ಪೋರ್ಚುಗಲ್ನ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ತಮ್ಮ ನಂ.7 ಜೆರ್ಸಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದಾಗಿ ಅವರು ಭಾವುಕವಾಗಿ ಹೇಳಿದ್ದಾರೆ.
ಬೆಂಗಳೂರು(ನ.05): ಪೋರ್ಚುಗಲ್ನ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ್ದಾರೆ. ಐದು ಬಾರಿ ಬ್ಯಾಲನ್ ಡಿ'ಓರ್ ಪ್ರಶಸ್ತಿ ಗೆದ್ದಿರುವ ರೊನಾಲ್ಡೊ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೊ ಮೂಲಕ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
2016ರಲ್ಲಿ ಪೋರ್ಚುಗಲ್ ತಂಡಕ್ಕೆ ಯುರೋ ಕಪ್ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದ ರೊನಾಲ್ಡೊ, ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಹಾಗೂ ಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎಂಬ ದಾಖಲೆಗಳೊಂದಿಗೆ ವಿದಾಯ ಹೇಳುತ್ತಿದ್ದಾರೆ. ಪೋರ್ಚುಗಲ್ ಪರ 234 ಪಂದ್ಯಗಳನ್ನಾಡಿರುವ ಅವರು 146 ಗೋಲುಗಳನ್ನು ಗಳಿಸಿದ್ದಾರೆ.
41 ವರ್ಷದ ರೊನಾಲ್ಡೊ, ಪೋರ್ಚುಗಲ್ ತಂಡದ ನಂ.7 ಜೆರ್ಸಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ. "ಪೋರ್ಚುಗಲ್ನ ಜನರೇ, ನಮ್ಮ ರಾಷ್ಟ್ರೀಯ ತಂಡದ ನಂ.7 ಜೆರ್ಸಿಯನ್ನು ಹಸ್ತಾಂತರಿಸುವ ದಿನ ಬಂದಿದೆ. ಆ ಜೆರ್ಸಿ ನನ್ನೊಬ್ಬನಿಗೆ ಮಾತ್ರ ಸೇರಿದ್ದೆಂದು ನಾನು ಎಂದಿಗೂ ಭಾವಿಸಿರಲಿಲ್ಲ. ಆದರೆ, 23 ವರ್ಷಗಳ ಕಾಲ ಅದನ್ನು ಧರಿಸುವ, ಅದನ್ನು ಪ್ರತಿನಿಧಿಸುವ ಮತ್ತು ಜಗತ್ತಿನಾದ್ಯಂತದ ಕ್ರೀಡಾಂಗಣಗಳಿಗೆ ಅದನ್ನು ನನ್ನೊಂದಿಗೆ ಕೊಂಡೊಯ್ಯುವ ಗೌರವ ಹಾಗೂ ಜವಾಬ್ದಾರಿ ನನಗೆ ಸಿಕ್ಕಿತ್ತು" ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ರೊನಾಲ್ಡೊ ಹೇಳಿದ್ದಾರೆ.
ಎರಡು ದಶಕಗಳಿಗೂ ಹೆಚ್ಚು ಕಾಲ ಪೋರ್ಚುಗಲ್ನ ಆಧಾರಸ್ತಂಭ
ಎರಡು ದಶಕಗಳಿಗೂ ಹೆಚ್ಚು ಕಾಲ ಪೋರ್ಚುಗಲ್ ತಂಡದ ಪ್ರಮುಖ ಆಟಗಾರನಾಗಿದ್ದ ರೊನಾಲ್ಡೊ, ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. 2016ರ ಯುರೋ ಕಪ್ ಪ್ರಶಸ್ತಿಯ ಜೊತೆಗೆ ಎರಡು ಯುಇಎಫ್ಎ ನೇಷನ್ಸ್ ಲೀಗ್ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ತಂಡಕ್ಕೆ ನೆರವಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಆರು ಫಿಫಾ ವಿಶ್ವಕಪ್ ಟೂರ್ನಿಗಳಲ್ಲಿ ಪೋರ್ಚುಗಲ್ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರ ಕೊನೆಯ ವಿಶ್ವಕಪ್ ಅಭಿಯಾನವು ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಸ್ಪೇನ್ ವಿರುದ್ಧ 1-0 ಗೋಲುಗಳ ಸೋಲಿನೊಂದಿಗೆ ಅಂತ್ಯಗೊಂಡಿತ್ತು. ವಿಶ್ವಕಪ್ ಟೂರ್ನಿಯ ಆರು ವಿಭಿನ್ನ ಆವೃತ್ತಿಗಳಲ್ಲಿ ಗೋಲು ಗಳಿಸಿದ ಏಕೈಕ ಆಟಗಾರ ಎಂಬ ವಿಶೇಷ ದಾಖಲೆಯೂ ರೊನಾಲ್ಡೊ ಅವರ ಹೆಸರಿನಲ್ಲಿದೆ. ವೈಯಕ್ತಿಕ ದಾಖಲೆಗಳು ಮತ್ತು ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನದ ಹೊರತಾಗಿಯೂ, ಅವರ ಪಾಲಿಗೆ ವಿಶ್ವಕಪ್ ಪ್ರಶಸ್ತಿ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ.
'ಮುಂದಿನ ಪೀಳಿಗೆಗೆ ಜವಾಬ್ದಾರಿ ಹಸ್ತಾಂತರಿಸುವ ಸಮಯ ಬಂದಿದೆ'
ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆಯುವ ನಿರ್ಧಾರ ಸುಲಭವಾಗಿರಲಿಲ್ಲ ಎಂದು ರೊನಾಲ್ಡೊ ಒಪ್ಪಿಕೊಂಡಿದ್ದಾರೆ. ಮುಂದಿನ ಪೀಳಿಗೆಯ ಆಟಗಾರರಿಗೆ ಅವಕಾಶ ಮಾಡಿಕೊಡುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ. "ಈಗ ಈ ಜವಾಬ್ದಾರಿಯನ್ನು ಭವಿಷ್ಯದ ಪೀಳಿಗೆಗೆ ಹಸ್ತಾಂತರಿಸುವ ಸಮಯ ಬಂದಿದೆ. ಇದು ಸುಲಭದ ನಿರ್ಧಾರವಾಗಿರಲಿಲ್ಲ. ಏಕೆಂದರೆ ಕೆಲವು ನಿರ್ಧಾರಗಳನ್ನು ಕೇವಲ ಮನಸ್ಸಿನಿಂದ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವುಗಳನ್ನು ಹೃದಯದಿಂದಲೂ ತೆಗೆದುಕೊಳ್ಳಬೇಕಾಗುತ್ತದೆ. 2003ರ ಆಗಸ್ಟ್ನಲ್ಲಿ ಆರಂಭವಾದ ಮತ್ತು ನನ್ನ ಬದುಕನ್ನೇ ಶಾಶ್ವತವಾಗಿ ಬದಲಿಸಿದ ಪಯಣಕ್ಕೆ ಈಗ ಅಂತ್ಯ ಬಂದಿದೆ" ಎಂದು ರೊನಾಲ್ಡೊ ತಿಳಿಸಿದ್ದಾರೆ.
ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನ ಎಂದರೆ ಕೇವಲ ಗೋಲುಗಳು, ದಾಖಲೆಗಳು ಮತ್ತು ಪ್ರಶಸ್ತಿಗಳಷ್ಟೇ ಅಲ್ಲ ಎಂದು ಅವರು ಹೇಳಿದ್ದಾರೆ. ವಿಶ್ವದಾದ್ಯಂತ ನೆಲೆಸಿರುವ ಪೋರ್ಚುಗಲ್ ಅಭಿಮಾನಿಗಳೊಂದಿಗೆ ಬೆಳೆಸಿಕೊಂಡ ಬಾಂಧವ್ಯ, ತಮ್ಮ ಸಾಮರ್ಥ್ಯದ ಮಿತಿಯನ್ನು ಮೀರಿ ಸಾಧನೆ ಮಾಡಲು ಮಾಡಿಕೊಂಡ ಪ್ರಯತ್ನಗಳು ಹಾಗೂ ದೇಶವನ್ನು ಪ್ರತಿನಿಧಿಸುವಾಗ ಎದುರಿಸಿದ ಏಳುಬೀಳುಗಳನ್ನು ಅವರು ಸ್ಮರಿಸಿದ್ದಾರೆ.
"ರಾಷ್ಟ್ರೀಯ ತಂಡದೊಂದಿಗಿನ ನನ್ನ ಅನುಭವಗಳನ್ನು ಹಿಂದಿರುಗಿ ನೋಡಿದಾಗ, ನನಗೆ ಕೇವಲ ಪಂದ್ಯಗಳು, ಗೋಲುಗಳು, ದಾಖಲೆಗಳು ಅಥವಾ ಟ್ರೋಫಿಗಳು ಮಾತ್ರ ಕಾಣಿಸುವುದಿಲ್ಲ. ಜನರು ನೆನಪಾಗುತ್ತಾರೆ. ವಿದೇಶಗಳಲ್ಲಿ ವಾಸಿಸುವ ಪೋರ್ಚುಗೀಸ್ ಜನರು 90 ನಿಮಿಷಗಳ ಕಾಲ ತಮ್ಮ ತಾಯ್ನಾಡಿಗೆ ಸ್ವಲ್ಪ ಹತ್ತಿರವಾದ ಅನುಭವ ಪಡೆದ ಕ್ಷಣಗಳು ನೆನಪಾಗುತ್ತವೆ. ನಾನು ಎಂದಿಗೂ ಭೇಟಿಯಾಗದಿದ್ದರೂ ನನ್ನ ಬದುಕಿನ ಭಾಗವಾಗಿರುವ ಲಕ್ಷಾಂತರ ಪೋರ್ಚುಗೀಸ್ ಜನರು ನೆನಪಾಗುತ್ತಾರೆ. ಏಕೆಂದರೆ, ಕೊನೆಗೆ ಫುಟ್ಬಾಲ್ ಎಂಬುದು ಕೇವಲ ಆಟಕ್ಕಿಂತ ದೊಡ್ಡದು. ಅದು ಜನರಿಗಾಗಿ ಇರುವ ಕ್ರೀಡೆ.
ರಾಷ್ಟ್ರೀಯ ತಂಡದೊಂದಿಗಿನ ನನ್ನ ಇಡೀ ವೃತ್ತಿಜೀವನದಲ್ಲಿ ನಾನು ಯಾವಾಗಲೂ ನನ್ನ ಮಿತಿಗಳನ್ನು ಮೀರಿ ಪ್ರಯತ್ನಿಸಿದ್ದೇನೆ. ಗೆಲ್ಲಬೇಕೆಂದು ಬಯಸಿದ್ದೆ. ಇನ್ನಷ್ಟು ಉತ್ತಮವಾಗಬೇಕೆಂದು ಬಯಸಿದ್ದೆ. ಇತಿಹಾಸ ಸೃಷ್ಟಿಸಬೇಕೆಂದು ಬಯಸಿದ್ದೆ. ನನ್ನಿಂದ ಯಾವಾಗಲೂ ಅತ್ಯುತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದೆ. ಇನ್ನಷ್ಟು ಸಾಧಿಸಬೇಕೆಂದು ಬಯಸುತ್ತಿದ್ದೆ. ನಾವು ಇನ್ನೂ ಮುಂದೆ ಸಾಗಬಹುದು ಎಂದು ನಂಬಿದ್ದೆ. ಈ ಜೆರ್ಸಿಗಾಗಿ ನನ್ನಿಂದ ಸಾಧ್ಯವಿರುವ ಎಲ್ಲವನ್ನೂ ನೀಡಿದ್ದೇನೆ. ಮರೆಯಲಾಗದ ಗೆಲುವಿನ ದಿನಗಳು ಮತ್ತು ರಾತ್ರಿಗಳಿದ್ದವು. ನೆನಪಿಸಿಕೊಂಡರೂ ನೋವುಂಟು ಮಾಡುವ ಸೋಲುಗಳೂ ಇದ್ದವು" ಎಂದು ರೊನಾಲ್ಡೊ ಹೇಳಿದ್ದಾರೆ.
'ತಪ್ಪುಗಳನ್ನು ಮಾಡಿದ್ದೇನೆ, ನೋವು ಅನುಭವಿಸಿದ್ದೇನೆ'
ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ಕಠಿಣ ಕ್ಷಣಗಳ ಬಗ್ಗೆಯೂ ರೊನಾಲ್ಡೊ ಮಾತನಾಡಿದ್ದಾರೆ. "ನಾನು ತಪ್ಪುಗಳನ್ನು ಮಾಡಿದ್ದೇನೆ. ನೋವು ಅನುಭವಿಸಿದ್ದೇನೆ. ಪೋರ್ಚುಗಲ್ ಜನರು ನನ್ನಿಂದ ಅಪಾರವಾಗಿ ನಿರೀಕ್ಷಿಸಿದ್ದನ್ನು ಪೂರೈಸಲು ಸಾಧ್ಯವಾಗದ ಸಂದರ್ಭಗಳೂ ಇದ್ದವು. ಆದರೆ, ನಾನು ಎಂದಿಗೂ ಹೋರಾಟವನ್ನು ಕೈಬಿಟ್ಟಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಪೋರ್ಚುಗಲ್ ತಂಡವನ್ನು ಪ್ರತಿನಿಧಿಸುವ ಆಸೆಯನ್ನು ಎಂದಿಗೂ ಕಳೆದುಕೊಂಡಿಲ್ಲ.
ವರ್ಷಗಳು ಕಳೆದಂತೆ ಕೆಲವು ಸರಳ ಸತ್ಯಗಳನ್ನು ಕಲಿತಿದ್ದೇನೆ. ಗೋಲುಗಳ ನೆನಪು ಮಸುಕಾಗುತ್ತದೆ. ಟ್ರೋಫಿಗಳು ಕೊನೆಗೆ ವಸ್ತುಸಂಗ್ರಹಾಲಯಗಳನ್ನು ಸೇರುತ್ತವೆ. ದಾಖಲೆಗಳು ಒಂದಲ್ಲ ಒಂದು ದಿನ ಮುರಿಯಲ್ಪಡುತ್ತವೆ. ಆದರೆ, ಕಾಲ ಎಂದಿಗೂ ಅಳಿಸಲಾಗದ ಒಂದು ಸಂಗತಿಯಿದೆ. ಅದು ಜನರ ಹೃದಯದಲ್ಲಿ ನಮಗಿರುವ ಸ್ಥಾನ. ನನ್ನಿಂದ ನಿಮಗೆ ಎಂದಾದರೂ ಸಂತೋಷವಾಗಿದ್ದರೆ, ನನ್ನ ಯಾವುದಾದರೂ ಗೋಲು ನಿಮ್ಮನ್ನು ಮತ್ತೊಬ್ಬರನ್ನು ಅಪ್ಪಿಕೊಳ್ಳುವಂತೆ ಮಾಡಿದ್ದರೆ, ನಿಮ್ಮ ಚಿಂತೆಯನ್ನು ಮರೆಸಿದ್ದರೆ ಅಥವಾ ನಮ್ಮ ದೇಶದ ಬಗ್ಗೆ ಹೆಮ್ಮೆಪಡುವಂತೆ ಮಾಡಿದ್ದರೆ, ನನ್ನ ಈ ಪಯಣ ಸಾರ್ಥಕ" ಎಂದು ರೊನಾಲ್ಡೊ ಭಾವುಕವಾಗಿ ಹೇಳಿದ್ದಾರೆ.
ಇತ್ತೀಚೆಗೆ ನೇಷನ್ಸ್ ಲೀಗ್ ಪಂದ್ಯವೊಂದರಲ್ಲಿ ಆಡಲು ನಿರಾಕರಿಸಿ ತಂಡದ ಶಿಬಿರವನ್ನು ತೊರೆದ ವಿಚಾರವಾಗಿ ರಾಷ್ಟ್ರೀಯ ತಂಡದ ಕೋಚ್ ಜಾರ್ಜ್ ಜೀಸಸ್ ಅವರೊಂದಿಗೆ ರೊನಾಲ್ಡೊ ಭಿನ್ನಾಭಿಪ್ರಾಯ ಹೊಂದಿದ್ದರು ಎನ್ನಲಾಗಿದೆ. ತಂಡದ ಶಿಬಿರವನ್ನು ತೊರೆದಿದ್ದಕ್ಕಾಗಿ ಪೋರ್ಚುಗಲ್ ನಾಯಕನಿಗೆ 30 ದಿನಗಳ ಅಮಾನತು ಶಿಕ್ಷೆ ವಿಧಿಸಲಾಗಿತ್ತು. ಅದನ್ನು ರೊನಾಲ್ಡೊ ಒಪ್ಪಿಕೊಂಡಿದ್ದರು ಎಂದು ವರದಿಯಾಗಿದೆ.
ಈ ವರ್ಷವೇ ಅರ್ಜೆಂಟೀನಾ ಫುಟ್ವಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ, ಫುಟ್ಬಾಲ್ಗೆ ವಿದಾಯ ಘೋಷಿಸಿದ್ದರು. ಇನ್ನು 2026ರ ಫಿಫಾ ವಿಶ್ವಕಪ್ನಲ್ಲಿ ಬ್ರೆಜಿಲ್ ತಂಡವು ಟೂರ್ನಿಯಿಂದ ಹೊರಬೀಳುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ಜೂನಿಯರ್ ನೇಮಾರ್ ಕೂಡಾ ವಿದಾಯ ಹೇಳಿದ್ದರು. ಇದೀಗ ರೊನಾಲ್ಡೋ ಕೂಡಾ ನಿವೃತ್ತಿ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.






