ಬಿಜೆಪಿ ಸರ್ಕಾರ ಇಲ್ಲದ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಅಪೂರ್ಣ: ಶೋಭಾ ಕರಂದ್ಲಾಜೆ
ದೇಶ ಅಭಿವೃದ್ಧಿ ಆಗಬೇಕಾದರೆ ಎಲ್ಲ ರಾಜ್ಯಗಳು ಅಭಿವೃದ್ಧಿಯಾಗಬೇಕು. ಆದರೆ, ಬಿಜೆಪಿ ಸರ್ಕಾರ ಇಲ್ಲದ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಅಪೂರ್ಣವಾಗಿವೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಶಿವಮೊಗ್ಗ (ಏ.29): ದೇಶ ಅಭಿವೃದ್ಧಿ ಆಗಬೇಕಾದರೆ ಎಲ್ಲ ರಾಜ್ಯಗಳು ಅಭಿವೃದ್ಧಿಯಾಗಬೇಕು. ಆದರೆ, ಬಿಜೆಪಿ ಸರ್ಕಾರ ಇಲ್ಲದ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಅಪೂರ್ಣವಾಗಿವೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಬಾರಿ ಬಹುಮತದ ಸರ್ಕಾರ ಇರಲಿಲ್ಲ. ಈ ಬಾರಿ ಪೂರ್ಣ ಬಹುಮತದ ಸರ್ಕಾರ ರಚನೆಗೆ ಮತದಾರರು ಆಶೀರ್ವಾದ ಮಾಡುವಂತೆ ಮನವಿ ಮಾಡಿದರು. ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡು ಆ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದರು. ಅವರನ್ನು ಸೇರಿಸಿಕೊಂಡು ಸರ್ಕಾರ ಮಾಡುವ ಹೊಣೆಗಾರಿಕೆ ಬಿಜೆಪಿಯದ್ದಾಗಿತ್ತು. ಆದರೆ ಈ ಬಾರಿ ಅಂತಹ ಸ್ಥಿತಿ ನಿರ್ಮಾಣ ಮಾಡದೆ ಬಿಜೆಪಿಗೆ ಬಹುಮತ ನೀಡುವಂತೆ ಹೇಳಿದರು.
ಈ ಬಾರಿ ಚುನಾವಣೆ ಅಭಿವೃದ್ಧಿ ಆಧಾರದ ಮೇಲೆ ನಡೆಯುತ್ತಿದ್ದು, ಲೋಕಸಭೆ ಚುನಾವಣೆಗೆ ಶಕ್ತಿ ತುಂಬುವುದು, ರಾಜ್ಯದಲ್ಲಿ ಅಪೂರ್ಣ ಕಾಮಗಾರಿಗಳನ್ನು ಪೂರ್ಣ ಮಾಡುವುದು ಪ್ರಮುಖ ಆದ್ಯತೆ ಆಗಿದೆ. ನಮ್ಮ ನಾಯಕರು ಮಾಡಿದ ಶಿಲಾನ್ಯಾಸಗಳನ್ನು ಪೂರ್ಣ ಮಾಡುವುದೇ ಮೊದಲ ಆದ್ಯತೆಯಾಗಿದೆ. ಕಳೆದ 9 ವರ್ಷಗಳಲ್ಲಿ ತಂತ್ರಜ್ಞಾನ ಬಳಕೆ ಮಾಡಿಕೊಂಡು ಅಭಿವೃದ್ಧಿ ಮಾಡಲಾಗುತ್ತಿದೆ. ಅಭಿವೃದ್ಧಿ ಕೊಂಡಿ ಎಲ್ಲಿಯೂ ಸಡಿಲವಾಗಬಾರದು. ಈ ಹಿಂದೆ ಯೋಜನೆಗಳು 40 ವರ್ಷವಾದರೂ ಪೂರ್ಣವಾಗುತ್ತಿರಲಿಲ್ಲ. ಒಂದು ಯೋಜನೆಯ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗುತಿತ್ತು. ಆದರೆ ಈಗ ಆ ಸ್ಥಿತಿ ಇಲ್ಲ ಎಂದರು. ವಸತಿ, ಕುಡಿಯುವ ನೀರು, ರೈಲ್ವೆ, ಹೆದ್ದಾರಿ, ನೀರಾವರಿ ಯೋಜನೆ, ವಿಮಾನ ನಿಲ್ದಾಣಗಳು ನಿರ್ಮಾಣವಾಗಿವೆ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪುಂಗಿದಾಸರು: ಸಿ.ಟಿ.ರವಿ ಲೇವಡಿ
ರಾಜ್ಯದಲ್ಲಿ 54 ಲಕ್ಷ ರೈತರು ಕಿಸಾನ್ ಸಮ್ಮನ್ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ದೇಶದ ರಕ್ಷಣೆ ಅಗತ್ಯವಾಗಿದೆ. ಯಾವುದೇ ಯೋಜನೆಯನ್ನು ಕೇಂದ್ರ ನೇರವಾಗಿ ಜಾರಿ ಮಾಡುವುದಿಲ್ಲ. ರಾಜ್ಯ ಸರ್ಕಾರಗಳು ಭೂಮಿ ನೀಡಬೇಕು. ಈ ನಿಟ್ಟಿನಲ್ಲಿ ಡಬಲ್ ಎಂಜಿನ್ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ರಾಜ್ಯದಲ್ಲಿ ಪ್ರವಾಸ ಮಾಡಿದ್ದಾರೆ. ಇನ್ನು ಕೆಲವು ದಿನ ರಾಜ್ಯ ಪ್ರವಾಸ ಮಾಡಲಿದ್ದಾರೆ. ಕಾರ್ಯಕರ್ತರಲ್ಲಿ ಕಾರ್ಯಕರ್ತರಾಗಿ ಮೋದಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಪ್ರಧಾನಿ ಅವರನ್ನು ಅವಹೇಳನ ಮಾಡಿ ಮಾತನಾಡುತ್ತಿರುವುದು ಬೇಸರ ತರಿಸಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮುಖಂಡರಾದ ಎಂ.ಬಿ.ಭಾನುಪ್ರಕಾಶ್, ಆರ್.ಕೆ.ಸಿದ್ದರಾಮಣ್ಣ, ಕೆ.ಜಿ.ಕುಮಾರಸ್ವಾಮಿ, ಶಿವರಾಜ್, ಕೆ.ವಿ.ಅಣ್ಣಪ್ಪ, ಶ್ರೀನಾಥ್, ಶರತ್ ಕಲ್ಯಾಣಿ ಮತ್ತಿತರರು ಇದ್ದರು.
ಪತ್ರಕರ್ತರ ಪ್ರಶ್ನೆಗೆ ಹಾರಿಕೆ ಉತ್ತರ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪತ್ರಕರ್ತರ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿದರು. ನಿರುದ್ಯೋಗ ಹೆಚ್ಚಳ ಆಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ನಿರುದ್ಯೋಗ ಹೆಚ್ಚಳವಾಗಲು ಹೆಚ್ಚಿನ ಶಿಕ್ಷಣ ಪಡೆಯುತ್ತಿರುವುದು ಕಾರಣ. ವರ್ಷದಿಂದ ವರ್ಷಕ್ಕೆ ಪದವಿ ಪಡೆಯುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಒಂದು ಕಾಲದಲ್ಲಿ ಪದವಿ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಕಡಿಮೆ ಇತ್ತು. ವಿದ್ಯಾವಂತರಿಗೆ ಸ್ವಯಂ ಉದ್ಯೋಗ ಮಾಡಲು ಹಾಗೂ ಸರ್ಕಾರಿ ಉದ್ಯೋಗ ಮಾಡುವುದಕ್ಕೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ 10 ಸಾವಿರಕ್ಕೂ ಹೆಚ್ಚು ಸ್ಟಾರ್ಚ್ಅಪ್ಗಳು ಪ್ರಾರಂಭವಾಗಿವೆ ಎಂದು ಉತ್ತರಿಸಿದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಂತ ಹೇಳಿದ್ದೀರಿ, ಈಗ ಎಷ್ಟುಉದ್ಯೋಗ ಸೃಷ್ಟಿಮಾಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಖರ ದಾಖಲೆ ಇಲ್ಲ, ಮಾಹಿತಿ ಪಡೆದು ಉತ್ತರಿಸುತ್ತೇನೆ ಎಂದು ಸಮರ್ಪಕ ಉತ್ತರ ನೀಡದೇ ಜಾರಿಕೊಂಡರು. ಬೆಲೆ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ 4 ವಿಚಾರದಲ್ಲಿ ಆತ್ಮನಿರ್ಭರವಾಗಿಲ್ಲ. ರಸಗೊಬ್ಬರ, ಖಾದ್ಯ ತೈಲ, ಪೆಟ್ರೋಲಿಯಂ ಹಾಗೂ ಶಸ್ತ್ರಾಶದಲ್ಲಿ ಸ್ವಾವಲಂಬಿ ಇಲ್ಲ.
ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‌ಗೆ ಜಯ, ರಾಜ್ಯದಲ್ಲೂ ಕಾಂಗ್ರೆಸ್‌ಗೆ ಅಧಿಕಾರ: ಎಸ್.ನಾರಾಯಣ್
ಈ ನಾಲ್ಕು ವಿಚಾರದಲ್ಲಿ ಸ್ವಾವಲಂಬಿ ಆಗಬೇಕು. ಹಾಗಾದಾಗ ಮಾತ್ರ ಭಾರತವನ್ನು ಎಲ್ಲ ವಿಚಾರದಲ್ಲಿ ಆತ್ಮನಿರ್ಭರ ಮಾಡಲು ಸಾಧ್ಯ. ಈ ದೇಶದಲ್ಲಿ ಭ್ರಷ್ಟಾಚಾರದ ತಂದೆ- ತಾಯಿ ಕಾಂಗ್ರೆಸ್. ಭಾರತವನ್ನು ಭ್ರಷ್ಟಾಚಾರದ ದೇಶ ಎಂದು ಕರೆಯಲು ಕಾಂಗ್ರೆಸ್ ಕಾರಣ. ನಮ್ಮ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗುತ್ತಿದೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.