ಮೇರಿ ಕೋಮ್ ಬಾಕ್ಸಿಂಗ್ ಫೌಂಡೇಶನ್‌ಗೆ ಡ್ರೀಮ್ ಸ್ಪೋರ್ಟ್ಸ್ ಸಾಥ್
ಬಡತನ ಎದುರಿಸುತ್ತಿರುವ ಉದಯೋನ್ಮುಖ ಮಹಿಳಾ ಬಾಕ್ಸರ್‌ಗಳಿಗೆ ನೆರವಾಗಲು ಡ್ರೀಮ್ ಸ್ಪೋರ್ಟ್ಸ್ ಫೌಂಡೇಶನ್ ಹಾಗೂ ಮೇರಿ ಕೋಮ್ ರೀಜನಲ್ ಬಾಕ್ಸಿಂಗ್ ಫೌಂಡೇಶನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕೊಲ್ಕತಾ(ಮಾ.22): ದೇಶದಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ನೆರವಾಗಲು ಡ್ರೀಮ್ ಸ್ಪೋರ್ಟ್ಸ್ ಫೌಂಡೇಶನ್ ಸೋಮವಾರ(ಮಾ.22)ದಂದು ಮೇರಿ ಕೋಮ್ ರೀಜನಲ್ ಬಾಕ್ಸಿಂಗ್ ಫೌಂಡೇಶನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇಂಪಾಲದ 6 ಪ್ರತಿಭಾನ್ವಿತ ಮಹಿಳಾ ಬಾಕ್ಸರ್‌ಗಳಿಗೆ ನೆರವಾಗಲು ಮುಂದೆ ಬಂದಿದೆ.
ಭಾರತದ ಪ್ರಮುಖ ಸ್ಪೋರ್ಟ್ಸ್ ಟೆಕ್ನಾಲಜಿ ಕಂಪನಿಯಾಗಿರುವ ಡ್ರೀಮ್ ಸ್ಪೋರ್ಟ್ಸ್ ಫೌಂಡೇಶನ್, ಈ ಒಪ್ಪಂದದ ಮೂಲಕ ಮುಂದಿನ ಒಂದು ವರ್ಷದ ಅವಧಿಯವರೆಗೆ ಭರವಸೆ ಮೂಡಿಸಿದ ಬಾಕ್ಸರ್‌ಗಳಿಗೆ ಸೂಕ್ತ ತರಬೇತಿ, ಶಿಕ್ಷಣ ಹಾಗೂ ಆರ್ಥಿಕ ನೆರವು ನೀಡಲು ಮುಂದಾಗಿದೆ.
ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್ ಹಾಗೂ ಮತ್ತವರ ಪತಿಕೆ. ಓಂಕಾಲೊರ್ ಕೋಮ್ ಜತೆಗೂಡಿ ಮೇರಿ ಕೋಮ್ ರೀಜನಲ್ ಬಾಕ್ಸಿಂಗ್ ಫೌಂಡೇಶನ್ ಸ್ಥಾಪಿಸಿದ್ದು, ಸದ್ಯ 87ಕ್ಕೂ ಅಧಿಕ ಬಡ ಪ್ರತಿಭಾನ್ವಿತ ಯುವ ಬಾಕ್ಸರ್‌ಗಳಿಗೆ ಉಚಿತ ವಿಶ್ವದರ್ಜೆಯ ತರಬೇತಿ, ಊಟ, ವಸತಿ, ಶಿಕ್ಷಣ, ವೈದ್ಯಕೀಯ ಸೌಲಭ್ಯ ಹಾಗೂ ಬಾಕ್ಸಿಂಗ್‌ಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಿಕೊಡುತ್ತಿದೆ.
ಟೋಕಿಯೋ 2021 ನನ್ನ ಕೊನೆ ಒಲಿಂಪಿಕ್ಸ್: ಮೇರಿ ಕೋಮ್
ಇದೀಗ ಮೇರಿ ಕೋಮ್ ರೀಜನಲ್ ಬಾಕ್ಸಿಂಗ್ ಫೌಂಡೇಶನ್ ಹಾಗೂ ಡ್ರೀಮ್ ಸ್ಪೋರ್ಟ್ಸ್ ಫೌಂಡೇಶನ್ ಒಪ್ಪಂದ ಮಾಡಿಕೊಂಡಿರುವುದರಿಂದ, ಬಡತನದಿಂದ ಬಳಲುತ್ತಿರುವ ಯುವ ಆಯ್ದ ಪ್ರತಿಭಾನ್ವಿತ ಬಾಲಕಿಯರಿಗೆ ಸೂಕ್ತ ತರಬೇತಿ ಹಾಗೂ ಸೌಲಭ್ಯವನ್ನು ಒದಗಿಸುವ ಮೂಲಕ ಅವರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲು ನೆರವಾಗಲಿದೆ.
ಆಯ್ಕೆಯಾದ ಪ್ರತಿಭಾನ್ವಿತ ಬಾಲಕಿಯರಿಗೆ ಗೋಲ್ಡ್ ಸ್ಟ್ಯಾಂಡರ್ಡ್ ಟೆಕ್ನಿಕಲ್ ತರಬೇತಿ, ಸೂಕ್ತ ಕ್ರೀಡಾಪರಿಕರಗಳು, ಉಳಿದುಕೊಳ್ಳಲು ವಸತಿ ಸೌಲಭ್ಯ, ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಲು ಬೇಕಾದ ವ್ಯವಸ್ಥೆ, ಡಯಟ್ ಹಾಗೂ ಪೌಷ್ಠಿಕಾಂಶ ಆಹಾರ, ಶಿಕ್ಷಣ ಹಾಗೂ ಇತರೆ ಪಠ್ಯೇತರ ಚಟುವಟಿಗಳನ್ನು ಡ್ರೀಮ್ ಸ್ಪೋರ್ಟ್ಸ್ ಫೌಂಡೇಶನ್ ಉಚಿತವಾಗಿ ಒದಗಿಸಲಿದೆ.
ಮಹತ್ವದ ಸಂದರ್ಭದಲ್ಲಿ ಡ್ರೀಮ್ ಸ್ಪೋರ್ಟ್ಸ್ ಫೌಂಡೇಶನ್ ನಮ್ಮ ಜತೆ ಕೈಜೋಡಿಸುವ ಮೂಲಕ ಪ್ರತಿಭಾನ್ವಿತ ಅಥ್ಲೀಟ್‌ಗಳ ಬೆಂಬಲಕ್ಕೆ ಬಂದಿರುವುಕ್ಕೆ ನಾವು ಆಭಾರಿಯಾಗಿದ್ದೇವೆ. ಡ್ರೀಮ್ ಸ್ಪೋರ್ಟ್ಸ್ ಫೌಂಡೇಶನ್ ಮುಂದಿನ ತಾರೆಯರನ್ನು ಹುಟ್ಟುಹಾಕಲು ಈಗಾಗಲೇ ಹಲವಾರು ಅಸಾಧಾರಣ ಕೆಲಸಗಳನ್ನು ಮಾಡುತ್ತಲೇ ಬಂದಿದೆ. ಈ ಒಪ್ಪಂದದಿಂದ ಉದಯೋನ್ಮುಖ ಬಾಕ್ಸರ್‌ಗಳಿಗೆ ಸೂಕ್ತ ಬೆಂಬಲ ಸಿಗಲಿದ್ದು, ಮುಂದೊಂದು ದಿನ ಅವರೆಲ್ಲ ತಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನ ತೋರಿ ಸಾಧನೆ ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಮೇರಿ ಕೋಮ್ ಹೇಳಿದ್ದಾರೆ.