ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ದಿಢೀರ್ ಅನುದಾನ ಸ್ಥಗಿತಗೊಳಿಸಿದ ಕಾರಣ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್ ತಮ್ಮ ಸ್ವಂತ ಖರ್ಚಿನಲ್ಲಿ ಹೈಲೋ ಓಪನ್ ಟೂರ್ನಿಯಲ್ಲಿ ಆಡಿ ಗೆದ್ದಿದ್ದಾರೆ. ಬ್ಯಾಡ್ಮಿಂಟನ್ ಸಂಸ್ಥೆ ನಿಗದಿತ ಸಮಯದೊಳಗೆ ಪ್ರಸ್ತಾವನೆ ಸಲ್ಲಿಸದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಸಾಯ್ ಸ್ಪಷ್ಟಪಡಿಸಿದೆ.

ನವದೆಹಲಿ: ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌) ದಿಢೀರ್‌ ಅನುದಾನ ಸ್ಥಗಿತಗೊಳಿಸಿದ ಕಾರಣ ಹೈಲೋ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯನ್ನು ಪಿ.ವಿ. ಸಿಂಧು, ಲಕ್ಷ್ಯ ಸೇನ್‌ ತಮ್ಮ ಸ್ವಂತ ಖರ್ಚಿನಲ್ಲಿ ಆಡಿ ಗೆಲುವು ಸಾಧಿಸಿದ್ದಾರೆ.

ಇತ್ತೀಚೆಗೆ ಆರ್ಕ್‌ಟಿಕ್‌ ಓಪನ್‌ಗೂ ಮುನ್ನ ಇವರಿಗೆ ಅನುದಾನ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಯುರೋಪ್‌ ಚರಣದ ಫಿನ್ಲೆಂಡ್‌, ಡೆನ್ಮಾರ್ಕ್‌, ಫ್ರಾನ್ಸ್‌, ಜರ್ಮನಿಯ ಟೂರ್ನಿ ವೇಳೆ ಶಟ್ಲರ್‌ಗಳನ್ನು ಸಂಕಷ್ಟಕ್ಕೀಡು ಮಾಡಿತ್ತು. ಆ ಬಳಿಕ ಕಡೇ ಕ್ಷಣದಲ್ಲಿ ಸಿಂಧು, ಸೇನ್‌ ತಮ್ಮದೇ ಸ್ವಂತ ಖರ್ಚಿನಲ್ಲಿ ಆಡಲು ನಿರ್ಧರಿಸಿ ಹೈಲೋ ಓಪನ್‌ ಟೂರ್ನಿಯಲ್ಲಿ ಪಾಲ್ಗೊಂಡು ಚಿನ್ನ ಗೆದ್ದಿದ್ದಾರೆ.

ಏಷ್ಯಾಡ್‌ನಲ್ಲಿ ಶಟ್ಲರ್‌ಗಳ ಕಳಪೆ ಪ್ರದರ್ಶನ ಹಿನ್ನೆಲೆ ಸಾಯ್‌ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಆದರೆ ಪ್ರಾಧಿಕಾರ ಇದನ್ನು ಅಲ್ಲಗೆಳೆದಿದೆ. ‘ಅನುದಾನನಕ್ಕ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ನಿಗದಿತ ಸಮಯದೊಳಗೆ ತನ್ನ ಪ್ರಸ್ತಾವನೆಯನ್ನು ಸಲ್ಲಿಸಲು ವಿಫಲವಾಗಿದ್ದೇ ಕಾರಣ. ಮುಂದೆ ಅನುದಾನ ನೀಡುತ್ತೇವೆ’ ಎಂದಿದೆ.

ಕಿರಿಯರ ಫಂಡ್‌ಗೂ ತಡೆ:

ಸಿಂಧು, ಸೇನ್‌ಗೂ ಮುನ್ನ ಅ.5ರಿಂದ 17ರವರೆಗೆ ಈಜಿಪ್ಟ್‌ನಲ್ಲಿ ನಡೆದ ಟೂರ್ನಿಗೆ ಭಾರತ ಜೂರ್ನಿಯರ್‌ ತಂಡದ 30 ಸದಸ್ಯರಿಗೆ ಅನುದಾನ ತಡೆ ಹಿಡಿದಿತ್ತು. ಈ ಹಿನ್ನೆಲೆ ಅಥ್ಲೀಟ್‌ಗಳು ಕೈರೋ ಪ್ರವಾಸ ರದ್ದುಗೊಳ್ಳುವ ಸಾಧ್ಯತೆಯಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರಿಗೆ ಅನುದಾನ ನೀಡಲಾಗಿತ್ತು.

ಏಷ್ಯಾ ಚಾಂಪಿಯನ್ಸ್ ಹಾಕಿ: ಸೆಮಿಫೈನಲ್‌ನಲ್ಲಿ ಇಂದು ಭಾರತ vs ದ.ಕೊರಿಯಾ

ಮೊಹಾಲಿ: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಬುಧವಾರ ಭಾರತ ಹಾಗೂ ದಕ್ಷಿಣ ಕೊರಿಯಾ ತಂಡಗಳು ಮುಖಾಮುಖಿಯಾಗಲಿವೆ. 5 ಬಾರಿ ಚಾಂಪಿಯನ್‌ ಭಾರತ ತಂಡ ರೌಂಡ್‌ ರಾಬಿನ್‌ ಸುತ್ತಿನ ಎಲ್ಲಾ 5 ಪಂದ್ಯಗಳಲ್ಲಿ ಗೆದ್ದಿದ್ದು, ದ.ಕೊರಿಯಾ ವಿರುದ್ಧ 8-0 ಗೋಲುಗಳಿಂದ ಭರ್ಜರಿಯಾಗಿ ಜಯಗಳಿಸಿತ್ತು. ಟೂರ್ನಿಯಲ್ಲಿ ಅಜೇಯವಾಗಿರುವ ತಂಡ ಈಗ ಸೆಮೀಸ್‌ನಲ್ಲೂ ಸುಲಭ ಗೆಲುವಿನ ವಿಶ್ವಾಸದಲ್ಲಿದೆ. ಮತ್ತೊಂದೆಡೆ ದ.ಕೊರಿಯಾ ಲೀಗ್‌ ಹಂತದ 5 ಪಂದ್ಯಗಳ ಪೈಕಿ 2ರಲ್ಲಿ ಗೆದ್ದು 4ನೇ ಸ್ಥಾನಿಯಾಗಿತ್ತು. ಬುಧವಾರ ನಡೆಯಲಿರುವ ಮತ್ತೊಂದು ಸೆಮೀಸ್‌ನಲ್ಲಿ ಜಪಾನ್‌-ಮಲೇಷ್ಯಾ ಮುಖಾಮುಖಿಯಾಗಲಿವೆ. ಫೈನಲ್‌ ಪಂದ್ಯ ಗುರುವಾರ ನಿಗದಿಯಾಗಿದೆ.