Asianet Suvarna News Asianet Suvarna News

'ವಿಜಯೇಂದ್ರ ಬೆಳವಣಿಗೆಯ ವೇಗ ಸಿದ್ದರಾಮಯ್ಯಗೆ ಸಹಿಸಲಾಗುತ್ತಿಲ್ಲ'

ಸೋಲಿನ ಭೀತಿಯಿಂದ ಬಿಎಸ್‌ವೈ ವಿರುದ್ಧ ಸಿದ್ದು ವೃಥಾ ಆರೋಪ| ಸಿದ್ದರಾಮಯ್ಯನವರೇ ಹೇಳಿದಂತೆ ಜನರು ದಡ್ಡರಲ್ಲ. ಅವರಿಗೆ ಯಾವುದು ಸರಿ, ತಪ್ಪು ಎಂದು ತಿಳಿದುಕೊಳ್ಳುವ ಗುಣವಿದೆ| ಇತ್ತೀಚೆಗೆ ನಡೆದ ರಾಜರಾಜೇಶ್ವರಿ ನಗರ ಹಾಗೂ ಶಿರಾ ಚುನಾವಣೆಗಳಲ್ಲಿಯೂ ಬಿಜೆಪಿ ಅಭೂತಪೂರ್ವ ಗೆಲವು ಸಾಧಿಸಿದೆ: ಸಚಿವ ಎಸ್‌.ಟಿ. ಸೋಮಶೇಖರ್‌| 

Minister ST Somashekhar Talks Over Former CM Siddaramaiah grg
Author
Bengaluru, First Published Apr 4, 2021, 9:03 AM IST

ಬೆಂಗಳೂರು(ಏ.04): ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಹಾಗೂ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲುವ ಭೀತಿ ಎದುರಾಗಿರುವುದರಿಂದಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸಿದ್ದರಾಮಯ್ಯನವರು ಉತ್ತಮ ಆಡಳಿತ ನೀಡಿದ್ದರೆ, ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಿತ್ತು. ಆದರೆ, ಯಡಿಯೂರಪ್ಪ ಅವರಿಗೆ ಬಹುಮತ ನೀಡಿರುವುದನ್ನು ಅರ್ಥಮಾಡಿಕೊಂಡರೆ ಸಾಕು. ಸರ್ಕಾರ ಹಾಗೂ ಯಡಿಯೂರಪ್ಪನವರ ಸಾಧನೆ ನೋಡಿ ಸಹಿಸಲಾಗದೇ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಅದ್ಯಾವುದಪ್ಪ ನನಗೆ ಗೊತ್ತಿರದ ಸ್ಟ್ರ್ಯಾಟಜಿ.?: ವಿಜಯೇಂದ್ರಗೆ ಸಿದ್ದರಾಮಯ್ಯ ಪ್ರಶ್ನೆ

ಸಿದ್ದರಾಮಯ್ಯನವರೇ ಹೇಳಿದಂತೆ ಜನರು ದಡ್ಡರಲ್ಲ. ಅವರಿಗೆ ಯಾವುದು ಸರಿ, ತಪ್ಪು ಎಂದು ತಿಳಿದುಕೊಳ್ಳುವ ಗುಣವಿದೆ. ಯಡಿಯೂರಪ್ಪನವರ ಕೈ ಬಲಪಡಿಸಲು 17 ಮಂದಿ ರಾಜಿನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಿದಾಗ ನಮ್ಮನ್ನು ಗೆಲ್ಲಿಸಿರುವುದನ್ನು ಸಿದ್ದರಾಮಯ್ಯನವರು ಮರೆತಂತಿದೆ. ಅಲ್ಲದೆ, ಇತ್ತೀಚೆಗೆ ನಡೆದ ರಾಜರಾಜೇಶ್ವರಿ ನಗರ ಹಾಗೂ ಶಿರಾ ಚುನಾವಣೆಗಳಲ್ಲಿಯೂ ಬಿಜೆಪಿ ಅಭೂತಪೂರ್ವ ಗೆಲವು ಸಾಧಿಸಿದೆ.

ಇದೀಗ ಮತ್ತೆ, ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಹಾಗೂ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿಯೂ ಬಿಜೆಪಿ ಗೆಲವು ಸಾಧಿಸಲಿದೆ. ಕಾಂಗ್ರೆಸ್‌ ಸೋಲುವ ಭೀತಿ ಎದುರಿಸುತ್ತಿದೆ. ಆದ್ದರಿಂದಲೇ ಸಿದ್ದರಾಮಯ್ಯ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ವಿಜಯೇಂದ್ರ ಮುಂದಿನ ಸ್ಪರ್ಧೆ ವರುಣಾದಲ್ಲಿಯೇ ಎಂಬ ಹೇಳಿಕೆ ಕೇಳಿ ಗಾಬರಿಗೊಂಡಿದ್ದಾರೆ. ಎಲ್ಲಾ ಕಡೆ ಅವರ ಪಕ್ಷ ಸಂಘಟನೆ, ಚುನಾವಣಾ ಕಾರ್ಯತಂತ್ರ ಹೆಣೆಯುವಿಕೆಯಿಂದ ಬಿಜೆಪಿ ಜಯಗಳಿಸುತ್ತಾ ಬಂದಿದೆ. ಈ ಉಪ ಚುನಾವಣೆಗಳಲ್ಲಿಯೂ ಗೆಲವು ಸಾಧಿಸಲಿದೆ. ವಿಜಯೇಂದ್ರ ಅವರ ಬೆಳವಣಿಗೆಯ ವೇಗವನ್ನು ಸಹಿಸಲಾಗುತ್ತಿಲ್ಲ ಎಂದರು.
 

Follow Us:
Download App:
  • android
  • ios