Explainer: ರೆಸ್ಲಿಂಗ್‌ನಲ್ಲಿ ತೂಕ ಇಳಿಸೋದು ಅಂದ್ರನೇ ಸಾಧನೆ, ಇದೇ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ 3ನೇ ರೆಸ್ಲರ್ ವಿನೇಶ್!
ವಿನೇಶ್ ಪೋಗಟ್ ಒಲಿಂಪಿಕ್ಸ್ ಫೈನಲ್‌ನಿಂದ ಅನರ್ಹಗೊಂಡಿದ್ದು ಏಕೆ? ಒಲಿಂಪಿಕ್ಸ್ ರೆಸ್ಲಿಂಗ್‌ನಲ್ಲಿ ತೂಕ ಪರೀಕ್ಷೆ ಹೇಗಾಗುತ್ತದೆ.. ಇಲ್ಲಿದೆ ಕಂಪ್ಲೀಟ್ ಸ್ಟೋರಿ..
ಪ್ಯಾರಿಸ್ (ಆ.7): ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬುಧವಾರ ಬೆಳಗ್ಗೆ ತೂಕ ಪರೀಕ್ಷೆಯ ವೇಳೆ 50.1 ಕೆಜಿ ತೂಕವಿದ್ದ ಕಾರಣಕ್ಕೆ ವಿನೇಶ್ ಪೋಗಟ್ ಮಹಿಳೆಯರ 50 ಕೆಜಿ ರೆಸ್ಲಿಂಗ್ ಫೈನಲ್‌ನಿಂದ ಅನರ್ಹಗೊಂಡಿದ್ದಾರೆ. ವಿಶ್ವ ಕುಸ್ತಿ ಸಂಸ್ಥೆಯ ತೂಕ ಪರೀಕ್ಷೆಯ ನಿಯಮಗಳು ಕಠಿಣ, ಅದರಲ್ಲೂ ಒಲಿಂಪಿಕ್ಸ್ ರೆಸ್ಲಿಂಗ್‌ನಲ್ಲಿ ಇದು ಇನ್ನಷ್ಟು ಕಠಿಣವಾಗಿರುತ್ತದೆ. ಕಾಂಬಾಟ್ ಸ್ಪೋರ್ಟ್ಸ್ ಅಂದ್ರೆ ರೆಸ್ಲಿಂಗ್, ಜುಡೋ, ಟೇಕ್ವಾಂಡೋ ರೀತಿಯ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಸ್ಪರ್ಧೆಗೂ ಮುನ್ನ ಎದುರಿಸುವ ಮೊದಲ ಯುದ್ದವೇನೆಂದರೆ, ಅದು ತೂಕ ಪರೀಕ್ಷೆ. . ಒಲಂಪಿಕ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್, ಹಿಂದೊಮ್ಮೆ ಮಾತನಾಡುತ್ತಾರೆ, ಅಥ್ಲೀಟ್‌ಗಳ ತೂಕ ಇಳಿಕೆಯ ಅಭ್ಯಾಸ ಎಷ್ಟು ಕಠಿಣ ವಾಗಿರುತ್ತದೆಯೆಂದರೆ, ಇದಕ್ಕಾಗಿ ಅವರು ಒಂದು ಪದಕಕ್ಕೆ ಅರ್ಹರಾಗಿರುತ್ತಾರೆ ಎಂದು ತಮಾಷೆಗೆ ಹೇಳಿದ್ದರು.
ಹಾಗಿದ್ದರೆ ವೇಟ್ ಕಟ್ ಅಂದ್ರೆ ಏನು?: 50 ಕೆಜಿ ವಿಭಾಗ ಅಂದ್ರೆ 50 ಕೆಜಿಗಿಂತ ಒಳಗಿನವರು ಮಾತ್ರವೇ ಸ್ಪರ್ಧೆ ಮಾಡ್ತಾರೆ ಅಂತಲ್ಲ. ಆ ಇವೆಂಟ್ ನಡೆಯುವ ಸಮಯದಲ್ಲಿ ಅವರ ತೂಕ 50 ಕೆಜಿ ಅಥವಾ ಅದರ ಒಳಗೆ ಇರಬೇಕು ಎನ್ನುವುದು ಅದರ ಅರ್ಥ. ಇದಕ್ಕಾಗಿ ಅಥ್ಲೀಟ್‌ಗಳು ಹಂತ ಹಂತವಾಗಿ ವೇಟ್ ಕಟ್ ಮಾಡುವ ಪ್ರಕ್ರಿಯೆಗೆ ಇಳಿಯುತ್ತಾರೆ. ಸ್ಪರ್ಧೆ ಆರಂಭಕ್ಕೂ ಮುನ್ನ ಅದಕ್ಕೊಂದು ವೇಳಾಪಟ್ಟಿ ಸಿದ್ದಮಾಡಿಕೊಂಡು ಅದರಂತೆ ವ್ಯಾಯಾಮ ಮಾಡುತ್ತಾರೆ. ಸಾಮಾನ್ಯವಾಗಿ ಇವೆಂಟ್ ನಡೆಯುವ ಎರಡು ವಾರಕ್ಕೂ ಮುನ್ನ ಅವರು ತಮ್ಮ ವೇಟ್ ಕಟ್ ಪ್ರಕ್ರಿಯೆಗೆ ಇಳಿಯುತ್ತಾರೆ. ಅವರ ಉದ್ದೇಶ ದೇಹದ ಕನಿಷ್ಠ ಶೇ. 10ರಷ್ಟು ತೂಕವನ್ನು ಕಡಿಮೆ ಮಾಡುವುದು. ಉದಾಹರಣೆಗೆ: ಯಾವುದಾದರೂ ಅಥ್ಲೀಟ್ 60 ಕೆಜಿ ಇದ್ದು, ಅವರು 57 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧೆ ಮಾಡುತ್ತಿದ್ದರೆ, ಎರಡು ವಾರಗಳ ಅವಧಿಯಲ್ಲಿ ಮೂರು ಕೆಜಿ ತೂಕವನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಂತ ಹಂತದ ಪ್ರಕ್ರಿಯೆ ಒಳಗಡೆ ಇರುತ್ತಾರೆ.
ವೇಟ್ ಕಟ್‌ನಲ್ಲಿ ಅತ್ಯಂತ ಕಠಿಣ ಸಂಗತಿ ಎಂದರೆ ಯಾವುದು: ತೂಕ ಪರೀಕ್ಷೆ ಮಾಡುವ 24 ಗಂಟೆಗಳು ಯಾವುದೇ ಅಥ್ಲೀಟ್‌ಗಳಿಗೆ ಪ್ರಮುಖ. ನಿಗದಿತ ಮಿತಿಯ ಒಳಗೆ ತೂಕ ಬರುವ ಸಲುವಾಗಿ ಅವರು ಗಂಟೆಗಟ್ಟಲೆ ಕಾರ್ಡಿಯೋ, ಸ್ಟೀಮ್, ಸೌನಾ ಸೆಷನ್‌ಗಳಲ್ಲಿ ಒಳಗಾಗುತ್ತಾರೆ. ಅದರೊಂದಿಗೆ ತೂಕವನ್ನು ನಿಗದಿತ ಮಿತಿಯ ಒಳಗೆ ತರಲು ಪ್ರಯತ್ನ ಮಾಡುತ್ತಾರೆ. ದೇಹದಲ್ಲಿ ಲಿಕ್ವಿಡ್‌ಅನ್ನು ಕಡಿಮೆ ಮಾಡಲು ಪ್ರಯತ್ನ ಮಾಡ್ತಾರೆ. ಇದು ದೇಹದ ತೂಕವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಕೆಲವರು ತೂಕ ಕಡಿಮೆ ಮಾಡಿಕೊಳ್ಳಲು ಕೂದಲು ಕೂಡ ಕಟ್ ಮಾಡಿಸಿಕೊಳ್ಳುತ್ತಾರೆ. ಇದು ಎಷ್ಟು ಕಠಿಣವಾದ ಪ್ರಕ್ರಿಯೆ ಎಂದರೆ, ಒಮ್ಮೊಮ್ಮೆ ಅಥ್ಲೀಟ್‌ಗಳಿಗೆ ನಿದ್ರೆ ಮಾಡಲು ಕೂಡ ಸಾಧ್ಯವಾಗೋದಿಲ್ಲ.
ಎರಡು ಬಾರಿ ತೂಕ ಪರೀಕ್ಷೆ: ಹೌದು, ರೆಸ್ಲರ್‌ಗಳಿಗೆ ಎರಡು ಬಾರಿ ತೂಕ ಪರೀಕ್ಷೆ ಆಗುತ್ತದೆ. ಪ್ರಾಥಮಿಕ ಸುತ್ತು ಆರಂಭವಾಗುವ ಬೆಳಗ್ಗೆ ಹಾಗೂ ಫೈನಲ್ ಪಂದ್ಯ ನಡೆಯುವ ದಿನದ ಬೆಳಗ್ಗೆ ತೂಕ ಪರೀಕ್ಷೆ ನಡೆಯುತ್ತದೆ. ಪ್ರಾಥಮಿಕ ಸುತ್ತು ನಡೆಯುವ ಮುನ್ನದ ತೂಕ ಪರೀಕ್ಷೆಯ ವೇಳೆ ವಿನೇಶ್ ತೂಕ 49.9 ಕೆಜಿ ಆಗಿತ್ತು. ಸೆಮಿಫೈನಲ್ ಪಂದ್ಯದ ಬಳಿಕ ಅವರ ತೂಕ 52.7 ಕೆಜಿ ಆಗಿತ್ತು. ಇದರಿಂದಾಗಿ ಇಡೀ ರಾತ್ರಿ ಒಂದು ತೊಟ್ಟು ನೀರು, ಆಹಾರ ಏನನ್ನೂ ಸೇವಿಸದೆ ವ್ಯಾಯಾಮ ಮಾಡಿದ್ದರು. ಆಕೆ ನಿದ್ರೆ ಕೂಡ ಮಾಡಿರಲಿಲ್ಲ. ರಾತ್ರಿಯಿಡೀ ಆಕೆಯನ್ನು ಸೌನಾ (ಬಿಸಿ ನೀರಿನ ಟಬ್‌ನಲ್ಲಿ ಕುಳಿತುಕೊಳ್ಳೋದು ) ಸೆಷನ್‌ನಲ್ಲಿ ಇರಿಸಲಾಗಿತ್ತು. ಇದರಿಂದಾಗಿ ಬೆಳಗ್ಗೆಯ ವೇಳೆ ಆಕೆಯ ದೇಹ ತೂಕ 50.1 ಕೆಜಿಗೆ ಇಳಿದಿತ್ತು. ಇದು ನಿಗದಿತ ಮಿತಿಗಿಂತ 100 ಗ್ರಾಂ ಜಾಸ್ತಿ.
ತೂಕ ಪರೀಕ್ಷೆಯಲ್ಲಿ ಪಾಸ್ ಆದ ನಂತರ ಏನಾಗುತ್ತದೆ: ಸ್ಪರ್ಧೆಯ ಮೊದಲ ದಿನ ತೂಕ ಪರೀಕ್ಷೆಯಲ್ಲಿ ಪಾಸ್ ಆದ ಬಳಿಕ, ಸ್ಪರ್ಧಿ ಎಲೆಕ್ಟ್ರೋಲೈಟ್‌ಗಳು, ಸರಳ ಕಾರ್ಬೋಹೈಡ್ರೇಟ್‌ಗಳು ಮತ್ತು ಕೆಲವು ಪ್ರೋಟೀನ್‌ಗಳನ್ನು ಸೇವನೆ ಮಾಡುತ್ತಾರೆ. ಇದು ದಿನವಿಡೀ ಹೋರಾಟಕ್ಕೆ ಶಕ್ತಿ ನೀಡುತ್ತದೆ. ಒಲಿಂಪಿಕ್ ಕುಸ್ತಿಯಲ್ಲಿ ಮೊದಲ ದಿನ ಮೂರು ಪಂದ್ಯಗಳು ಇರುತ್ತದೆ. ಈ ಹಂತದಲ್ಲಿ ದೇಹ ಪೌಷ್ಟಿಕಾಂಶ ಹೊಂದಿರುವುದು ಬಹಳ ಮುಖ್ಯ. ಅದೇ ರೀತಿಯಲ್ಲಿ ಅತಿಯಾಗಿ ಕೂಡ ಸೇವನೆ ಮಾಡಬಾರದು. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಸಂಪೂರ್ಣ ನಿಶಕ್ತಿಯಾಗಿರುವ ದೇಹಕ್ಕೆ ಸಣ್ಣ ಪ್ರಮಾಣದಲ್ಲಿ ಯಾವುದೇ ಪ್ರೋಟೀನ್ ನೀಡಿದರೂ ಅದು ಹೀರಿಕೊಳ್ಳುತ್ತದೆ. ಇದು ತೂಕ ಏರಿಕೆಗೆ ಕಾರಣವಾಗುತ್ತದೆ.
ವೇಟ್ ಕಟ್ ಬಗ್ಗೆ ಇರುವ ನಿಯಮವೇನು: ಯುಡಬ್ಲ್ಯೂಡಬ್ಲ್ಯೂನ ನಿಯಮಪುಸ್ತಕದ ಆರ್ಟಿಕಲ್ 8 ಕಾಂಪಿಟೇಷನ್ ಸಿಸ್ಟಮ್ ಪ್ರಕಾರ, 'ಮೆಡಿಕಲ್ ಕಂಟ್ರೋಲ್ ಹಾಗೂ ಮೊದಲ ತೂಕ ಪರೀಕ್ಷೆ ಆಯಾ ವಿಭಾಗದ ಸ್ಪರ್ಧೆಯ ಮೊದಲ ದಿನದಂದು ನಡೆಯುತ್ತದೆ. ಫೈನಲ್ಸ್ ಮತ್ತು ರಿಪೆಚೇಜ್‌ಗಳಿಗೆ ಅರ್ಹತೆ ಪಡೆದ ಕ್ರೀಡಾಪಟುಗಳು ಸಂಬಂಧಿಸಿದ ತೂಕದ ವಿಭಾಗದ ಎರಡನೇ ತೂಕ ಪರೀಕ್ಷೆ ಆಯಾ ದಿನದ ಬೆಳಗ್ಗೆ ಮತ್ತೊಮ್ಮೆ ನಡೆಯುತ್ತದೆ. 2ನೇ ತೂಕ ಪರೀಕ್ಷೆಯ ವೇಳೆ ಕೊಂಚವೂ ತೂಕ ಮೀರುವಂತಿಲ್ಲ. ವಿಶ್ವಕಪ್ ಹಾಗೂ ಇತರ ಅಂತಾರಾಷ್ಟ್ರೀಯ ಪಂದ್ಯಗಳಿಗೆ 2 ಕೆಜಿ ವರೆಗೆ ಟಾಲರೆನ್ಸ್ ಇರಲಿದೆ' ಎನ್ನುವ ನಿಯಮವಿದೆ.
ವಿನೇಶ್ ಅನರ್ಹ, ಗುಜ್‌ಮನ್-ಹಿಲ್ಡೆಬ್ರಾಂಡ್ ನಡುವೆ 50ಕೆಜಿ ರೆಸ್ಲಿಂಗ್ ಫೈನಲ್: ವಿಶ್ವ ಕುಸ್ತಿ ಅಧಿಕೃತ ಹೇಳಿಕೆ!
ಯುಡಬ್ಲ್ಯೂಡಬ್ಲ್ಯೂನ ಚಾಪ್ಟರ್ 3 ಆರ್ಟಿಕಲ್ 11ರ ಪ್ರಕಾರ, 'ಎಲ್ಲಾ ಸ್ಪರ್ಧೆಗಳಲ್ಲಿ ತೂಕ ಪರೀಕ್ಷೆ ಆಯಾ ವಿಭಾಗದ ಸ್ಪರ್ಧೆಗಳ ಬೆಳಗ್ಗೆ ನಡೆಯುತ್ತದೆ. ತೂಕ ಪರೀಕ್ಷೆ ಹಾಗೂ ವೈದ್ಯಕೀಯ ಸ್ಥಿತಿ ಪರೀಕ್ಷೆ 30 ನಿಮಿಷಗಳ ಕಾಲ ನಡೆಯುತ್ತದೆ. ಸಂಬಂಧಿತ ತೂಕ ವಿಭಾಗದ ಎರಡನೇ ದಿನದ ಬೆಳಿಗ್ಗೆ ರೆಪೆಚೇಜ್ ಮತ್ತು ಫೈನಲ್‌ಗಳಲ್ಲಿ ಭಾಗವಹಿಸುವ ಕುಸ್ತಿಪಟುಗಳು ಮಾತ್ರ ತೂಕ ಪರೀಕ್ಷೆಗೆ ಬರಬೇಕು. ಇದು 15 ನಿಮಿಷಗಳವರೆಗೆ ಇರುತ್ತದೆ' ಎಂದು ತಿಳಿಸುತ್ತದೆ.
'ವಿನೇಶ್ ನೀವು ಎಲ್ಲರಿಗೂ ಚಾಂಪಿಯನ್..' ಚಿನ್ನದ ಪದಕದ ಪಂದ್ಯದಿಂದ ಅನರ್ಹಗೊಂಡ ಬೆನ್ನಲ್ಲೇ ಮೋದಿ ಟ್ವೀಟ್!
ಹಾಲಿ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ 3ನೇ ರೆಸ್ಲರ್: ವಿನೇಶ್ ಪೋಗಟ್ ಹಾಲಿ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ ಮೂರನೇ ರೆಸ್ಲರ್ ಆಗಿದ್ದಾರೆ. ಇದಕ್ಕೂ ಮುನ್ನ ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸೆರ್ಬಿಯಾದ ಸ್ಟೀವನ್ ಮಿಕಿಕ್, ಪುರುಷರ 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಲೊವಾಕಿಯಾದ ಬ್ಯಾತ್ಯಾರ್‌ಬೆಕ್ ತಸ್ಕುಲೋವ್, ಪುರುಷರ 80-92 ಕೆಜಿ ಲೈಟ್ ಹೆವಿವೇಟ್ ವಿಭಾಗದಲ್ಲಿ ರಷ್ಯಾದ ಡೆನಿಲ್ಲಾ ಸೆಮೆನೋವ್ ಅನರ್ಹಗೊಂಡಿದ್ದಾರೆ.