ದಕ್ಷಿಣ ಏಷ್ಯನ್ ಗೇಮ್ಸ್: 7ನೇ ದಿನ ಭಾರತಕ್ಕೆ 38 ಪದಕ!
ದಕ್ಷಿಣ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 7ನೇ ದಿನವೂ ಭಾರತದ ಪದಕಗಳ ಬೇಟೆ ಮುಂದುವರೆದಿದ್ದು, ನಂ.1 ಸ್ಥಾನದಲ್ಲೇ ಮುಂದುವರೆದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕಾಠ್ಮಂಡು[ಡಿ.09]: ಈಜುಪಟುಗಳು ಹಾಗೂ ಕುಸ್ತಿಪಟುಗಳ ಮಿಂಚಿನ ಪ್ರದರ್ಶನದ ನೆರವಿನಿಂದ, ಇಲ್ಲಿ ನಡೆಯುತ್ತಿರುವ 13ನೇ ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕದ ಬೇಟೆ 7ನೇ ದಿನವಾದ ಭಾನುವಾರವು ಮುಂದುವರೆಯಿತು. ಭಾರತ 22 ಚಿನ್ನ, 10 ಬೆಳ್ಳಿ, 6 ಕಂಚಿನೊಂದಿಗೆ 38 ಪದಕ ಜಯಿಸಿತು. ಇದರಲ್ಲಿ ಈಜುಪಟುಗಳು 7 ಚಿನ್ನ, 2 ಬೆಳ್ಳಿ, 2 ಕಂಚು ಗೆದ್ದರೆ, ಕುಸ್ತಿಪಟುಗಳು 4 ಚಿನ್ನ ಜಯಿಸಿದರು.
ದಕ್ಷಿಣ ಏಷ್ಯನ್ ಗೇಮ್ಸ್: ಭಾರತ ಪದಕಗಳ ಡಬಲ್ ಸೆಂಚುರಿ!
ಒಟ್ಟಾರೆ ಭಾರತ 132 ಚಿನ್ನ, 79 ಬೆಳ್ಳಿ, 41 ಕಂಚಿನೊಂದಿಗೆ 252 ಪದಕ ಗಳಿಸಿದ್ದು ಅಗ್ರಸ್ಥಾನದಲ್ಲಿ ವಿರಾಜಮಾನಗೊಂಡಿದೆ. ಆತಿಥೇಯ ನೇಪಾಳ 45 ಚಿನ್ನ, 44 ಬೆಳ್ಳಿ, 76 ಕಂಚಿನೊಂದಿಗೆ 165 ಪದಕ ಜಯಿಸಿ 2ನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ 36 ಚಿನ್ನ, 68 ಬೆಳ್ಳಿ ಹಾಗೂ 93 ಕಂಚುಗಳೊಂದಿಗೆ ಒಟ್ಟು 197 ಪದಕ ಗೆದ್ದು 3ನೇ ಸ್ಥಾನದಲ್ಲಿ ಮುಂದುವರಿದಿದೆ.
ಪುರುಷರ ಹ್ಯಾಂಡ್‌ಬಾಲ್ ತಂಡ ರನ್ನರ್ ಅಪ್ ಆಗಿ ಬೆಳ್ಳಿ ಗೆದ್ದರೆ, ಮಹಿಳಾ ತಂಡ ಚಿನ್ನಕ್ಕೆ ಮುತ್ತಿಟ್ಟಿತು. ಫೆನ್ಸಿಂಗ್ ಸ್ಪರ್ಧೆಯಲ್ಲಿ ಭಾರತ 3 ಚಿನ್ನ ಗೆದ್ದಿತು. ಪುರುಷರ 400 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಕುಶಾಗ್ರ ರಾವತ್ ಚಿನ್ನ ಗೆದ್ದರೆ, ಆನಂದ್ ಬೆಳ್ಳಿ ಗೆದ್ದರು. 200 ಮೀ. ಬಟರ್‌ಫ್ಲೈನಲ್ಲಿ ಸುಪ್ರಿಯಾ ಮೊಂಡಲ್ ಚಿನ್ನ ಗೆದ್ದರು. ಪುರುಷ ಹಾಗೂ ಮಹಿಳಾ ವಿಭಾಗದ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಕ್ರಮವಾಗಿ ಶ್ರೀಹರಿ ನಟರಾಜ್ ಮತ್ತು ಮಾನಾ ಪಟೇಲ್ ಚಿನ್ನ ಗೆದ್ದರು. 4*200 ಮೀ. ಫ್ರೀಸ್ಟೈಲ್‌ನಲ್ಲಿ ಶ್ರೀಹರಿ, ಮಾನಾ ಚಿನ್ನಕ್ಕೆ ಮುತ್ತಿಟ್ಟರು. ಮಹಿಳೆಯರ 200 ಮೀ. ಬಟರ್‌ಫ್ಲೈನಲ್ಲಿ ಅಪೇಕ್ಷಾ ಫರ್ನಾಂಡಿಸ್ ಚಿನ್ನ ಗೆದ್ದರು.
ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲಿಕ್, ರವೀಂದರ್, ಪವನ್ ಕುಮಾರ್ ಮತ್ತು ಅನ್ಶು ಚಿನ್ನ ಜಯಿಸಿದರು. ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ 7 ಬಾಕ್ಸರ್‌ಗಳು ಫೈನಲ್ ಪ್ರವೇಶಿಸಿದ್ದು ಬೆಳ್ಳಿ ಖಚಿತ ಪಡಿಸಿದ್ದಾರೆ.