ಒಮ್ಮೆ ಬಿಜೆಪಿ, ಎರಡು ಬಾರಿ ಕಾಂಗ್ರೆಸ್‌ಗೆ ಒಲವು: ಈ ಬಾರಿ ಮಸ್ಕಿ ಮತದಾರರ ಬೆಂಬಲ ಯಾರಿಗೆ?

ಹಲವು ಐತಿಹಾಸಿಕ ಘಟನೆಗೆ ಸಾಮ್ರಾಟ್‌ ಅಶೋಕನ ನಾಡು ಮುನ್ನುಡಿ| ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ| ಕಳೆದ ಮೂರು ಚುನಾವಣೆಯಲ್ಲೂ ಅಖಾಡದಲ್ಲಿದ್ದ ಮೂರು ಪಕ್ಷಗಳ ಅಭ್ಯರ್ಥಿಗಳು| ಈ ಬಾರಿ ಜೆಡಿಎಸ್‌ನಿಂದ ಅಭ್ಯರ್ಥಿ ಇಳಿಸಿಲ್ಲ| 

Tough Competition Between BJP Congress in Maski Byelection grg

ಇಂದರಪಾಶ ಚಿಂಚರಕಿ

ಮಸ್ಕಿ(ಏ.01):  2008ರಲ್ಲಿ ಕ್ಷೇತ್ರ ಮರುವಿಂಗಡಣೆ ವೇಳೆ ಉದಯವಾಗಿದ್ದ ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರ ಮಸ್ಕಿಯಲ್ಲಿ ಇದುವರೆಗೂ ಮೂರು ಬಾರಿ ಸಾರ್ವತ್ರಿಕ ಚುನಾವಣೆ ನಡೆದಿವೆ. ಆದರೆ ಇದೇ ಮೊದಲ ಬಾರಿಗೆ ಉಪಚುನಾವಣೆ ಕಾವೇರಿದ್ದು, ಹಲವು ಐತಿಹಾಸಿಕ ಘಟನೆಗೆ ಸಾಮ್ರಾಟ್‌ ಅಶೋಕನ ನಾಡು ಮುನ್ನುಡಿಯಾಗುತ್ತಿದೆ.

ಮಸ್ಕಿ ವಿಧಾನಸಭೆ ಕ್ಷೇತ್ರ ರಚನೆಯಾದ ಬಳಿಕ ಪ್ರಥಮ ಬಾರಿ ಬಿಜೆಪಿ, ಎರಡು ಬಾರಿ ಕಾಂಗ್ರೆಸ್‌ಗೆ ಒಲವು ತೋರಿದ್ದ ಇಲ್ಲಿನ ಮತದಾರರು, ಈ ಬಾರಿ ಯಾರ ಕೊರಳಿಗೆ ವಿಜಯ ಮಾಲೆ ಹಾಕಲಿದ್ದಾರೆ ಎನ್ನುವ ಕೂತೂಹಲ ಉಂಟಾಗಿದೆ. ಕಳೆದ ಮೂರು ಚುನಾವಣೆಯಲ್ಲೂ ಮೂರು ಪಕ್ಷಗಳ ಅಭ್ಯರ್ಥಿಗಳ ಅಖಾಡದಲ್ಲಿರುತ್ತಿದ್ದರು. ಆದರೆ ಈ ಬಾರಿ ಜೆಡಿಎಸ್‌ನಿಂದ ಅಭ್ಯರ್ಥಿ ಇಳಿಸಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಎರಡೂ ಪಕ್ಷಗಳು ಪ್ರಚಾರ ನಡೆಸಿದ್ದಾರೆ. ಹೀಗಾಗಿ ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ ಎಂದು ವಿಶ್ಲೇಷಿಸಲಾಗಿದೆ.

ಕ್ಷೇತ್ರದ ಇತಿಹಾಸ:

2008ರ ಪೂರ್ವ ಸಿಂಧನೂರು, ಲಿಂಗಸುಗೂರು, ಮಾನ್ವಿ ವಿಧಾನಸಭೆ ಕ್ಷೇತ್ರದಲ್ಲಿ ಹಂಚಿ ಹೋಗಿದ್ದ ಹಳ್ಳಿಗಳನ್ನು ಕ್ರೂಢೀಕರಿಸಿ ಮಸ್ಕಿ ಹೊಸ ವಿಧಾನಸಭೆ ಕ್ಷೇತ್ರ ರಚನೆ ಮಾಡಲಾಯಿತು. ಕ್ಷೇತ್ರ ರಚನೆಯಾದ 2008ರ ಮೊದಲ ಚುನಾವಣೆಯಲ್ಲಿ ಆಗಿನ ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರತಾಪಗೌಡ ಪಾಟೀಲ್‌ ಗೆದ್ದು ವಿಧಾನ ಸಭೆ ಪ್ರವೇಶಿಸಿದ್ದರು.

'ಭಾರತದಲ್ಲಿ ಮೋದಿ ಕಾಂಗ್ರೆಸ್‌ ನಿರ್ನಾಮ ಮಾಡಿದ್ರೆ, ಕರ್ನಾಟಕದಲ್ಲಿ ಬಿಎಸ್‌ವೈ 'ಕೈ' ನಿರ್ನಾಮ ಮಾಡ್ತಾರೆ'

ಇವರ ಜತೆ ಅಖಾಡಕ್ಕೆ ಇಳಿದಿದ್ದ ಕಾಂಗ್ರೆಸ್‌ನ ತಿಮ್ಮಯ್ಯ ನಾಯಕ, ಜೆಡಿಎಸ್‌ನ ಅಯ್ಯನಗೌಡ ಆಯನೂರು ಸೋಲು ಅನುಭವಿಸಿದ್ದರು. ಬಳಿಕ 2013ರ ಸಾರ್ವತ್ರಿಕ ಚುನಾವಣೆ ಘೋಷಣೆ ವೇಳೆ ಬಿಜೆಪಿಯಲ್ಲಿದ್ದ ಪ್ರತಾಪಗೌಡ ಪಾಟೀಲ್‌ ಕಾಂಗ್ರೆಸ್‌ ಬಾಗಿಲು ಬಡಿದು ಟಿಕೆಟ್‌ ಗಿಟ್ಟಿಸಿದರು. ಆಗಿನ ಕೈ ಪಕ್ಷದ ಅಲೆಯಲ್ಲಿ ಮತ್ತೊಮ್ಮೆ ಗೆದ್ದು ಶಾಸಕರಾದರು. ಆಗ ಬಿಜೆಪಿಯಿಂದ ಶಂಕರ್‌ ಮ್ಯಾದರ್‌, ಕೆಜೆಪಿಯಿಂದ ಮಹಾದೇವಪ್ಪಗೌಡ, ಬಿಎಸ್ಸಾರ್‌ನಿಂದ ಶೇಖರಪ್ಪ ತಳವಾರ, ಜೆಡಿಎಸ್‌ನಿಂದ ಅಮೇಶ ಕಣಕ್ಕೆ ಇಳಿದು ಸೋಲು ಅನುಭವಿಸಿದ್ದರು.

2018ರ ಸಾರ್ವತ್ರಿಕ ಚುನಾವಣೆ ಎದುರಾದಾಗ ಮತ್ತೊಮ್ಮೆ ಕಾಂಗ್ರೆಸ್‌ನಿಂದಲೇ ಪ್ರತಾಪಗೌಡ ಪಾಟೀಲ್‌ ಕಣಕ್ಕೆ ಇಳಿದು ಬಿಜೆಪಿ ಅಭ್ಯರ್ಥಿಯಾಗಿದ್ದ ಆರ್‌.ಬಸನಗೌಡ ತುರುವಿಹಾಳ ವಿರುದ್ಧ 213 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಒಟ್ಟು ಮೂರು ಚುನಾವಣೆಯಲ್ಲೂ ಮಸ್ಕಿ ಮತದಾರರು ಪ್ರತಾಪಗೌಡ ಪಾಟೀಲ್‌ರನ್ನು ಬೆಂಬಲಿಸಿ ಹ್ಯಾಟ್ರಿಕ್‌ ವಿಜಯಕ್ಕೆ ನಾಂದಿ ಹಾಡಿದ್ದರು.

ರಾಜೀನಾಮೆ:

ಸತತ ಮೂರು ಬಾರಿ ಗೆದ್ದ ಪ್ರತಾಪಗೌಡ ಪಾಟೀಲ್‌ 2018ರಲ್ಲಿ ಗೆದ್ದಾಗ ಕೈ ಪಕ್ಷ ತೊರೆದು ಬಿಜೆಪಿ ಸೇರುವ ಮೂಲಕ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ನಂತರ ನಡೆದ ಹಲವು ಕಾನೂನು ಹೋರಾಟಗಳನ್ನು ದಾಟಿ ಬಂದಿದ್ದಾರೆ. ಮಸ್ಕಿ ಮೊದಲ ಬಾರಿಗೆ ಉಪಚುನಾವಣೆ ಎದುರಿಸುತ್ತಿದೆ. ಈ ಉಪಚುನಾವಣೆಯಲ್ಲೂ ಪ್ರತಾಪಗೌಡ ಪಾಟೀಲ್‌ ಮತ್ತು ಆರ್‌.ಬಸನಗೌಡ ತುರುವಿಹಾಳ ಕಣಕ್ಕೆ ಇಳಿದಿದ್ದು, ಹಳೆಯ ವ್ಯಕ್ತಿಗಳಾಗಿದ್ದರೂ ಪಕ್ಷ ಮತ್ತು ಚಿಹ್ನೆಗಳು ಅದಲು-ಬದಲಾಗಿವೆ. ಇದರಿಂದ ಮತದಾರ ಯಾರ ಕಡೆ ಒಲವು ತೋರುತ್ತಾನೋ ನೋಡಬೇಕಾಗಿದೆ.
 

Latest Videos
Follow Us:
Download App:
  • android
  • ios