ಬೆಂಗಳೂರಲ್ಲಿ ಲಿಯಾಂಡರ್ ಪೇಸ್ ಕೊನೆಯ ಘರ್ಜನೆ..!

ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಭಾರತ ನೆಲದಲ್ಲಿ ತಮ್ಮ ವೃತ್ತಿಜೀವನದ ಕಟ್ಟಕಡೆಯ ಟೂರ್ನಿ ಆಡುತ್ತಿದ್ದಾರೆ. ಬೆಂಗಳೂರು ಓಪನ್ ಭಾರತದಲ್ಲಿ ಪೇಸ್ ಆಡಲಿರುವ ಕೊನೆಯ ಟೂರ್ನಿಯಾಗಿದೆ. ಪೇಸ್ ಬಗ್ಗೆ ರಮಾಕಾಂತ್ ಆರ್ಯನ್ ಬರೆದ ನುಡಿಮುತ್ತುಗಳು ಇಲ್ಲಿವೆ ನೋಡಿ...

Ramakanth Aryan writes on Tennis Legend Leander Paes last roar in Bengaluru Open

ರಮಾಕಾಂತ್ ಆರ್ಯನ್, ಸುವರ್ಣ ನ್ಯೂಸ್

ಭಾರತ ಟೆನಿಸ್ ದಂತಕತೆ ಲಿಯಾಂಡರ್ ಪೇಸ್ ಬೆಂಗಳೂರಿನಲ್ಲಿ ಕಡೆಯ ಬಾರಿಗೆ ಆಡುತ್ತಿದ್ದಾನೆ. ಇದು ಭಾರತ ನೆಲದಲ್ಲಿ ಆಡಲಿರುವ ಕೊನೆಯ ಟೂರ್ನಿ. ಒನ್ ಲಾಸ್ಟ್ ರೋರ್...

ಹೌದು,  ಅದು ಸಿಂಹದಂತೆ ಆಟವಾಡಿದವನ ಕಟ್ಟಕಡೆಯ ಘರ್ಜನೆ. ಲಿಯಾಂಡರ್ ಪೇಸ್ ಟೆನಿಸ್‌ಗೆ ವಿದಾಯ ಹೇಳುತ್ತಿದ್ದಾನೆ. ಭರ್ತಿ ಮೂವತ್ತು ವರ್ಷಗಳ ಕಾಲ ಆಡಿದ ಗಟ್ಟಿಗ. ಟೆನಿಸ್ ಇನ್ನು ಸಾಕೆನ್ನುತ್ತಿದ್ದಾನೆ. ಬೆಂಗಳೂರಿನಲ್ಲಿ ಕಟ್ಟಕಡೆಗೆಂಬಂತೆ ಟೆನಿಸ್ ಆಡುತ್ತಿದ್ದಾನೆ. ಅವನಿಗೆ ನಲವತ್ತಾರೇ ವರ್ಷಗಳು. ಇಂತಹ ಇನ್ನೊಬ್ಬ ಆಟಗಾರನ ಬಗ್ಗೆ ನಾನು ಕೇಳಿಲ್ಲ, ನೋಡಿಲ್ಲ. ಅವತ್ತೇಕೋ ಲಿಯಾಂಡರ್ ಪೇಸ್ ಕಣ್ಣೀರಾಗಿದ್ದ. ವಿದಾಯದ ಕ್ಷಣಗಳು ಎಂಥಹ ಆಟಗಾರನಿಗೂ ಅಂತಹ ಭಾವುಕಲೋಕಕ್ಕೆ ನೂಕಿ ಬಿಡುತ್ತವೆ. ಅದರಿಂದ ಪೇಸ್ ಹೊರತಾಗಿರಲಿಲ್ಲ. 2020ರ ಟೆನಿಸ್ ಋತು, ತನ್ನ ಪಾಲಿಗೆ ಕೊನೆಯದ್ದು ಎಂದು ಬಿಟ್ಟ. ಉಳಿದ ಮಾತುಗಳು ಕಣ್ಣೀರಲ್ಲಿ ಕಾಣುತ್ತಿದ್ದವು.

ವಾರಕ್ಕೆ 150 ಐ ಫೋನ್ ಕೊಳ್ಳುವ ತಾಕತ್ತು ಇರುವವನ ಬಳಿ ಮುರುಕಲು ಫೋನು..!

ಸದ್ಯ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಆಡುತ್ತಿರುವ ಪೇಸ್, ತಾಯ್ನೆಲದಲ್ಲಿ ಆಡುತ್ತಿರುವ ಕೊನೆಯ ಟೂರ್ನಿಯೆಂದು ಮತ್ತೆ ಮತ್ತೆ ಬಿಕ್ಕುತ್ತಿದ್ದ. ಗಂಟಲು ಅದೇಕೋ ಉಬ್ಬಿ ಬರುತ್ತಿತ್ತು. ಭಾರತ ಟೆನಿಸ್ ಲೋಕ, ಈ ಮೂವತ್ತು ವರ್ಷಗಳಲ್ಲಿ ತುಂಬ ಬೆಳೆದಿದೆ. 90ರ ದಶಕದ ಆರಂಭದಲ್ಲಿ , ಆಗಿನ್ನೂ ಆಂಡ್ರೆ ಅಗಾಸ್ಸಿ, ಸ್ಟೆಫಿ ಗ್ರಾಫ್, ಪೀಟ್ ಸಾಂಪ್ರಾಸ್ ಆಟದ ಚಂದದ ಬಗ್ಗೆ ಮಾತನಾಡುತ್ತಿದ್ದ ಕಾಲ. ಅದೆಲ್ಲಿದ್ದನೋ ಈ ಪೇಸ್, ಮಿಂಚಂತೆ ಟೆನಿಸ್ ಅಂಗಳಕ್ಕೆ ಬಂದಿದ್ದ. ಟೆನಿಸ್ ಬಾಲ್ ಕೂಡ ಅಷ್ಟು ಪುಟಿಯಲಾರದು. ಅಂಥ ಉತ್ಸಾಹದ ಚಿಲುಮೆ. ಆಡಿದ, ರಂಜಿಸಿದ, ಒಂದು ತಲೆಮಾರು ಟೆನಿಸ್ ರಾಕೆಟ್ ಹಿಡಿಯುವಂತೆ ಹುಚ್ಚು ಹಿಡಿಸಿಬಿಟ್ಟ. ಅವನ ಆಟದಲ್ಲಿ ಅಂಥ ಕೆಚ್ಚಿತ್ತು. ಭಾರತದ ಧ್ವಜದ ಕೆಳಗೆ ಅವನಾಡಬೇಕಾದರೆ ಅಕ್ಷರಶಃ ಸಿಂಹ. ಅದು ಡೇವಿಸ್ ಕಪ್ ಇರಲಿ, ಒಲಿಂಪಿಕ್ ಇರಲಿ. ಆ ಆಟ ನೋಡೋದೆ ಹಬ್ಬ. ಒಲಿಂಪಿಕ್ ನಲ್ಲಿ ಭಾರತಕ್ಕೆ ಒಂದೂ ಪದಕ ಇಲ್ಲವೇನೋ ಎಂದು ಕೊಳ್ಳುತ್ತಿದ್ದ ಕಾಲಕ್ಕೆ ಒಂದು ಕಂಚಿನ ಪದಕ ಗೆದ್ದು ಮರ್ಯಾದೆ ಉಳಿಸಿದ್ದ. ಪದಕ ಪಟ್ಟಿಯಲ್ಲಿ ಭಾರತದ ಹೆಸರು ಬರೆಸಿದ್ದ. ಅದೇ ಲಿಯಾಂಡರ್ ಪೇಸ್, ಈಗ ವಿದಾಯದ ಮಾತನಾಡುತ್ತಿದ್ದಾನೆ.

2020ರಲ್ಲಿ ಟೆನಿಸ್‌ಗೆ ಪೇಸ್‌ ಗುಡ್‌ಬೈ!

ಅಮ್ಮನಂತ ಮಾರ್ಟಿನಾ ನವ್ರಾಟಿಲೋವಾ ಜೊತೆ ಅದೆಷ್ಟು ಚಂದದ ಮಿಕ್ಸೆಡ್ ಡಬಲ್ಸ್ ಮ್ಯಾಚ್ ಆಡುತ್ತಿದ್ದ. ಗೆದ್ದೇ ಬಿಟ್ಟರೆ ಅಮ್ಮನ ತೋಳನ್ನ ಕಂದ ಸೇರುವಂತೆ ಅಪ್ಪಿಬಿಡುತ್ತಿದ್ದ. ಅದು ಅಮ್ಮ ಮಗನ ಆಟವೆಂದೇ ಜನಜನಿತ. ಅವನಿಗೆ ಮಾತ್ರ ಸಾಧ್ಯವಾಗಿದ್ದು! ಮಹೇಶ್ ಭೂಪತಿಯೊಂದಿಗೆ ಅವನು ಡಬಲ್ಸ್ ಕಣಕ್ಕಿಳಿದರೆ ಇಡಿಯ ಭಾರತವೇ ನೋಡಬೇಕು. ಅಷ್ಟು ಚಂದ ಆ ಮ್ಯಾಚ್. ಅತ್ಯದ್ಭುತ ಶಾಟ್ ಹೊಡೆದು ಎದುರಾಳಿಗಳನ್ನ ಕಕ್ಕಾಬಿಕ್ಕಿ ಮಾಡಿ, ಪಾಯಿಂಟ್ ಹೆಕ್ಕಿದಾಗ ಇಬ್ಬರೂ ಎದೆಗೆ ಎದೆ ಗುದ್ದಿಕೊಳ್ಳುತ್ತಿದ್ದರಲ್ಲ. ಸಿಂಹದ ಮರಿಗಳವು. ವಾವ್..ಶಬ್ಧ ಸಾಲದು ಆ ರೋಷಾವೇಶಕ್ಕೆ.

ಭಾರತಕ್ಕೆ ಮರೀಚಿಕೆಯೇ ಆಗಿದ್ದ ಗ್ರಾಂಡ್​ಸ್ಲಾಂಗಳನ್ನ ಪೇಸ್ 18 ಬಾರಿ ಗೆದ್ದಿದ್ದಾನೆ. ಅಷ್ಟು ಸಾಕು ಅವನ ಆರ್ಭಟದ ಆಟದ ಪರಿಚಯಕ್ಕೆ. ಈಗ ಪೇಸ್ ಇನ್ನು ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನಲ್ಲಿ ಮ್ಯಾಚ್ ಆಡಲಿದ್ದಾನೆ. ಸೋತರೆ ಇದೇ ಕಡೆ ಮ್ಯಾಚ್. ಸೋಲದಿರಲಿ. ಅವನ ಆಟ ಕಣ್ತುಂಬಿಕೊಳ್ಳದೇ ಇರಲಾರೆ. ಹೊರಟೆ.......
 

Latest Videos
Follow Us:
Download App:
  • android
  • ios