ಫ್ರೆಂಚ್ ಓಪನ್ಗೂ ಮುನ್ನ ಸೆರೆನಾ, ಫೆಡರರ್‌ಗೆ ಆಘಾತ!
* ಫ್ರೆಂಚ್ ಓಪನ್ ಸಿದ್ದತೆಯಲ್ಲಿದ್ದ ಸೆರೆನಾ ವಿಲಿಯಮ್ಸ್, ರೋಜರ್ ಫೆಡರರ್‌ಗೆ ಶಾಕ್
* ಗಾಯದ ಸಮಸ್ಯೆಯಿಂದ ಕಮ್‌ಬ್ಯಾಕ್ ಮಾಡಿದ್ದ ಫೆಡರರ್ ಮೊದಲ ಸುತ್ತಿನಲ್ಲೇ ಸೋಲು
* ಮೇ 30ರಿಂದ ಫ್ರೆಂಚ್ ಓಪನ್ ಟೂರ್ನಿ ಆರಂಭ
ಪ್ಯಾರಿಸ್(ಮೇ.20): ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂಗೆ ಅಭ್ಯಾಸ ನಡೆಸುವ ಉದ್ದೇಶದಿಂದ ಸ್ಥಳೀಯ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದ ದಿಗ್ಗಜ ಟೆನಿಸಿಗರಾದ ರೋಜರ್ ಫೆಡರರ್ ಹಾಗೂ ಸೆರೆನಾ ವಿಲಿಯಮ್ಸ್‌ಗೆ ಆಘಾತ ಎದುರಾಗಿದೆ.
ಇಟಲಿಯ ಪಾರ್ಮ ಚಾಲೆಂಜರ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೆರೆನಾ ಸೋಲುಂಡರೆ, ಜಿನೆವಾ ಓಪನ್‌ನಲ್ಲಿ ರೋಜರ್ ಫೆಡರರ್‌ಗೆ ಆರಂಭಿಕ ಸುತ್ತಿನಲ್ಲೇ ಸೋತು ನಿರಾಸೆ ಅನುಭವಿಸಿದ್ದಾರೆ. 2020ರಲ್ಲಿ 2 ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿ ಕಮ್‌ಬ್ಯಾಕ್ ಮಾಡಿದ್ದ ಫೆಡರರ್ ಜಿನಿವಾ ಓಪನ್‌ನಲ್ಲಿ ಪ್ಯಾಬ್ಲೋ ಅಂಜುರ್ ಎದುರು ಆಘಾತಕಾರಿ ಸೋಲು ಕಂಡರೆ, ಇಟಲಿಯ ಪಾರ್ಮ ಚಾಲೆಂಜರ್ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್ ನೇರ ಸೆಟ್‌ಗಳಲ್ಲಿ ಕೇಥರಿನಾ ಸಿನಿಕೋವಾ ಎದುರು ಹೀನಾಯ ಸೋಲು ಅನುಭವಿಸಿದರು.
ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಸ್ಪರ್ಧಿಸಲಿದ್ದಾರೆ ರೋಜರ್ ಫೆಡರರ್
ಮೇ 30ರಿಂದ ಆರಂಭಗೊಳ್ಳಲಿರುವ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಟೂರ್ನಿಗೆ ಸಿದ್ದತೆ ನಡೆಸಲು ಕಣಕ್ಕಿಳಿದಿದ್ದ 39 ವರ್ಷದ ಫೆಡರರ್ 6-4, 4-6, 6-4 ಸೆಟ್‌ಗಳ ಅಂತರದಲ್ಲಿ ವಿಶ್ವದ 75ನೇ ಶ್ರೇಯಾಂಕಿತ ಅಂಜುರ್ ಎದುರು ಸೋತು ನಿರಾಸೆ ಅನುಭವಿಸಿದರು. ಇನ್ನು 23 ಗ್ರ್ಯಾನ್ ಸ್ಲಾಂಗಳ ಒಡತಿ 39 ವರ್ಷದ ಸೆರೆನಾ, 68ನೇ ಶ್ರೇಯಾಂಕಿತೆ ಕೇಥರಿನಾ ಸಿನಿಕೋವಾ ವಿರುದ್ದ 7-6(4), 6-2 ನೇರ ಸೆಟ್‌ಗಳಲ್ಲಿ ಸೋತು ಮುಖಭಂಗ ಅನುಭವಿಸಿದರು.