ಕಾಠ್ಮಂಡು(ಡಿ.02): ಹಾಲಿ ಚಾಂಪಿಯನ್‌ ಭಾರತ ಪುರುಷರ ತಂಡ, ಇಲ್ಲಿ ನಡೆಯುತ್ತಿರುವ 13ನೇ ದಕ್ಷಿಣ ಏಷ್ಯನ್‌ ಗೇಮ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದೆ. ಮಂಗಳವಾರ(ಡಿ.03) ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಭಾರತ ಪುರುಷರ ತಂಡ, ಬದ್ಧ ವೈರಿ ಪಾಕಿಸ್ತಾನ ಎದುರು ಸೆಣಸಲಿದೆ.

ಇದನ್ನೂ ಓದಿ: ಸೈನಿಕರ ಜತೆ ಧೋನಿ ವಾಲಿಬಾಲ್‌!

ಭಾನುವಾರ ನಡೆದ ಪುರುಷರ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ, ಶ್ರೀಲಂಕಾ ವಿರುದ್ಧ 3-1 (27-25, 25-19, 21-25, 25-21) ಗೇಮ್‌ಗಳಲ್ಲಿ ಗೆಲುವು ಸಾಧಿಸಿತು. ಅತ್ಯದ್ಭುತ ಪ್ರದರ್ಶನ ತೋರಿದ ಭಾರತ ತಂಡ 4 ಗೇಮ್‌ಗಳಲ್ಲಿ 3ರಲ್ಲಿ ಮುನ್ನಡೆ ಸಾಧಿಸಿ ಲಂಕಾವನ್ನು ಮಣಿಸಿತು. ಕೂಟದುದ್ದಕ್ಕೂ ಭಾರತ ಪುರುಷರ ತಂಡ ಉತ್ತಮ ಲಯದಲ್ಲಿದೆ.

ಇದನ್ನೂ ಓದಿ: ಚೊಚ್ಚಲ ಪ್ರೊ ವಾಲಿಬಾಲ್‌ ಲೀಗ್‌ನಲ್ಲಿ 6 ತಂಡಗಳು.

ಮಹಿಳಾ ವಿಭಾಗದ ಸೆಮೀಸ್‌ನಲ್ಲಿ ಹಾಲಿ ಚಾಂಪಿಯನ್‌ ಭಾರತ ತಂಡ, ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದೆ. ಕೂಟದಲ್ಲಿ ಭಾರತ ವನಿತೆಯರ ತಂಡ, ಮಾಲ್ಡೀವ್‌್ಸ, ನೇಪಾಳ ಹಾಗೂ ಶ್ರೀಲಂಕಾ ತಂಡವನ್ನು ಮಣಿಸಿತ್ತು. ಮಂಗಳವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ಭಾರತ, ಆತಿಥೇಯ ನೇಪಾಳ ಎದುರು ಸೆಣಸಲಿದೆ.

ಭಾರತ ಪುರುಷ ಹಾಗೂ ಮಹಿಳಾ ವಿಭಾಗದ ವಾಲಿಬಾಲ್‌ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿವೆ.