‘ಮುಖ್ಯಮಂತ್ರಿ ದಂಗಲ್’ ಮುಗಿದ ಬೆನ್ನಲ್ಲೇ ಸಚಿವ ಸಂಪುಟಕ್ಕೆ ಅರ್ಹರನ್ನು ಆಯ್ಕೆ ಮಾಡುವ ಹರಸಾಹಸ ಶುಕ್ರವಾರ ದಿನವಿಡೀ ದೆಹಲಿಯಲ್ಲಿ ನಡೆಯಿತು.
ಬೆಂಗಳೂರು/ನವದೆಹಲಿ (ಮೇ.20): ‘ಮುಖ್ಯಮಂತ್ರಿ ದಂಗಲ್’ ಮುಗಿದ ಬೆನ್ನಲ್ಲೇ ಸಚಿವ ಸಂಪುಟಕ್ಕೆ ಅರ್ಹರನ್ನು ಆಯ್ಕೆ ಮಾಡುವ ಹರಸಾಹಸ ಶುಕ್ರವಾರ ದಿನವಿಡೀ ದೆಹಲಿಯಲ್ಲಿ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಸರಣಿ ಸಭೆ ನಡೆಸಿ 25 ಮಂದಿ ಸಚಿವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವ ತೀರ್ಮಾನ ಕೈಗೊಂಡಿದ್ದಾರೆ. ಆದರೆ ಸಚಿವರ ಪಟ್ಟಿ ತಡರಾತ್ರಿವರೆಗೂ ಬಹಿರಂಗ ಆಗಿರಲಿಲ್ಲ. ಇದರೊಂದಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹೊರತುಪಡಿಸಿ 25 ಸಚಿವರು ಸಂಪುಟ ಸೇರಿದಂತಾಗುತ್ತದೆ ಹಾಗೂ ಸಂಪುಟದ ಗಾತ್ರ 27 ಆದಂತಾಗುತ್ತದೆ. ಕರ್ನಾಟಕದಲ್ಲಿ ಸಚಿವ ಸಂಪುಟದಲ್ಲಿ ಗರಿಷ್ಠ 34 ಜನರಿಗೆ ಅವಕಾಶವಿದೆ. ಹೀಗಾಗಿ ಇನ್ನೂ 7 ಸ್ಥಾನ ಖಾಲಿ ಉಳಿದಂತಾಗುತ್ತದೆ.
ತೀವ್ರ ಚರ್ಚೆ: ಈ ಬಾರಿ ಸಚಿವ ಸಂಪುಟಕ್ಕೆ ಒಮ್ಮೆಗೆ ಎಷ್ಟು ಮಂದಿ ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ತೀವ್ರ ಚರ್ಚೆ ನಡೆಯಿತು. ಅಲ್ಲದೆ, ಹಿರಿಯ ಶಾಸಕರ ಬದಲು ಯುವ ಪೀಳಿಗೆಗೆ ಅವಕಾಶ ನೀಡಬೇಕೆ ಮತ್ತು ಜಾತಿವಾರು ಹಾಗೂ ಪ್ರದೇಶವಾರು ಯಾವ ರೀತಿ ಪ್ರಾತಿನಿಧ್ಯ ನೀಡಬೇಕು ಎಂಬ ಬಗ್ಗೆಯೂ ತೀವ್ರ ಚರ್ಚೆ ಆಯಿತು. ಅಂತಿಮವಾಗಿ ಮೊದಲ ಹಂತದಲ್ಲಿ 25 ಸಚಿವರ ಸೇರ್ಪಡೆಗೆ ನಿರ್ಧರಿಸಲಾಯಿತು. ಆದರೆ, ಈ 25 ಸಚಿವರ್ಯಾರು ಎಂಬ ಬಗ್ಗೆ ತಡರಾತ್ರಿಯವರೆಗೆ ನಿರ್ಣಯ ಆಗಿರಲಿಲ್ಲ. ಶನಿವಾರ ಪ್ರಮಾಣ ವಚನ ನಿಗದಿಯಾಗಿರುವುದರಿಂದ ಈ ವೇಳೆಗೆ ಪಟ್ಟಿಅಖೈರುಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ನಾರಾಯಣ ನೇತ್ರಾಲಯದ ಪ್ರಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನ!
ವೇಣು ನಿವಾಸದಲ್ಲಿ ಸಭೆ: ಸಚಿವ ಸಂಪುಟದ ಬಗ್ಗೆ ನಿರ್ಧರಿಸಲು ಮಧ್ಯಾಹ್ನ 1.50ಕ್ಕೆ ಉಭಯ ನಾಯಕರು ದೆಹಲಿಗೆ ಆಗಮಿಸಿದ್ದು, ಸಿದ್ದರಾಮಯ್ಯ ಅವರು ಮೌರ್ಯ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರೆ, ಡಿ.ಕೆ.ಶಿವಕುಮಾರ್ ಅವರು ಸೋದರನೂ ಆಗಿರುವ ಸಂಸದ ಡಿ.ಕೆ.ಸುರೇಶ್ ಮನೆಯಲ್ಲಿದ್ದರು. ನಂತರ ಅಪರಾಹ್ನ 3.30ಕ್ಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ನಿವಾಸದಲ್ಲಿ ಸಭೆ ನಡೆದಿದ್ದು, ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಕೂಡ ಪಾಲ್ಗೊಂಡಿದ್ದರು.
ತರುವಾಯ ಸಂಜೆ 4 ಗಂಟೆಗೆ ವೇಣುಗೋಪಾಲ್ ಮನೆಗೆ ಡಿ.ಕೆ.ಶಿವಕುಮಾರ್ ಆಗಮಿಸಿ ಸುರ್ಜೇವಾಲಾ, ವೇಣು ಜತೆ ಪ್ರತ್ಯೇಕ ಸಭೆ ನಡೆಸಿದರು. ಸುಮಾರು 1 ಗಂಟೆ 10 ನಿಮಿಷ ಮೂವರೂ ನಾಯಕರು ಸಂಪುಟ ವಿಸ್ತರಣೆ ಕುರಿತು ಚರ್ಚಿಸಿದರು. ಆ ಬಳಿಕ ಸಂಜೆ 6 ಗಂಟೆಗೆ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ನಿವಾಸದಲ್ಲಿ ಸಭೆ ನಡೆಸಲಾಯಿತು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸುರ್ಜೇವಾಲಾ, ವೇಣುಗೋಪಾಲ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಭೆಯಲ್ಲಿದ್ದರು. 1 ತಾಸು ನಡೆದ ಸಭೆಯಲ್ಲಿ ಸಂಪುಟ ವಿಸ್ತರಣೆ ಸೇರಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ಆ ಬಳಿಕ ರಾತ್ರಿ 8.30ಕ್ಕೆ ವೇಣುಗೋಪಾಲ್ ಅವರ ನಿವಾಸದಲ್ಲಿ ಮತ್ತೆ ಸಭೆ ನಡೆದಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪಾಲ್ಗೊಂಡರು.
ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಹಾಸನದಿಂದ ಸ್ಪರ್ಧಿಸಿದರೆ ಪ್ರಜ್ವಲ್ ನಿಲ್ಲಲ್ಲ: ಭವಾನಿ ರೇವಣ್ಣ
ಸಂಭವನೀಯ ಸಚಿವರ ಪಟ್ಟಿ
ಬೆಂಗಳೂರು ನಗರ: ಬೈರತಿ ಸುರೇಶ್, ಕೆ.ಜೆ.ಜಾಜ್‌ರ್, ರಾಮಲಿಂಗಾರೆಡ್ಡಿ, ಎನ್.ಎ.ಹ್ಯಾರಿಸ್, ಎಂ.ಕೃಷ್ಣಪ್ಪ, ದಿನೇಶ್ ಗುಂಡೂರಾವ್, ಜಮೀರ್ ಅಹಮದ್ ಖಾನ್, ಕೃಷ್ಣ ಬೈರೇಗೌಡ
ಬೆಳಗಾವಿ: ಸತೀಶ್ ಜಾರಕಿಹೊಳಿ, ಲಕ್ಷ್ಮಣ ಸವದಿ, ಲಕ್ಷ್ಮೀ ಹೆಬ್ಬಾಳ್ಕರ್
ಬಾಗಲಕೋಟೆ: ಆರ್.ಬಿ. ತಿಮ್ಮಾಪುರ
ವಿಜಯಪುರ: ಎಂ.ಬಿ.ಪಾಟೀಲ್, ಶಿವಾನಂದ್ ಪಾಟೀಲ್
ಕಲಬುರಗಿ: ಪ್ರಿಯಾಂಕ್ ಖರ್ಗೆ, ಶರಣ್ ಪ್ರಕಾಶ್ ಪಾಟೀಲ್
ಯಾದಗಿರಿ: ಶರಣಬಸಪ್ಪ ದರ್ಶನಾಪುರ
ಬೀದರ್: ರಹೀಂ ಖಾನ್, ಈಶ್ವರ ಖಂಡ್ರೆ
ಕೊಪ್ಪಳ: ಬಸವರಾಜ ರಾಯರೆಡ್ಡಿ
ಗದಗ: ಎಚ್.ಕೆ.ಪಾಟೀಲ್
ಧಾರವಾಡ: ವಿನಯ್ ಕುಲಕರ್ಣಿ
ಹಾವೇರಿ: ರುದ್ರಪ್ಪ ಲಮಾಣಿ
ಬಳ್ಳಾರಿ: ಇ.ತುಕಾರಾಂ
ಚಿತ್ರದುರ್ಗ: ರಘುಮೂರ್ತಿ
ದಾವಣಗೆರೆ: ಎಸ್.ಎಸ್.ಮಲ್ಲಿಕಾರ್ಜುನ
ಶಿವಮೊಗ್ಗ: ಮಧು ಬಂಗಾರಪ್ಪ/ ಬಿ.ಕೆ.ಸಂಗಮೇಶ್ವರ್
ತುಮಕೂರು: ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ
ಚಿಕ್ಕಬಳ್ಳಾಪುರ: ಸುಬ್ಬಾರೆಡ್ಡಿ
ಕೋಲಾರ: ನಾರಾಯಣಸ್ವಾಮಿ
ಮಂಡ್ಯ: ಎನ್.ಚೆಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ
ಮಂಗಳೂರು: ಯು.ಟಿ.ಖಾದರ್
ಮೈಸೂರು: ಡಾ.ಎಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್
ಚಾಮರಾಜನಗರ: ಪುಟ್ಟರಂಗಶೆಟ್ಟಿ
ಕೊಡಗು: ಎ.ಎಸ್.ಪೊನ್ನಣ್ಣ
ವಿಧಾನಪರಿಷತ್: ಬಿ.ಕೆ.ಹರಿಪ್ರಸಾದ್, ಸಲೀಂ ಅಹಮದ್, ದಿನೇಶ್ ಗೂಳಿಗೌಡ
