Asianet Suvarna News Asianet Suvarna News

ನಾರಾಯಣ ನೇತ್ರಾಲಯದ ಪ್ರಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನ!

ನಾರಾಯಣ ನೇತ್ರಾಲಯದ ಪ್ರಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಇಂದು ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಇಂದು ಆಸ್ಪತ್ರೆಗೆ ಬಂದು ರೋಗಿಗಳಿಗೆ ಡಾ. ಭುಜಂಗ ಶೆಟ್ಟಿ ಚಿಕಿತ್ಸೆ ನೀಡಿದ್ದರು. 

Renowned Ophthalmologist Narayan Ophthalmology dr bhujanga shetty is no more gvd
Author
First Published May 19, 2023, 10:36 PM IST

ಬೆಂಗಳೂರು (ಮೇ.19): ಖ್ಯಾತ ನೇತ್ರತಜ್ಞ ಹಾಗೂ ನಾರಾಯಣ ನೇತ್ರಾಲಯದ ಮುಖ್ಯಸ್ಥರಾದ ಡಾ.ಕೆ. ಭುಜಂಗಶೆಟ್ಟಿ (69) ಅವರು ಹೃದಯಾಘಾತದಿಂದ ಶುಕ್ರವಾರ ಸಂಜೆ ನಿಧನ ಹೊಂದಿದ್ದಾರೆ. ರಾಜಾಜಿನಗರ ಕಾರ್ಡ್‌ ರಸ್ತೆಯಲ್ಲಿನ ನಾರಾಯಣ ನೇತ್ರಾಲಯದಲ್ಲಿ ಎಂದಿ​ನಂತೆ ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ಅವರು ಸಂಜೆ ಮನೆಗೆ ಮರಳಿದ್ದರು ಹಾಗೂ ಜಿಮ್‌ನಲ್ಲಿ ವ್ಯಾಯಾಮ ಮಾಡಿದ್ದರು. ನಂತರ ಸಂಜೆ 6 ಗಂಟೆಯಲ್ಲಿ ಎದೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕೂಡಲೇ ಯಶವಂತಪುರದ ಮಣಿಪಾಲ್‌ (ಕೊಲಂಬಿಯಾ ಏಷಿಯಾ) ಆಸ್ಪತ್ರೆಗೆ ಕರೆ ತರಲಾಗಿತ್ತು.

ಆದರೆ, ಈ ವೇಳೆಗೆ ತೀವ್ರ ಹೃದಯಾಘಾತ ಸಂಭವಿಸಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಅವರಿಗೆ ಪತ್ನಿ, ಒಬ್ಬ ನಾರಾಯಣ ನೇತ್ರಾಲಯದಲ್ಲೇ ಕಾರ್ಯನಿರ್ವಹಿಸುತ್ತಿರುವ ಪುತ್ರ, ಪುತ್ರಿ ಇದ್ದಾರೆ. ಶನಿವಾರ ಬೆಳಗ್ಗೆ 11 ಗಂಟೆಗೆ ರಾಜಾಜಿನಗರ ಇಸ್ಕಾನ್‌ ಪಕ್ಕದ ನಾರಾಯಣ ನೇತ್ರಾಲಯದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಚಾಮರಾಜನಗರ ಮೌಢ್ಯ ಅಳಿಸಿದ್ದ ಸಿದ್ದರಾಮಯ್ಯಗೆ ಮತ್ತೆ ಸಿಎಂ ಪಟ್ಟ!

ನೇತ್ರದಾನ ಪ್ರೇರಕ: ವರನಟ ಡಾ. ರಾಜ್‌ಕುಮಾರ್‌, ಡಾ. ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಹಲವರ ನೇತ್ರದಾನ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರವಹಿಸಿದ್ದರು. ನೇತ್ರದಾನದ ಬಗ್ಗೆ ರಾಜ್ಯಾದ್ಯಂತ ಜಾಗೃತಿ ಮೂಡಿಸಿದ್ದ ಅವರು ಸಾವಿರಾರು ಅಂಧರಿಗೆ ದೃಷ್ಟಿಮರಳಲು ನೆರವಾಗಿದ್ದರು. ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ನೇತ್ರದಾನದ ಬಳಿಕ ನಾರಾಯಣ ನೇತ್ರಾಲಯ ಮೂಲಕ ನೇತ್ರದಾನ ಮಾಡಲು ಸಾವಿರಾರು ಮಂದಿ ನೋಂದಾಯಿಸಿಕೊಳ್ಳುವ ಮೂಲಕ ಹೊಸ ಕ್ರಾಂತಿ ಮಾಡಿದ್ದರು.

ಬೆಂಗಳೂರಿನ ಖ್ಯಾತ ನೇತ್ರತಜ್ಞ: 1978 ರಲ್ಲಿ ಎಂಬಿಬಿಎಸ್‌ ಪದವಿ ಪೂರೈಸಿದ್ದ ಅವರು 1982 ರವರೆಗೆ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರದ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಸ್ವಂತ ಚಿಕಿತ್ಸಾಲಯ ಶುರು ಮಾಡಿದ ಅವರು ದೂರದೃಷ್ಟಿಯಿಂದ ವೈದ್ಯಕೀಯ ವಲಯದಲ್ಲಿ ದೊಡ್ಡ ಹೆಸರು ಮಾಡಿದರು. 1993ರ ವೇಳೆಗೆ ರಾಜಾಜಿನಗರದಲ್ಲಿ ನಾರಾಯಣ ನೇತ್ರಾಲಯ ಹೆಸರಿನಲ್ಲಿ ಕಾರ್ಪೊರೇಟ್‌ ಮಾದರಿ ಆಸ್ಪತ್ರೆ ನಿರ್ಮಿಸಿ ಗಮನ ಸೆಳೆದಿದ್ದರು.

ಗುಣಮಟ್ಟದ ಕಣ್ಣಿನ ಆರೈಕೆಗೆ ದೇಶಾದ್ಯಂತ ಹೆಸರು ವಾಸಿಯಾಗಿದ್ದ ಅವರು ಆಧುನಿಕ ಉಪಕರಣಗಳ ಮೂಲಕ ಸೂಕ್ಷ್ಮ ಕಣ್ಣಿನ ಸಮಸ್ಯೆಗಳಿಗೂ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲು ಹೆಸರಾಗಿದ್ದರು. ಅವರ ನಿರಂತರ ಶ್ರಮದಿಂದ ನಾರಾಯಣ ಕಣ್ಣಿನ ಆಸ್ಪತ್ರೆಯು ಕರ್ನಾಟಕದ ಅತಿದೊಡ್ಡ ಸೂಪರ್‌ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ರೂಪ ಪಡೆದಿತ್ತು.

ಮಧುಮೇಹ ನಿಯಂತ್ರಣ ಜಾಗೃತಿ: ಆಹಾರದ ಮೂಲಕ ಮಧುಮೇಹ ಗುಣಪಡಿಸುವ ಕುರಿತು ಡಯೆಟ್‌ ಪ್ಲಾನ್‌ ಪ್ರಚಾರ ಮಾಡುತ್ತಿದ್ದರು. ಮಧುಮೇಹಕ್ಕೆ ನಿರಂತರ ಮಾತ್ರೆಗಳನ್ನು ತೆಗೆದುಕೊಳ್ಳುವುದು ಪರಿಹಾರವಲ್ಲ. ಬದಲಿಗೆ ಆಹಾರದ ಮೂಲಕವೇ ಮಧುಮೇಹವನ್ನು ಸಂಪೂರ್ಣ ಗುಣಪಡಿಸಬಹುದು ಎಂದು ವಾದ ಮಂಡಿಸಿದ್ದರು. ಅಲ್ಲದೆ ಈ ಕುರಿತು ಪುಸ್ತಕಗಳನ್ನು ಬರೆದು ಪ್ರಚಾರದಲ್ಲಿ ತೊಡಗಿದ್ದರು.

ಡಿ.ಕೆ.ಶಿವಕುಮಾರ್ ಸಂತಾಪ: ಖ್ಯಾತ ನೇತ್ರತಜ್ಞ ಡಾ. ಕೆ. ಭುಜಂಗ ಶೆಟ್ಟಿ ಅವರ ನಿಧನಕ್ಕೆ ನಿಯೋಜಿತ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. "ಭುಜಂಗ ಶೆಟ್ಟಿ ಅವರು ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರ. ರಾಜ್ಯ ಕಂಡ ಶ್ರೇಷ್ಠ ವೈದ್ಯರಲ್ಲಿ ಒಬ್ಬರು. ಜನರಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸುತ್ತಾ ಬಹಳ ದೂರದೃಷ್ಟಿ ಹೊಂದಿದ್ದ ವೈದ್ಯರಾಗಿದ್ದರು. ನಾರಾಯಣ ನೇತ್ರಾಲಯದ ಮುಖ್ಯಸ್ಥರಾಗಿ ಭುಜಂಗ ಶೆಟ್ಟಿ ಅವರು ಈ ಸಂಸ್ಥೆಯನ್ನು ಅತ್ಯುನ್ನತ ಮಟ್ಟಕ್ಕೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಸಾರ್ವಜನಿಕರಿಗೆ ಸೇವೆ ಒದಗಿಸಿಕೊಂಡು ಬಂದಿದ್ದವರು.

ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸೇವೆಗೆ 2010 ರಲ್ಲಿ ರಾಜ್ಯೋತ್ಸವ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ. ಭುಜಂಗ ಶೆಟ್ಟಿ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ಬೇಸರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಸದಸ್ಯರು ಹಾಗೂ ಆತ್ಮೀಯರಿಗೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದು ಶಿವಕುಮಾರ್ ಅವರು ತಮ್ಮ ಸಂತಾಪ ನುಡಿಯಲ್ಲಿ ತಿಳಿಸಿದ್ದಾರೆ.

ರಾಮ​ನ​ಗ​ರ​ ಕ್ಷೇತ್ರ​ದಲ್ಲಿಯೇ ರಾಜ​ಕೀ​ಯ​ ಮರು ಜನ್ಮ: ನಿಖಿಲ್‌ ಕುಮಾ​ರ​ಸ್ವಾಮಿ

ತೀವ್ರ ಸ್ವರೂಪದ ಹೃದಯಾಘಾತ: ಏಳುವರೆಗೆ ಮನೆಯಲ್ಲಿ ವ್ಯಾಯಾಮ ಮಾಡುವಾಗ ಭುಜಂಗ ಶೆಟ್ಟಿಯವರಿಗೆ ತೀವ್ರ ಸ್ವರೂಪದ ಹೃದಯಾಘಾತವಾಗಿದೆ. ಕೂಡಲೆ ನಮ್ಮ ಆಸ್ಪತ್ರೆಗೆ ಕರೆತಂದರು. ಇಲ್ಲಿ ನಾವು ಎಮರ್ಜೆನ್ಸಿಯಲ್ಲಿ ಅಡ್ಮಿಟ್ ಮಾಡ್ಕೊಂಡು ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದ್ವಿ. ಆಸ್ಪತ್ರೆಗೆ ಕರೆತರುವ ವೇಳೆ ಪಲ್ಸ್ ವರ್ಕ್ ಆಗ್ತಿರ್ಲಿಲ್ಲ. ಎಲ್ಲಾ ರೀತಿಯ ಪ್ರಯತ್ನ ಮಾಡಿದೆವು. ಆದರೆ 9:40ಕ್ಕೆ ಕೊನೆಯುಸಿರೆಳೆದರು ಎಂದು ಯಶವಂತಪುರ ಮಣಿಪಾಲ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಫಿರೋಜ್ ಅಹ್ಮದ್ ತಿಳಿಸಿದ್ದಾರೆ.
 

Follow Us:
Download App:
  • android
  • ios