪ್ರಚಾರ ಮುಂದುವರಿಸಿದ್ದು, ಕಾಂಗ್ರೆಸ್ ಪರ ಅಲೆ ಕಾಣುತ್ತಿದೆ. ಪಕ್ಷ ಬಿಟ್ಟು ಹೋದವರಿಂದ ಯಾವ ಪರಿಣಾಮವೂ ಆಗುವುದಿಲ್ಲ. ರಾಜ್ಯ ಮತ್ತು ಕೇಂದ್ರ ನಾಯಕರು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ. ಮೇ 2ಕ್ಕೆ ರಾಹುಲ್ ಗಾಂಧಿ ತೀರ್ಥಹಳ್ಳಿಗೆ ಭೇಟಿ ನೀಡಲಿದ್ದಾರೆ ಎಂದರು
ಜಿಲ್ಲೆಯ ಸಾಗರ ಮತ್ತು ಶಿಕಾರಿಪುರದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡುತ್ತಿದ್ದ ಪಕ್ಷದ 21 ಕಾರ್ಯಕರ್ತರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ. ಪ್ರಮುಖವಾಗಿ ಶಿಕಾರಿಪುರದ ಎಸ್.ಸಿ.ವೀರೇಶ್, ಉಮೇಶ್, ರಾಘವೇಂದ್ರ ನಾಯ್ಕ್ ಹಾಗೂ ಸಾಗರದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಾ. ರಾಜನಂದಿನಿ, ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಹುನಗೋಡು ರತ್ನಾಕರ್ ಮುಂತಾದವರಿದ್ದಾರೆ. ಆದರೆ ಶಿಕಾರಿಪುರದಲ್ಲಿ ಸ್ವತಂತ್ರ ಅಭ್ಯರ್ಥಿ ನಾಗರಾಜ ಗೌಡರನ್ನು ಉಚ್ಚಾಟಿಸಲು ಈಗಾಗಲೇ ರಾಜ್ಯ ಸಮಿತಿಗೆ ಶಿಫಾರಸು ಮಾಡಲಾಗಿದೆ ಎಂದರು.