'ವಿನೇಶ್ ನೀವು ಎಲ್ಲರಿಗೂ ಚಾಂಪಿಯನ್..' ಚಿನ್ನದ ಪದಕದ ಪಂದ್ಯದಿಂದ ಅನರ್ಹಗೊಂಡ ಬೆನ್ನಲ್ಲೇ ಮೋದಿ ಟ್ವೀಟ್!
ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆಜಿ ಮಹಿಳಾ ಕುಸ್ತಿ ವಿಭಾಗದ ಸ್ಪರ್ಧೆಯ ಚಿನ್ನದ ಪದಕದ ಪಂದ್ಯದಿಂದ ಅನರ್ಹಗೊಂಡ ವಿನೇಶ್ ಪೋಗಟ್ ಬೆಂಬಲಕ್ಕೆ ಪ್ರಧಾನಿ ನರೇಂದ್ರ ಮೋದಿ ನಿಂತಿದ್ದಾರೆ.
ನವದೆಹಲಿ (ಆ.7): ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮಹಾ ಆಘಾತವಾಗಿದೆ. ಮಹಿಳೆಯರ ಕುಸ್ತಿ ವಿಭಾಗದ 50ಕೆಜಿ ಸ್ಪರ್ಧೆಯಲ್ಲಿ ಐತಿಹಾಸಿಕವಾಗಿ ಫೈನಲ್‌ಗೇರಿದ್ದ ವಿನೇಶ್ ಪೋಗಟ್, ಹೆಚ್ಚಿನ ತೂಕದ ಕಾರಣದಿಂದಾಗಿ ಫೈನಲ್ ಪಂದ್ಯದಿಂದ ಅನರ್ಹರಾಗಿದ್ದಾರೆ. ಅವರೀಗ ಈ ಇವೆಂಟ್‌ನಲ್ಲಿ ಕೊನೆಯ ಸ್ಥಾನ ಪಡೆದ ರೆಸ್ಲರ್ ಆಗಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ನ ಹಠಾತ್ ನಿರ್ಧಾರದಿಂದ ಇಡೀ ಭಾರತಕ್ಕೆ ಅಘಾತವಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ವಿನೇಶ್ ಪೋಗಟ್ ಅವರ ಬೆಂಬಲಕ್ಕೆ ನಿಂತಿದ್ದು, ಅವರಿಗೆ ಸ್ಪೂರ್ತಿದಾಯಕ ಮಾತುಗಳನ್ನು ಆಡಿದ್ದಾರೆ. ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿನೇಶ್ ಪೋಗಟ್ ತೋರಿದ ವಿರೋಧಿ ನಿರ್ಧಾರದ ಕಾರಣದಿಂದಾಗಿ ಹೆಚ್ಚಿನವರು ಫೈನಲ್ ಪಂದ್ಯವೇನಾದರೂ ವಿನೇಶ್ ಪೋಗಟ್ ಗೆದ್ದಲ್ಲಿ ಮೋದಿ ಆಕೆಗೆ ಕರೆ ಮಾಡಿ ಅಭಿನಂದಿಸುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದರು. ಆದರೆ, ಆಕೆಯ ವೃತ್ತಿಜೀವನದಲ್ಲಿ ಎದುರಾದ ಅತ್ಯಂತ ಸಂಕಷ್ಟದ ಸಮಯದಲ್ಲಿ ಪ್ರಧಾನಿ ಮೋದಿ ಟ್ವೀಟ್ ಮಾಡಿ ಆಕೆಗೆ ಸಂತೈಸಿದ್ದಾರೆ.
'ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ. ಇಂದಿನ ಹಿನ್ನಡೆ ನನಗೆ ನೋವು ತಂದಿದೆ. ಇಲ್ಲಿನ ಪದಗಳು ನಾನು ಅನುಭವಿಸುತ್ತಿರುವ ಹತಾಶೆಯ ಅರ್ಥವನ್ನು ವ್ಯಕ್ತಪಡಿಸಬಹುದು ಎಂದು ನಾನು ಬಯಸುತ್ತೇನೆ. ಅದೇ ಸಮಯದಲ್ಲಿ, ನೀವು ಅಚಲ ಮನೋಭಾವವನ್ನು ಸಾರುತ್ತೀರಿ ಎಂದು ನನಗೆ ತಿಳಿದಿದೆ. ಸವಾಲುಗಳನ್ನು ಎದುರಿಸುವುದು ಯಾವಾಗಲೂ ನಿಮ್ಮ ಸ್ವಭಾವವಾಗಿದೆ. ಇನ್ನಷ್ಟು ಸ್ಟ್ರಾಂಗ್ ಆಗಿ ಮರಳಿ. ನಾವೆಲ್ಲರೂ ನಿಮ್ಮ ಬೆಂಬಲಕ್ಕೆ ಅಚಲವಾಗಿ ನಿಂತಿದ್ದೇವೆ..' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇನ್ನೊಂದೆಡೆ ವಿನೇಶ್ ಪೋಗಟ್‌ಗೂ ಕೂಡ ತಾವು ನಿಗದಿಗಿಂತ ಹೆಚ್ಚಿನ ತೂಕ ಹೊಂದಿದ್ದೇನೆ ಎನ್ನುವ ಅರಿವು ಕುಡ ಇತ್ತು. ಮಂಗಳವಾರ ರಾತ್ರಿ ಇಡೀ ದಿನ ಅವರು ಎಲ್ಲಾ ರೀತಿಯ ವ್ಯಾಯಾಮಗಳನ್ನು ಕೂಡ ಮಾಡಿದ್ದರು. ಆದರೆ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಹಾಗೂ ವಿಶ್ವ ರೆಸ್ಲಿಂಗ್ ಸಂಸ್ಥೆ ತೂಕದ ವಿಚಾರವಾಗಿ ತನ್ನದೇ ಆದ ಕೆಲವೊಂದು ನಿಯಮಗಳನ್ನು ಹೊಂದಿದೆ. ಪ್ರತಿ ದಿನದ ಪಂದ್ಯ ಆರಂಭಕ್ಕೂ 12 ಗಂಟೆಗಳ ಮುಂಚೆ ಕುಸ್ತಿಪಟು ತೂಕ ಪರೀಕ್ಷೆಗೆ ಒಳಗಾಗಬೇಕು. ಇದಾದ ಬಳಿಕ ಯಾವುದೇ ಬದಲಾವಣೆಗೆ ಅವಕಾಶ ಇರುವುದಿಲ್ಲ ಇದು ಮೊದಲ ಪ್ರಮುಖವಾದ ನಿಯಮವಾಗಿದೆ. ಮೆಡಿಕಲ್ ಟೆಸ್ಟ್ ಹಾಗೂ ತೂಕದ ಟೆಸ್ಟ್‌ಗೂ ಮುನ್ನ ಕುಸ್ತಿಪಟುಗಳು ತಮ್ಮ ಉಗುರುಗಳನ್ನು ಮೊನಚಾಗಿರದಂತೆ ಕತ್ತರಿಸಿಕೊಂಡಿರಬೇಕು. ಸ್ಪರ್ಧೆ ನಡೆಯುವ ಪ್ರತಿದಿನ ಬೆಳಗ್ಗೆ ಕುಸ್ತಿಪಟುಗಳು ರೆಫ್ರಿಗಳ ಎದುರು ತೂಕ ಪರೀಕ್ಷೆಗೆ ಒಳಗಾಗಬೇಕು. ಒಂದು ವೇಳೆ ನಿಗದಿತ ತೂಕಕ್ಕಿಂತ ಹೆಚ್ಚಾದಲ್ಲಿ ಅಂತಹ ಸ್ಪರ್ಧಿಗಳನ್ನು ತಕ್ಷಣವೇ ಅನರ್ಹ ಮಾಡಲಾಗುತ್ತದೆ.
ಅನರ್ಹಗೊಂಡ ಅಥ್ಲೀಟ್‌ಗಳಿಗೆ ಯಾವುದೇ ಸ್ಥಾನವನ್ನು ನೀಡಲಾಗುವುದಿಲ್ಲ. ಅವರಿಗೆ ಆ ಇವೆಂಟ್‌ನಲ್ಲಿ ಅನರ್ಹ ಎನ್ನುವ ಟ್ಯಾಗ್ ಮಾತ್ರವೇ ನೀಡಲಾಗುತ್ತದೆ. ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಕಾಲಿನ ಗಾಯಕ್ಕೆ ತುತ್ತಾಗಿ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿದ್ದ ವಿನೇಶ್ ಪೋಗಟ್ ಪಾಲಿಗೆ ಮತ್ತೆ ಅದೃಷ್ಟ ಕೈಕೊಟ್ಟಿದೆ.
ಖೇಲ್‌ರತ್ನ, ಅರ್ಜುನ ಪ್ರಶಸ್ತಿ ವಾಪಾಸ್ ಮಾಡುವ ನಿರ್ಧಾರ ಘೋಷಿಸಿದ ವಿನೇಶ್ ಪೋಗಟ್!