ವಿಂಬಲ್ಡನ್ ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಾಗಿ ಜೋಕೋ-ಬೆರಟ್ಟಿನಿ ಫೈಟ್
* ಮತ್ತೊಮ್ಮೆ ವಿಂಬಲ್ಡನ್ ಫೈನಲ್ ಪ್ರವೇಶಿಸಿದ ನೊವಾಕ್ ಜೋಕೋವಿಚ್
* ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಜೋಕೋ ಫೈನಲ್‌ಗೇರಿರುವುದು ಇದು 30ನೇ ಬಾರಿ
* ವಿಂಬಲ್ಡನ್ ಪಟ್ಟಕ್ಕಾಗಿ ಜೋಕೋ ಹಾಗೂ ಇಟಲಿಯ ಮ್ಯಾಟಿಕೊ ಬೆರೆಟ್ಟಿನಿ ಸೆಣಸಾಟ
ಲಂಡನ್(ಜು.10): ವಿಶ್ವ ನಂ.1, ಹಾಲಿ ಚಾಂಪಿಯನ್ ನೊವಾಕ್ ಜೋಕೊವಿಚ್ 7ನೇ ಬಾರಿಗೆ ವಿಂಬಲ್ಡನ್ ಟೂರ್ನಿಯ ಫೈನಲ್ ಪ್ರವೇಶಿಸಿದರು. ಪ್ರಶಸ್ತಿಗಾಗಿ ಇಟಲಿಯ ಬೆರಟ್ಟಿನಿ ಜತೆ ಪೈಪೋಟಿ ನಡೆಸಲಿದ್ದಾರೆ.
ಇನ್ನು ಗ್ರ್ಯಾನ್‌ಸ್ಲಾಂಗಳ ಇತಿಹಾಸದಲ್ಲಿ ಸರ್ಬಿಯಾದ ನೊವಾಕ್ ಜೋಕೋವಿಚ್ ಫೈನಲ್‌ಗೇರಿರುವುದು ಇದು 30ನೇ ಬಾರಿ. ಆಸ್ಪ್ರೇಲಿಯನ್ ಓಪನ್ ಹಾಗೂ ಫ್ರೆಂಚ್ ಓಪನ್ ಜಯ ಸೇರಿದಂತೆ ಈ ವರ್ಷದಲ್ಲಿ ಜೋಕೋ ಪ್ರವೇಶಿಸಿರುವ 3ನೇ ಗ್ರ್ಯಾನ್‌ಸ್ಲಾಂ ಫೈನಲ್ ಇದಾಗಿದೆ. 19 ಗ್ರ್ಯಾನ್‌ಸ್ಲಾಂ ಸೇರಿದಂತೆ 5 ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿರುವ ಜೋಕೋಗೆ, ರೋಜರ್ ಫೆಡರರ್ ಹಾಗೂ ರಫೆಲ್ ನಡಾಲ್‌ರ ದಾಖಲೆ ಸರಿಗಟ್ಟಲು ಇನ್ನೊಂದು ಗ್ರ್ಯಾನ್‌ಸ್ಲಾಂನ ಅವಶ್ಯವಿದೆ.
ಇದು ನನ್ನ ವೃತ್ತಿಜೀವನದ ಕೊನೆಯ ವಿಂಬಲ್ಡನ್ ಓಪನ್ ಇರಬಹುದು: ಫೆಡರರ್
ಪುರುಷರ ವಿಭಾಗದ ಸಿಂಗಲ್ಸ್‌ನ ಉಪಾಂತ್ಯದ ಹೋರಾಟದಲ್ಲಿ ಕೆನಡಾದ ಡೆನಿಸ್ ಶಪೋವೊಲೊವ್ ಸವಾಲನ್ನು ಮೀರಿನಿಂತ ಜೋಕೋ, 7-6(7-3), 7-5, 7-5 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು.
ಪ್ರಾಬಲ್ಯ ಮೆರೆದ ಬೆರೆಟ್ಟಿನಿ:
ಮತ್ತೊಂದು ಸೆಮಿಫೈನಲ್‌ನಲ್ಲಿ ಹೂಬರ್ಟ್ ಹುಕಜ್‌ರ್ ಮೇಲೆ ಸವಾರಿ ಮಾಡಿದ ಬೆರಟ್ಟಿನಿ 6-3, 6-0, 6-7(3-7), 6-4 ಸೆಟ್‌ಗಳ ಅಂತರದಿಂದ ಜಯ ಸಾಧಿಸಿ, ಮೊದಲ ಬಾರಿಗೆ ವಿಂಬಲ್ಡನ್ ಫೈನಲ್‌ಗೇರಿದರು. ಇದರೊಂದಿಗೆ ವಿಂಬಲ್ಡನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ ಇಟಲಿಯ ಮೊದಲ ಟೆನಿಸಿಗ ಎಂಬ ಕೀರ್ತಿಗೂ ಬೆರಟ್ಟಿನಿ ಪಾತ್ರರಾದರು.
ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ವಿಂಬಲ್ಡನ್ ಪಟ್ಟಕ್ಕಾಗಿ ಜೋಕೋ ಹಾಗೂ ಇಟಲಿಯ ಮ್ಯಾಟಿಕೊ ಬೆರೆಟ್ಟಿನಿ ಸೆಣಸಾಟ ನಡೆಸಲಿದ್ದಾರೆ.