ರಾಮನ ಪ್ರೀತಿಯ ಹಾದಿಯಲ್ಲಿ ನಡೆಯೋಣ: ಸಿದ್ದರಾಮಯ್ಯ, ಚುನಾವಣೆ ನಿಮಿತ್ತ ಬಹುಕೃತ ವೇಷ: ಬಿಜೆಪಿ ಟೀಕೆ

ಬೆಂಗಳೂರು(ಮಾ.31): ಶ್ರೀರಾಮನವಮಿಗೆ ಶುಭ ಕೋರಿದ ವಿಚಾರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಆಡಳಿತ ಪಕ್ಷ ಬಿಜೆಪಿ ನಡುವೆ ಗುರುವಾರ ಭರ್ಜರಿ ಟ್ವೀಟ್‌ ವಾರ್‌ ನಡೆಯಿತು.ರಾಮನವಮಿ ಅಂಗವಾಗಿ ಸಿದ್ದರಾಮಯ್ಯ ಅವರು, ಆದರ್ಶ ಪುರುಷ ಶ್ರೀರಾಮನು ಹಾಕಿಕೊಟ್ಟ ಪ್ರೀತಿ, ಸಹಾನುಭೂತಿ, ಅಂತಃಕರಣ, ನ್ಯಾಯಪರಿಪಾಲನೆಯ ಹಾದಿಯಲ್ಲಿ ಮುನ್ನಡೆಯೋಣ. ಪಾನಕ, ಕೋಸಂಬರಿಯ ಜೊತೆ ಸ್ನೇಹ, ಸೌಹಾರ್ದತೆ ಮಿಳಿತಗೊಳ್ಳಲಿ, ಮನುಷ್ಯಪ್ರೇಮದ ಬೆಳಕು ಜಗದಗಲ ಬೆಳಗಲಿ ಎಂದು ಟ್ವೀಟ್‌ ಮಾಡಿದ್ದರು.

ಇದಕ್ಕೆ ಪ್ರತಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿಯು ‘ಪ್ರಭು ಶ್ರೀರಾಮಚಂದ್ರನ ಅಸ್ತಿತ್ವವನ್ನೇ ಪ್ರಶ್ನಿಸುವ, ರಾಮಚಂದ್ರನ ಭವ್ಯ ಮಂದಿರದ ವಿರುದ್ಧವೇ ಸಮರ ಸಾರಿದ, ರಾಮರಾಜ್ಯವನ್ನು ಟೀಕಿಸುವ ಅಲ್ಪರ ಗುಂಪಿನ ‘ಪೋಸ್ಟರ್‌ ಬಾಯ್‌’ ಸಿದ್ದರಾಮಯ್ಯ ಇಂದು ‘ರಾಮಭಕ್ತರ ವೇಷ’ ತೊಟ್ಟು ‘ಚುನಾವಣೆ ನಿಮಿತ್ತ ಬಹುಕೃತ ವೇಷ’ವೆಂಬ ನುಡಿಗೆ ಗೌರವ ಹೆಚ್ಚಿಸಿದ್ದಾರೆ ಎಂದು ಟೀಕಿಸಿತು.

ಚುನಾವಣಾ ಆಯೋಗ ಬಿಜೆಪಿ ಮೇಲೆ ಕೇಸ್‌ ಹಾಕ್ತಿಲ್ಲ: ಕೃಷ್ಣಬೈರೇಗೌಡ

ಇದಕ್ಕೆ ಮತ್ತೆ ಟ್ವೀಟ್‌ ಮಾಡಿದ ಸಿದ್ದರಾಮಯ್ಯ ಅವರು, ಮಹಾತ್ಮ ಗಾಂಧೀಜಿಯವರು ನಂಬಿದ್ದ ಮಾನವೀಯ ಗುಣಗಳ, ಮಾತೃಹೃದಯದ ಸರ್ವವನ್ನೂ ಪ್ರೀತಿಸುವ ರಾಮನ ಅನುಯಾಯಿ ನಾನು. ರಾಮನ ಹೆಸರಲ್ಲಿ ದ್ವೇಷಬಿತ್ತಿ, ಮನಸ್ಸುಗಳನ್ನು ಒಡೆದು ಚುನಾವಣೆಯಲ್ಲಿ ಲಾಭ ಪಡೆಯುವವರು ನೀವು. ನನ್ನ ರಾಮ ಅಂತಃಕರಣದ ಸ್ವರೂಪಿ, ನಿಮಗೆ ರಾಮ ಚುನಾವಣಾ ಸರಕು. ರಾಮನೇ ನಿಮಗೆ ಸದ್ಬುದ್ಧಿ ನೀಡಲಿ ಎಂದು ತಿರುಗೇಟು ನೀಡಿದರು.