ಬೆಂಗಳೂರು(ಏ.04): ರಾಜ್ಯದ 1 ಲೋಕಸಭೆ ಮತ್ತು 2 ವಿಧಾನಸಭೆಗಳಿಗೆ ಏಪ್ರಿಲ್‌ 17ರಂದು ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ಹಿಂದೆಗೆಯಲು ಕೊನೆಯ ದಿನವಾದ ಶನಿವಾರದಂದು ಒಟ್ಟು 12 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ಅಂತಿಮವಾಗಿ 30 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. 

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯವಾಗಿ ಎನ್‌ಸಿಪಿಯಿಂದ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ ಮಾಜಿ ಶಾಸಕ ಎಂ.ಜಿ.ಮೂಳೆ ಬಿಜೆಪಿ ಮುಖಂಡರ ಮನವೊಲಿಕೆ ಬಳಿಕ ನಾಮಪತ್ರ ಹಿಂಪಡೆದಿದ್ದರೆ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ನಾಮಪತ್ರ ಹಿಂಪಡೆಯದೆ ಕಣದಲ್ಲಿ ಉಳಿದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳ ಪೈಕಿ ಶನಿವಾರ 8 ಮಂದಿ ಹಿಂಪಡೆದಿದ್ದು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದೇ ವೇಳೆ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಇಬ್ಬರು ನಾಮಪತ್ರ ಹಿಂಪಡೆದಿದ್ದು 8 ಮಂದಿ ಕಣದಲ್ಲಿ ಉಳಿದಿದ್ದರೆ, ಬೀದರ್‌ ಜಿಲ್ಲೆಯ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದಲ್ಲೂ ಇಬ್ಬರು ಉಮೇದುವಾರಿಕೆ ಹಿಂಪಡೆದಿದ್ದು 12 ಅಭ್ಯರ್ಥಿಗಳು ಅಖಾಡದಲ್ಲಿ ಸೆಣೆಸಲಿದ್ದಾರೆ.

'ವಿಜಯೇಂದ್ರ ಬೆಳವಣಿಗೆಯ ವೇಗ ಸಿದ್ದರಾಮಯ್ಯಗೆ ಸಹಿಸಲಾಗುತ್ತಿಲ್ಲ'

ಬೆಳಗಾವಿಯಲ್ಲಿ ಸರ್ವ ಜನತಾ ಪಾರ್ಟಿಯ ಅಶೋಕ ಪಾಂಡಪ್ಪ ಹಣಜಿ, ಶಿವಸೇನೆಯ ಕೃಷ್ಣಾಜಿ ಪುಂಡಲೀಕ ಪಾಟೀಲ, ಪಕ್ಷೇತರ ಅಭ್ಯರ್ಥಿಗಳಾದ ಗುರುಪುತ್ರ ಕೆಂಪಣ್ಣ ಕುಳ್ಳೂರ, ಬಸವರಾಜ ಹುದ್ದಾರ, ಭಾರತಿ ಚಿಕ್ಕನರಗುಂದ, ಸುರೇಶ ಪರಗನ್ನವರ, ಸಂಗಮೇಶ ಚಿಕ್ಕನರಗುಂದ, ಹಣಮಂತ ನಾಗನೂರ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಬಿಜೆಪಿಯ ಮಂಗಲ ಅಂಗಡಿ, ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ, ಕರ್ನಾಟಕ ರಾಷ್ಟ್ರ ಸಮಿತಿಯ ವಿವೇಕಾನಂದ ಬಾಬು ಘಂಟಿ, ಹಿಂದುಸ್ಥಾನ ಜನತಾ ಪಾರ್ಟಿಯ ವೆಂಕಟೇಶ್ವರ ಮಹಾಸ್ವಾಮೀಜಿ, ಕರ್ನಾಟಕ ಕಾರ್ಮಿಕರ ಪಕ್ಷದ ಸುರೇಶ ಮರಲಿಂಗಣ್ಣವರ, ಪಕ್ಷೇತರ ಅಭ್ಯರ್ಥಿಗಳಾದ ಅಪ್ಪಾಸಾಹೇಬ ಕುರಣೆ, ಗೌತಮ ಯಮನಪ್ಪ ಕಾಂಬಳೆ, ನಾಗಪ್ಪ ಕಳಸಣ್ಣವರ, ಶಂಭು ಶೆಳಕೆ, ಶ್ರೀಕಾಂತ ಪಡಸಲಗಿ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳಾಗಿದ್ದಾರೆ.

ಮಸ್ಕಿಯಲ್ಲಿ ಪಕ್ಷೇತರ ಅಭ್ಯರ್ಥಿ ಟಿ.ಚಕ್ರವರ್ತಿ ನಾಯಕ ಶನಿವಾರ ಹಿಂದೆ ಪಡೆದಿದ್ದಾರೆ. ಏ.1ರಂದು ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಸಿದ್ದಲಿಂಗಪ್ಪ ಅವರು ನಾಮಪತ್ರ ಹಿಂದಕ್ಕೆ ಪಡೆದಿದ್ದರು. ಈ ಮೂಲಕ ಕಣದಲ್ಲಿ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ್‌, ಕಾಂಗ್ರೆಸ್‌ನಿಂದ ಬಸನಗೌಡ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಓಬಳೇಶಪ್ಪ ಬಿ.ಟಿ, ಪಕ್ಷೇತರ ಅಭ್ಯರ್ಥಿಗಳಾಗಿ ದೀಪಿಕಾ ಎಸ್‌, ಶ್ರೀನಿವಾಸ ನಾಯಕ, ಅಮರೇಶ, ಈಶಪ್ಪ, ಬಸನಗೌಡ ಕಣದಲ್ಲಿ ಉಳಿದಿದ್ದಾರೆ.

ಬಸವಕಲ್ಯಾಣದಲ್ಲಿ ಎನ್‌ಸಿಪಿಯಿಂದ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ ಮಾಜಿ ಶಾಸಕ ಎಂಜಿ ಮೂಳೆ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಈರಣ್ಣ ಹಡಪದ ಸಣ್ಣೂರ ನಾಮಪತ್ರ ವಾಪಸ್‌ ಪಡೆದಿದ್ದಾರೆ. ಹೀಗಾಗಿ ಬಿಜೆಪಿಯಿಂದ ಶರಣು ಸಲಗರ, ಕಾಂಗ್ರೆಸ್‌ನಿಂದ ಮಾಲಾ ಬಿ, ಜೆಡಿಎಸ್‌ನಿಂದ ಸೈಯದ್‌ ಯಸ್ರಾಬ ಅಲಿ ಖಾದ್ರಿ, ಎಐಎಂಐಎಂನಿಂದ ಅಬ್ದುಲ್‌ ರಜಾಕ್‌, ಶಿವಸೇನೆಯಿಂದ ಅಂಕುಶ, ಅಖಿಲ ಭಾರತೀಯ ಮುಸ್ಲಿಂ ಲೀಗ್‌ನಿಂದ ಫರಜನಾ ಬೇಗಂ, ಕರ್ನಾಟಕ ರಾಷ್ಟ್ರ ಸಮಿತಿ ಮಂಜುನಾಥ ಶ್ರೀಂಗೇರಿ, ಸ್ವತಂತ್ರ ಅಭ್ಯರ್ಥಿಗಳಾಗಿ ಮಲ್ಲಿಕಾರ್ಜುನ ಖೂಬಾ, ಅಲತಾಫ್‌, ಅಂಬ್ರೋಸ್‌ ಡಿ ಮೆಲ್ಲೊ, ಶ್ರೀವೆಂಕಟೇಶ್ವರ ಮಹಾಸ್ವಾಮೀಜಿ, ರವಿಕಿರಣ ಎಂ.ಎನ್‌. ಅಂತಿಮ ಕಣದಲ್ಲಿದ್ದಾರೆ.

ಒಮ್ಮೆ ಬಿಜೆಪಿ, ಎರಡು ಬಾರಿ ಕಾಂಗ್ರೆಸ್‌ಗೆ ಒಲವು: ಈ ಬಾರಿ ಮಸ್ಕಿ ಮತದಾರರ ಬೆಂಬಲ ಯಾರಿಗೆ?

ಬಿಜೆಪಿಗೆ ತಲೆನೋವಾದ ಖೂಬಾ ಸ್ಪರ್ಧೆ

ಬಸವಕಲ್ಯಾಣ: ಉಪಚುನಾವಣೆಗೆ ಸ್ಪರ್ಧೆ ಬಯಸಿ ಸಲ್ಲಿಸಿದ್ದ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾದ ಶನಿವಾರ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳಲ್ಲಿ ಮಾಜಿ ಶಾಸಕ ಎಂ.ಜಿ.ಮೂಳೆ ಅವರು ನಾಮಪತ್ರ ಹಿಂಪಡೆದಿದ್ದಾರೆ. ಇದೇವೇಳೆ ಮತ್ತೊಬ್ಬ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಉಮೇದುವಾರಿಕೆ ಹಿಂಪಡೆಯದೆ ಕಣದಲ್ಲಿ ಮುಂದುವರಿದಿರುವುದು ಬಿಜೆಪಿ ತಲೆನೋವಿಗೆ ಕಾರಣವಾಗಿದೆ. 

ಭರಸವೆ ಈಡೇರಿಸಿಲ್ಲ ಎಂಬ ಕಾರಣಕ್ಕೆ ಕ್ಷೇತ್ರದ ಮರಾಠಾ ಸಮಾಜ ಬಿಜೆಪಿ ವಿರುದ್ಧ ಸಮರವನ್ನೇ ಸಾರಿತ್ತು. ಈ ನಿಟ್ಟಿನಲ್ಲಿ ಮರಾಠಾ ಸಮುದಾಯದ ಮುಖಂಡ ಎಂ.ಜಿ.ಮೂಳೆ ಎನ್‌ಸಿಪಿಯಿಂದ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದರು. ಆದರೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಮನವೊಲಿಕೆ ಪ್ರಯತ್ನ ಯಶಸ್ವಿಯಾಗಿದ್ದು, ಮೂಳೆ ಕಣದಿಂದ ಹಿಂದೆ ಸರಿದಿದ್ದಾರೆ. ಆದರೆ ಮಲ್ಲಿಕಾರ್ಜುನ ಖೂಬಾ ಮಾತ್ರ ಯಾವ ಮನವೊಲಿಕೆಗೂ ಜಗ್ಗದೆ ಕಣದಲ್ಲಿ ಉಳಿದಿದ್ದಾರೆ.