ಇದು ನನ್ನ ವೃತ್ತಿಜೀವನದ ಕೊನೆಯ ವಿಂಬಲ್ಡನ್ ಓಪನ್ ಇರಬಹುದು: ಫೆಡರರ್
* ವಿಂಬಲ್ಡನ್ ಕ್ವಾರ್ಟರ್ ಫೈನಲ್‌ನಲ್ಲಿ ಆಘಾತಕಾರಿ ಸೋಲು ಕಂಡ ಫೆಡರರ್
* ತಮ್ಮ ವೃತ್ತಿಜೀವನ ಕೊನೆಗೊಳಿಸುವ ಸುಳಿವು ಕೊಟ್ಟ ಫೆಡರರ್
* ಕೆಲವೇ ವಾರಗಳಲ್ಲಿ 40ನೇ ವಸಂತಕ್ಕೆ ಕಾಲಿಡಲಿರುವ ಸ್ವಿಸ್ ಟೆನಿಸ್ ದಿಗ್ಗಜ
ಲಂಡನ್(ಜು.09): ವಿಂಬಲ್ಡನ್ ಒಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಹಬರ್ಟ್ ಹರ್ಕಾಕ್ಜ್ ವಿರುದ್ಧ ಆಘಾತಕಾರಿ ಸೋಲುಂಡಿದ್ದ ದಿಗ್ಗಜ ಟೆನಿಸಿಗ ರೋಜರ್ ಫೆಡರರ್, ಇದು ತಮ್ಮ ವೃತ್ತಿಜೀವನದ ಕೊನೆಯ ವಿಂಬಲ್ಡನ್ ಆಗಬಹುದು ಎಂಬ ಸುಳಿವನ್ನು ಪಂದ್ಯದ ನಂತರ ನೀಡಿದ್ದಾರೆ.
ಇನ್ನೈದು ವಾರಗಳಲ್ಲಿ 40ನೇ ವರ್ಷಕ್ಕೆ ಕಾಲಿರಿಸುತ್ತಿರುವ ಫೆಡರರ್, ‘ಮುಂದಿನ ವಿಂಬಲ್ಡನ್ ಟೂರ್ನಿ ಆಡಬೇಕೆಂಬುದು ನನ್ನ ಈ ಹಿಂದಿನ ವರ್ಷಗಳ ಗುರಿಯಾಗಿರುತ್ತಿತ್ತು. ಕೊರೋನಾ ಕಾರಣ ಕಳೆದ ವರ್ಷ ಇದು ಸಾಧ್ಯವಾಗಲಿಲ್ಲ. ಈ ವರ್ಷ ಆಡಿದ್ದೇನೆ. ಮುಂದಿನ ವಿಂಬಲ್ಡನ್ ಬಗ್ಗೆ ನನಗೆ ಗೊತ್ತಿಲ್ಲ, ನಿಜವಾಗಿಯೂ ಗೊತ್ತಿಲ್ಲ’ ಎಂದಿದ್ದಾರೆ.
ವಿಂಬಲ್ಡನ್: ಫೆಡರರ್‌ಗೆ ಸೋಲು, ಮುಗಿಯಿತಾ ಟೆನಿಸ್ ದಿಗ್ಗಜನ ಕೆರಿಯರ್?
0-6 ಮೊದಲ ಸೋಲು: ವಿಂಬಲ್ಡನ್ ಇತಿಹಾಸದಲ್ಲಿ 0-6 ಅಂತರದಿಂದ ಸೆಟ್‌ವೊಂದರಲ್ಲಿ ಫೆಡರರ್ ಸೋಲುಂಡಿರುವುದು ಇದೇ ಮೊದಲು. ಈ ಮೊದಲು ಫ್ರೆಂಚ್ ಓಪನ್‌ನಲ್ಲಿ 1999ರಲ್ಲಿ ಪ್ಯಾಟ್ ರಾಫ್ಟರ್, 2008ರಲ್ಲಿ ನಡಾಲ್ ವಿರುದ್ಧ ಸೋಲುಂಡಿದ್ದರು. ಪಂದ್ಯ ಸೋತು ವಾಪಾಸ್ಸಾಗುವಾಗ ಸೆಂಟರ್ ಕೋರ್ಟ್‌ನಲ್ಲಿ ನೆರೆದಿದ್ದ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಫೆಡರರ್‌ಗೆ ಗೌರವ ಸೂಚಿಸಿದರು.
ಖ್ಯಾತ ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ ಟ್ವೀಟ್ ಮಾಡಿದ್ದು, ಫೆಡರರ್ ವೃತ್ತಿಬದುಕ ಸಂಧ್ಯಾಕಾಲದಲ್ಲಿದೆಯೇ ಎನ್ನುವ ಪ್ರಶ್ನೆಯನ್ನು ಎತ್ತಿದ್ದಾರೆ. ಹುಲ್ಲಿನಂಕಣದಲ್ಲಿ 0-6 ಸೆಟ್‌ಗಳಲ್ಲಿ ಸೋಲು ಎಂದರೇ? ಎಂದು ಬೋಗ್ಲೆ ಟ್ವೀಟ್ ಮಾಡಿದ್ದಾರೆ.