5 ಮಂತ್ರಿಗಳಿಂದ ಉಮೇದುವಾರಿಕೆ ಸಲ್ಲಿಕೆ, ಇಂದು, ನಾಡಿದ್ದು ರಜೆ, ಏ.20 ಕೊನೆ ದಿನ.
ಬೆಂಗಳೂರು(ಏ.14): ಜಿದ್ದಾಜಿದ್ದಿನ ಚುನಾವಣಾ ಅಖಾಡಕ್ಕೆ ಅಧಿಕೃತವಾಗಿ ಗುರುವಾರ ಅಧಿಸೂಚನೆ ಹೊರಡಿಸಲಾಗಿದ್ದು, ಮೊದಲ ದಿನವೇ ಘಟಾನುಘಟಿಗಳು ಸೇರಿದಂತೆ ಇತರೆ ಅಭ್ಯರ್ಥಿಗಳಿಂದ 221 ಉಮೇದುವಾರಿಕೆಗಳು ಸಲ್ಲಿಕೆಯಾಗಿವೆ. ಬಿಜೆಪಿಯಿಂದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಮತ್ತು ಕಾಂಗ್ರೆಸ್‌ನಿಂದ ಶಾಸಕ ಶಿವಾನಂದ ಪಾಟೀಲ್, ರೂಪಕಲಾ, ರಾಜಶೇಖರ್, ಗಂಗಾಂಬಿಕೆ ಮಲ್ಲಿಕಾರ್ಜುನ್, ಪಕ್ಷೇತರ ಆಗಿ ಕೆಜಿಎಫ್ ಬಾಬು ಪತ್ನಿ ಶಾಜಿಯಾ ತರನ್ನಮ್ ಸೇರಿದಂತೆ ಇತರೆ ಹುರಿಯಾಳುಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಕೆ ಮಾಡಿದರು. ಒಟ್ಟು 221 ನಾಮಪತ್ರಗಳು ಸಲ್ಲಿಕೆಯಾಗಿವೆ.
221 ನಾಮಪತ್ರಗಳ ಪೈಕಿ 197 ನಾಮಪತ್ರಗಳನ್ನು ಪುರುಷರು, 24 ನಾಮಪತ್ರಗಳನ್ನು ಮಹಿಳೆಯರು ಸಲ್ಲಿಸಿದ್ದಾರೆ. ರಾಷ್ಟ್ರ ಮತ್ತು ರಾಜ್ಯ ಪಕ್ಷಗಳಾದ ಬಿಜೆಪಿಯಿಂದ 27, ಕಾಂಗ್ರೆಸ್‌ನಿಂದ 26, ಜೆಡಿಎಸ್‌ನಿಂದ 12, ಎಎಪಿಯಿಂದ 10, ಬಿಎಸ್‌ಪಿಯಿಂದ ಒಂದು ನಾಮಪತ್ರಗಳು ಸಲ್ಲಿಕೆಯಾಗಿವೆ. ನೋಂದಾಯಿತ ಪಕ್ಷಗಳಿಂದ ಗುರುತಿಸಿರುವ 100 ನಾಮಪತ್ರಗಳು ಸಲ್ಲಿಕೆ ಮಾಡಲಾಗಿದೆ. ಇನ್ನು, 45 ನಾಮಪತ್ರಗಳು ಪಕ್ಷೇತರರಿಂದ ಸಲ್ಲಿಕೆಯಾಗಿವೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುವ ಮುನ್ನ ತಮ್ಮ ಕಾರ್ಯಕರ್ತರು, ಬೆಂಬಲಿಗರಿಂದ ಮೆರವಣಿಗೆಯಲ್ಲಿ ಸಾಗಿ ಉಮೇದುವಾರಿಕೆಯನ್ನು ಸಲ್ಲಿಕೆ ಮಾಡಿದರು. ಹಲವು ಅಭ್ಯರ್ಥಿಗಳು ಎರಡೆರಡು ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ.
Chikkamagaluru: ಮೊದಲ ದಿನವೇ 5 ನಾಮಪತ್ರ ಸ್ವೀಕಾರ: ಬಿಜೆಪಿಯಿಂದ ಇಬ್ಬರು, ಪ್ರಜಾಕೀಯದಿಂದ ಒಬ್ಬರು ನಾಮಪತ್ರ ಸಲ್ಲಿಕೆ
ಮುಂದಿನ ಗುರುವಾರದವರೆಗೆ (ಏ.20) ನಾಮಪತ್ರ ಸಲ್ಲಿಕೆ ಮಾಡಬಹುದು. ಏ.14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಮತ್ತು 16ರಂದು ಭಾನುವಾರ ಸಾರ್ವತ್ರಿಕ ರಜೆ ದಿನವಾಗಿರುವುದರಿಂದ ಅಂದು ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ. ಏ.21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಏ.24ರಂದು ಕೊನೆಯ ದಿನವಾಗಿದೆ. ಅಂದು ಮಧ್ಯಾಹ್ನ 3 ಗಂಟೆಯೊಳಗಾಗಿ ನಾಮಪತ್ರ ಹಿಂಪಡೆಯಬಹುದು. ಮೇ 10ರಂದು ಮತದಾನ ಜರುಗಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ.
ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿರುವುದಾಗಿ ಚುನಾವಣಾ ಆಯೋಗ ಹೇಳಿದೆ. ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಸೇರಿದಂತೆ ಒಟ್ಟು ಐವರಿಗೆ ಮಾತ್ರ ಚುನಾವಣಾಧಿಕಾರಿಗಳ ಕಚೇರಿ ಪ್ರವೇಶಿಸಲು ಅವಕಾಶ ಇದೆ. 100 ಮೀಟರ್ ವ್ಯಾಪ್ತಿಯಲ್ಲಿ ಮೂರು ವಾಹನಗಳ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ ಈಗಾಗಲೇ ಚುನಾವಣೆಗೆ ಅವಶ್ಯವಿರುವ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 146 ವೆಚ್ಚ ನಿರ್ವಹಣಾ ವೀಕ್ಷಕರು, 120 ಸಾಮಾನ್ಯ ವೀಕ್ಷಕರು ಸೇರಿದಂತೆ 37 ಪೊಲೀಸ್ ವೀಕ್ಷಕರನ್ನು ನಿಯೋಜಿಸಲಾಗಿದೆ.
ಕೆಜಿಎಫ್ ಬಾಬು ಆಸ್ತಿ 1622 ಕೋಟಿ!
ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು ತಮ್ಮ ಪತ್ನಿ ಶಾಜಿಯಾರಿಂದ ನಾಮಪತ್ರ ಸಲ್ಲಿಕೆ ಮಾಡಿಸಿದ್ದಾರೆ. ತಮ್ಮ ಬಳಿ 1622.11 ಕೋಟಿ ರು. ಆಸ್ತಿ ಇರುವುದಾಗಿ ಘೋಷಿಸಿದ್ದಾರೆ. ಈ ಪೈಕಿ 1474 ಕೋಟಿ ರು. ಮೌಲ್ಯದ ಕೃಷಿಯೇತರ ಜಮೀನು ಸೇರಿದೆ ಎಂದಿದ್ದಾರೆ.
ಟೆಂಪಲ್ ರನ್ ಮುಗಿಸಿ ಬೆಂಗಳೂರಿಗೆ ಬೊಮ್ಮಾಯಿ ವಾಪಸ್, ಏ.15ಕ್ಕೆ ನಾಮಪತ್ರ ಸಲ್ಲಿಕೆ!
ಮಲ್ಲಿಕಾರ್ಜುನ್ ಬಳಿ 150 ಕೋಟಿ ಆಸ್ತಿ
ದಾವಣಗೆರೆ: ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಚರ, ಸ್ಥಿರ ಆಸ್ತಿ ಸೇರಿದಂತೆ ಒಟ್ಟು 150 ಕೋಟಿ ರು.ಗೂ ಅಧಿಕ ಆಸ್ತಿ ಇರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. 16 ಕೇಜಿಗೂ ಅಧಿಕ ಚಿನ್ನ ಹೊಂದಿರುವುದಾಗಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
