ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್: ಕ್ವಾರ್ಟರ್ ಫೈನಲ್ ಪ್ರವೇಶಿಸಿ ದಾಖಲೆ ಬರೆದ ಫೆಡರರ್
* ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್‌ನಲ್ಲಿ ಕ್ವಾರ್ಟರ್ ಫೈನಲ್‌ಗೇರಿದ ರೋಜರ್ ಫೆಡರರ್
* 18ನೇ ಬಾರಿಗೆ ವಿಂಬಲ್ಡನ್‌ನಲ್ಲಿ ಅಂತಿಮ 8ರ ಘಟ್ಟ ಪ್ರವೇಶಿಸಿದ ಸ್ವಿಸ್ ಟೆನಿಸ್ ದಿಗ್ಗಜ
* ಹಾಲಿ ಚಾಂಪಿಯನ್ ಜೋಕೊವಿಚ್ 12ನೇ ಬಾರಿಗೆ ವಿಂಬಲ್ಡನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಲಂಡನ್(ಜು.06): ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ, ಆಧುನಿಕ ಕಾಲಘಟ್ಟದಲ್ಲಿ ಅಂದರೆ 1968ರ ಬಳಿಕ ವಿಂಬಲ್ಡನ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅತಿಹಿರಿಯ ಟೆನಿಸಿಗ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ.
ಸೆಂಟರ್ ಕೋರ್ಟ್‌ನಲ್ಲಿ ನಡೆದ ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ಇಟಲಿಯ ಲಾರೆಂಜೋ ಸೊನೆಗೋ ವಿರುದ್ದ 7-5, 6-4, 6-2 ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಅಂತಿಮ ಎಂಟರಘಟ್ಟಕ್ಕೆ ಫೆಡರರ್ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಫೆಡರರ್ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್‌ನಲ್ಲಿ 18ನೇ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಆಟಗಾರ ಎನಿಸಿದ್ದಾರೆ.
20 ಗ್ರ್ಯಾನ್‌ಸ್ಲಾಮ್ ಒಡೆಯ ಫೆಡರರ್ ಒಟ್ಟಾರೆ 58ನೇ ಬಾರಿಗೆ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಈಗಾಗಲೇ 8 ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್‌ಗೆ ಮುತ್ತಿಕ್ಕಿರುವ ಫೆಡರರ್ 9ನೇ ಟ್ರೋಫಿಯತ್ತ ಚಿತ್ತ ನೆಟ್ಟಿದ್ದಾರೆ.
ವಿಂಬಲ್ಡನ್ ಟೆನಿಸ್ ಗ್ರ್ಯಾನ್ ಸ್ಲಾಂ: 4ನೇ ಸುತ್ತಿಗೆ ಫೆಡರರ್, ಆಶ್ಲೆ ಬಾರ್ಟಿ
ಹಾಲಿ ಚಾಂಪಿಯನ್ ನೊವಾಕ್ ಜೋಕೊವಿಚ್ 12ನೇ ಬಾರಿಗೆ ವಿಂಬಲ್ಡನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಜೋಕೋ ಕ್ವಾರ್ಟರ್ ಫೈನಲ್ ಪ್ರವೇಶಿಸುತ್ತಿರುವುದು ಇದು 50ನೇ ಬಾರಿ ಆಗಿದೆ. ಜೋಕೊವಿಚ್ ಪುರುಷರ ಸಿಂಗಲ್ಸ್‌ನ ಪ್ರೀಕ್ವಾರ್ಟರ್ ಪಂದ್ಯದಲ್ಲಿ 17ನೇ ಶ್ರೇಯಾಂಕಿತ ಕ್ರಿಸ್ಟಿಯನ್ ಗ್ಯಾರನ್ ವಿರುದ್ಧ 6-2, 6-4, 6-2 ನೇರ ಸೆಟ್‌ಗಳ ವಿಜಯ ಸಾಧಿಸಿದರು.
ರಷ್ಯಾದ ಕರೆನ್ ಖಚನೋವ, ಇಸ್ರೇಲ್‌ನ ಡೆನಿಸ್ ಶಪೋವೊಲೊವ್ ಹಾಗೂ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ಇದೇ ಮೊದಲ ಬಾರಿಗೆ ವಿಂಬಲ್ಡನ್ ಟೂರ್ನಿಯ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟರು. ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಆಶ್ಲೆ ಬಾರ್ಟಿ, ಫ್ರೆಂಚ್ ಓಪನ್ ಚಾಂಪಿಯನ್ ಬಾರ್ಬೊರಾ ಕ್ರೇಜಿಕೋವಾ ವಿರುದ್ಧ 7-5, 6-3 ಸೆಟ್‌ಗಳಲ್ಲಿ ಜಯ ಸಾಧಿಸಿ ಮೊದಲ ಬಾರಿಗೆ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.