ಇನ್ನುಳಿದ ಅಭ್ಯರ್ಥಿಗಳ ಆಯ್ಕೆಗೆ ಪ್ಯಾನಲ್‌: ಹೈಕಮಾಂಡ್‌ನಿಂದ ನಿರ್ಧಾರ, ಮೋಹನ್‌ ಚಂದ್ರ, ಸಿದ್ದು, ಡಿಕೆಶಿ ನೇತೃತ್ವದಲ್ಲಿ ಸ್ಕ್ರೀನಿಂಗ್‌ ಕಮಿಟಿ ಸಭೆ. 

ಬೆಂಗಳೂರು(ಮಾ.31): ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡ ಹಿನ್ನೆಲೆಯಲ್ಲಿ 100 ಕ್ಷೇತ್ರಗಳ ಪಟ್ಟಿ(ಎರಡನೆಯ) ಅಂತಿಮಗೊಳಿಸಲು ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿಯ ಸಭೆ ಅಧ್ಯಕ್ಷ ಮೋಹನ್‌ ಚಂದ್ರ ಅವರ ನೇತೃತ್ವದಲ್ಲಿ ಗುರುವಾರ ತಡರಾತ್ರಿಯವರೆಗೂ ನಡೆಯಿತು.

ಬಹುತೇಕ 60ರಿಂದ 70 ಕ್ಷೇತ್ರಗಳಿಗೆ ಒಂಟಿ ಹೆಸರನ್ನು ಈ ಸಭೆಯಲ್ಲಿ ಅಖೈರುಗೊಳಿಸಲಾಗಿದ್ದು, ಬಾಕಿ ಉಳಿದ ಕ್ಷೇತ್ರಗಳಿಗೆ ಪ್ಯಾನಲ್‌ ಸಿದ್ಧಪಡಿಸಿ ಅಂತಿಮ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡಲು ತೀರ್ಮಾನಿಸಲಾಯಿತು ಎಂದು ಮೂಲಗಳು ಹೇಳಿವೆ.

ಸಿದ್ದರಾಮಯ್ಯ-ಬಿಜೆಪಿ ನಡುವೆ ರಾಮನವಮಿ ಟ್ವೀಟ್‌ ವಾರ್‌

ಅತ್ಯಂತ ಕ್ಲಿಷ್ಟ ಕ್ಷೇತ್ರಗಳ ಬಗ್ಗೆ ನಡೆದ ಚರ್ಚೆಯಾದ್ದರಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಯಾರು ಗೆಲ್ಲಬಹುದು ಎಂಬುದನ್ನು ಆಧಾರವಾಗಿಟ್ಟುಕೊಂಡು ಟಿಕೆಟ್‌ ನೀಡುವ ಬಗ್ಗೆ ತೀರ್ಮಾನಿಸಲಾಯಿತು. ಇದೇ ವೇಳೆ ಬಂಡಾಯ ಉಂಟಾಗದಂತೆ ತಡೆಯುವುದು ಹೇಗೆ? ಯಾರಾರ‍ಯರು ಬಂಡಾಯವೇಳಬಹುದು ಹಾಗೂ ಅವರನ್ನು ಹೇಗೆ ಸಮಾಧಾನ ಪಡಿಸಬೇಕು ಎಂದು ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಯಿತು ಎಂದು ಮೂಲಗಳು ಹೇಳಿವೆ.

ರಾಹುಲ್‌ ಕೋಲಾರ ಯಾತ್ರೆ ನಂತರ 2ನೇ ಪಟ್ಟಿ:

ಈ ಸಭೆಯಲ್ಲಿ ಪಟ್ಟಿ ಅಂತಿಮಗೊಂಡ ನಂತರ ಅದನ್ನು ಹೈಕಮಾಂಡ್‌ಗೆ ರವಾನಿಸಲಾಗುತ್ತದೆ. ದೆಹಲಿಯಲ್ಲಿ ಕೇಂದ್ರೀಯ ಚುನಾವಣಾ ಸಮಿತಿಯು ಈ ಬಗ್ಗೆ ಮತ್ತೊಂದು ಹಂತದ ಚರ್ಚೆ ನಡೆಸಿ ಅನಂತರ ಪಟ್ಟಿಘೋಷಣೆಯಾಗಲಿದೆ. ಮೂಲಗಳ ಪ್ರಕಾರ ಎರಡನೇ ಪಟ್ಟಿಯಲ್ಲಿ 60ರಿಂದ 70 ಹೆಸರುಗಳು ಘೋಷಣೆಯಾಗುವ ಸಾಧ್ಯತೆಯಿದೆ. ಬಾಕಿ ಉಳಿದ ಕ್ಷೇತ್ರಗಳಿಗೆ ಅಂತಿಮ ಹಂತದವರೆಗೂ ಘೋಷಣೆ ಸಾಧ್ಯತೆ ಕಡಿಮೆ.

ಮೂಲಗಳ ಪ್ರಕಾರ ಕೋಲಾರದಲ್ಲಿ ಏ.5ರಂದು ನಡೆಯಲಿರುವ ರಾಹುಲ್‌ಗಾಂಧಿ ಅವರ ಯಾತ್ರೆಯ ನಂತರ ಪಟ್ಟಿಪ್ರಕಟವಾಗಲಿದೆ. ಗುರುವಾರ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕರಾದ ಎಂ.ಬಿ. ಪಾಟೀಲ್‌, ಡಾ. ಜಿ. ಪರಮೇಶ್ವರ್‌, ಬಿ.ಕೆ. ಹರಿಪ್ರಸಾದ್‌ ಪಾಲ್ಗೊಂಡಿದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.