ಚೊಚ್ಚಲ ಟೆಕ್ವಾಂಡೋ ಪ್ರೀಮಿಯರ್ ಲೀಗ್ ಗೆದ್ದ ರಾಜಸ್ಥಾನ ರೆಬೆಲ್ಸ್, ಬೆಂಗಳೂರು ನಿಂಜಾಸ್‌ಗೆ ನಿರಾಸೆ!

ಚೊಚ್ಚಲ ಟೆಕ್ವಾಂಡೋ ಪ್ರೀಮಿಯರ್ ಲೀಗ್‌ನಲ್ಲಿ ಬೆಂಗಳೂರು ನಿಂಜಾಸ್ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದರೆ,  ರಾಜಸ್ಥಾನ ರೆಬೆಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

Rajasthan rebels lift maiden taekwondo premier league trophy in New delhi ckm

ನವದೆಹಲಿ(ಜೂ.26): ಚೊಚ್ಚಲ ಆವೃತ್ತಿಯ ಟೆಕ್ವಾಂಡೋ ಪ್ರೀಮಿಯರ್ ಲೀಗ್ (ಟಿಪಿಎಲ್)ನಲ್ಲಿ ಚಾಂಪಿಯನ್ ಆಗುವ ಮೂಲಕ ರಾಜಸ್ಥಾನ ರೆಬೆಲ್ಸ್ ತಂಡ ಇತಿಹಾಸ ರಚಿಸಿದೆ. ಭಾನುವಾರ ತಡರಾತ್ರಿ ನಡೆದ ಫೈನಲ್‌ನಲ್ಲಿ ರಾಜಸ್ಥಾನ ತಂಡವು ಡೆಲ್ಲಿ ವಾರಿಯರ್ಸ್ ವಿರುದ್ಧ ಗೆಲುವು ಸಾಧಿಸಿದೆ. ಬ್ಲಾಕ್ ಬೆಲ್ಟ್ ಹೊಂದಿರುವ ತಾರಾ ಕೋಚ್ ಅಬ್ರಾರ್ ಖಾನ್ ಮಾರ್ಗದರ್ಶನದ ರಾಜಸ್ಥಾನ ತಂಡವನ್ನು ಹರ್ಯಾಣದ ಸೌರವ್ ಮುನ್ನಡೆಸಿದರು. ಈ ಅನುಭವಿ ಜೋಡಿಯು ಉತ್ಕೃಷ್ಟ ರಣತಂತ್ರಗಳ ಮೂಲಕ ತಮಗೆ ಎದುರಾದ ಎಲ್ಲಾ ಎದುರಾಳಿಗಳನ್ನು ನೆಲಕ್ಕೆ ಕೆಡವಿ ತಮ್ಮ ತಂಡ ಟ್ರೋಫಿಗೆ ಮುತ್ತಿಡುವಂತೆ ಮಾಡಿತು.

ಭಾರೀ ರೋಚಕತೆಯಿಂದ ಕೂಡಿದ್ದ ಡೆಲ್ಲಿ ವಿರುದ್ಧದ ಫೈನಲ್‌ನಲ್ಲಿ ರಾಜಸ್ಥಾನ 2-1 ಅಂತರದಲ್ಲಿ ಗೆಲುವು ಪಡೆಯಿತು. ಮೊದಲ ಸುತ್ತಿನಲ್ಲಿ 3-9ರ ಸೋಲು ಕಂಡ ರಾಜಸ್ಥಾನ ಬಳಿಕ ಪುಟಿದೆದ್ದಿತು. ಮುಂದಿನ ಎರಡು ಸುತ್ತುಗಳನ್ನು ಕ್ರಮವಾಗಿ 9-4, 5-4ರ ಅಂತರದಲ್ಲಿ ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು.

ಅಪರೂಪದ ಟೇಕ್ವಾಂಡೋ ಯುದ್ಧ ಕ್ರೀಡೆಯಲ್ಲಿ ವಿಜಯಪುರ ಬಾಲಕನಿಗೆ ಚಿನ್ನ

ಡೆಲ್ಲಿ ತಂಡದ ಮಾಲಿಕ ಶ್ಯಾಮ್ ಪಟೇಲ್ ತಮ್ಮ ಆಟಗಾರರಿಗೆ ನಿರಂತರವಾಗಿ ಉಪಯುಕ್ತ ಸಲಹೆಗಳನ್ನು ನೀಡುತ್ತಾ ಸಾಗಿದರೂ ಅಜಯ್, ದೀಪಾನ್ಶು ಹಾಗೂ ನಿಶಾಂತ್ ಅವರನ್ನೊಳಗೊಂಡ ತಂಡ ನಿರ್ಣಾಯಕ ಹಂತದಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. 3ನೇ ಹಾಗೂ ಅಂತಿಮ ಸುತ್ತಿನಲ್ಲಿ ಡೆಲ್ಲಿ ಅಂಕ ಗಳಿಕೆಯಲ್ಲಿ ಹಿಂದೆ ಬಿತ್ತು. ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಕ್ಕಿತು ಎನ್ನುವುದರಲ್ಲಿ ಎರಡು ಮಾತಿಲ್ಲ.

ರಾಜಸ್ಥಾನಕ್ಕೆ ಸೆಮಿಫೈನಲ್‌ನಲ್ಲೂ ಕಠಿಣ ಸ್ಪರ್ಧೆ ಎದುರಾಯಿತು. ರಿಶಿ ರಾಜ್, ಆಶಿಶ್ ಮುವಾಲ್ ಹಾಗೂ ಯಶ್ ರಾಜ್ ಸಿನ್ಹ್ ಅವರನ್ನೊಳಗೊಂಡಿದ್ದ ಗುಜರಾತ್ ಥಂಡರ್ಸ್ ತಂಡ ಭರ್ಜರಿ ಪೈಪೋಟಿ ನೀಡಿತು. ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದ ಗುಜರಾತ್, ಕ್ವಾರ್ಟರ್ ಫೈನಲ್‌ನಲ್ಲಿ ಹರ್ಯಾಣ ಹಂಟರ್ಸ್ ವಿರುದ್ಧ 2-0 ಅಂತರದಲ್ಲಿ ಗೆಲುವು ಸಾಧಿಸಿತ್ತು. ಆದರೆ ಸೆಮೀಸ್‌ನಲ್ಲಿ ಗುಜರಾತ್ ತಂಡ ರಾಜಸ್ಥಾನಕ್ಕೆ ಶರಣಾಯಿತು.

ಡೆಲ್ಲಿ ವಾರಿಯರ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಮಹಾರಾಷ್ಟ ಆವೆಂಜರ್ಸ್ ವಿರುದ್ಧ 2-1ರಲ್ಲಿ ಜಯ ಗಳಿಸಿತು. ಸೆಮಿಫೈನಲ್‌ನಲ್ಲಿ ಪಂಜಾಬ್ ರಾಯಲ್ಸ್ ತಂಡವನ್ನು 2-1ರ ಅಂತರದಲ್ಲಿ ಬಗ್ಗುಬಡಿದು ಫೈನಲ್‌ಗೇರಿತ್ತು.

 

ದೇಶ ಪ್ರತಿನಿಧಿಸುವ ಕನಸು ನನಸು ಮಾಡಿಕೊಂಡ ಕಾಶ್ಮೀರಿ ಅಥ್ಲೀಟ್‌ ಡ್ಯಾನಿಶ್‌ ಮಂಜೂರ್

ಬೆಂಗಳೂರು ತಂಡಕ್ಕೆ ಕ್ವಾರ್ಟರ್‌ನಲ್ಲಿ ಸೋಲು:
ಚೊಚ್ಚಲ ಆವೃತ್ತಿಯ ಟಿಪಿಎಲ್‌ನಲ್ಲಿ ಬೆಂಗಳೂರು ಮೂಲದ ತಂಡವಾದ ಬೆಂಗಳೂರು ನಿಂಜಾಸ್ ಸಹ ಪಾಲ್ಗೊಂಡಿತ್ತು. ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ ತಂಡ, ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿತು. ಪಂಜಾಬ್ ರಾಯಲ್ಸ್ ವಿರುದ್ಧ ಬೆಂಗಳೂರು ತಂಡ 1-2 (10-9, 6-8, 2-5)ರಲ್ಲಿ ಸೋತು ಹೊರಬಿತ್ತು.

ಚೊಚ್ಚಲ ಆವೃತ್ತಿಯ ಟೆಕ್ವಾಂಡೋ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡಿದ್ದವು. ಐಪಿಎಲ್ ಮಾದರಿಯಲ್ಲಿ ನಡೆದ ಟೂರ್ನಿಯಲ್ಲಿ ಖ್ಯಾತ ಸೆಲೆಬ್ರಿಟಿಗಳು, ಉದ್ಯಮಿಗಳು ತಂಡಗಳ ಮಾಲಿಕರಾಗಿದ್ದಾರೆ. ದೇಶದ ಅಗ್ರ ಶ್ರೇಯಾಂಕಿತ ಆಟಗಾರರ ಜೊತೆ ಯುವ ಪ್ರತಿಭೆಗಳಿಗೂ ಅವಕಾಶ ದೊರೆಯಿತು. ಸದ್ಯದಲ್ಲೇ ಮಹಿಳೆಯರಿಗೆ, ಮಕ್ಕಳಿಗೆ ಪ್ರತ್ಯೇಕ ಟಿಪಿಎಲ್ ಆರಂಭಗೊಳ್ಳಲಿದ್ದು, ಅದಕ್ಕೂ ಮುನ್ನ ಅಂತಾರಾಷ್ಟಿಯ ಆವೃತ್ತಿ ನಡೆಸಲು ಯೋಜಿಸಲಾಗಿದೆ.

ಟಿಪಿಎಲ್‌ನ ಬ್ರ್ಯಾಂಡ್ ರಾಯಭಾರಿ, ಕೊರಿಯಾದ ಗ್ರ್ಯಾಂಡ್ ಮಾಸ್ಟರ್ ಜುನ್ ಲೀ ಲೀಗ್‌ನ ಗುಣಮಟ್ಟದ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದರು. ಇದಕ್ಕಿಂತ ರೋಚಕ ಫಿನಾಲೆಯನ್ನು ನಾವು ಕಾಣಲು ಸಾಧ್ಯವಿಲ್ಲ. ಫೈನಲ್ ಹಣಾಹಣಿ ಎಂದು ಕರೆಸಿಕೊಳ್ಳಲು ಬೇಕಿದ್ದ ಎಲ್ಲಾ ಅಂಶಗಳನ್ನು ಈ ಪಂದ್ಯ ಒಳಗೊಂಡಿತ್ತು. ಭಾರತದಲ್ಲಿರುವ ಪ್ರತಿಭೆಗಳು ಹಾಗೂ ಟೂರ್ನಿಯುದ್ದಕ್ಕೂ ಕಂಡುಬಂದ ಫೈಟ್‌ಗಳ ಗುಣಮಟ್ಟ ನನ್ನನ್ನು ಬೆರಗಾಗಿಸಿದೆ ಎಂದು ಜುನ್ ಲೀ ತಿಳಿಸಿದರು.

ಟಿಪಿಎಲ್‌ನ ಸಂಸ್ಥಾಪಕ ಹಾಗೂ ಟೂರ್ನಿಯ ಹಿಂದಿರುವ ಶಕ್ತಿ ಡಾ. ಜಿ.ಕೆ. ವೆಂಕಟ್ ಮಾತನಾಡಿ, ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ ನಾವು ವಹಿಸಿದ ಪರಿಶ್ರಮಕ್ಕೆ ನಮ್ಮ ಊಹೆಗೂ ಮೀರಿದ ಫಲಿತಾಂಶ ದೊರೆತಿದೆ. ಟೂರ್ನಿಯು ಅತ್ಯಂತ ರೋಚಕವಾಗಿತ್ತು ಹಾಗೂ ಆಟಗಾರರು ಪ್ರತಿ ಕ್ಷಣವನ್ನೂ ಆನಂದಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಫಲಿತಾಂಶಗಳು
ಫೈನಲ್: ರಾಜಸ್ಥಾನ ರೆಬೆಲ್ಸ್ ತಂಡ ಡೆಲ್ಲಿ ವಾರಿಯರ್ಸ್ ವಿರುದ್ಧ 2-1 ಜಯ (3-9, 9-4, 5-4)
ಸೆಮಿಫೈನಲ್ಸ್: ಡೆಲ್ಲಿ ವಾರಿಯರ್ಸ್ ತಂಡ ಪಂಜಾಬ್ ರಾಯಲ್ಸ್ ವಿರುದ್ಧ 2-1 ಜಯ (6-11, 23-9, 18-7); ರಾಜಸ್ಥಾನ ರೆಬೆಲ್ಸ್ ತಂಡ ಗುಜರಾತ್ ಥಂಡರ್ಸ್ ವಿರುದ್ಧ 2-1 ಜಯ (7-2, 5-5, 8-7)

Latest Videos
Follow Us:
Download App:
  • android
  • ios