ಆಸ್ಪ್ರೇಲಿಯನ್ ಓಪನ್: ರಾಫೆಲ್ ನಡಾಲ್‌ಗೆ ಥೀಮ್ ಶಾಕ್!
ಆಸ್ಪ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ದಿಗ್ಗಜ ರಾಫೆಲ್ ನಡಾಲ್‌ಗೆ ಆಘಾತ ಎದುರಾಗಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಫೆಲ್ ಮುಗ್ಗರಿಸಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿಪ್, ಮುಗುರುಜಾ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಮೆಲ್ಬರ್ನ್(ಜ.30): ದಾಖಲೆಯ 20ನೇ ಗ್ರ್ಯಾಂಡ್‌ಸ್ಲಾಂ ಮೇಲೆ ಕಣ್ಣಿಟ್ಟಿದ್ದ ವಿಶ್ವ ನಂ.1 ಸ್ಪೇನ್‌ನ ರಾಫೆಲ್ ನಡಾಲ್ ಹಾಗೂ ಸ್ವಿಜರ್‌ಲೆಂಡ್‌ನ ಸ್ಟಾನ್ ವಾವ್ರಿಂಕಾ ಅವರ ಆಸ್ಪ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲಾಂ ಅಭಿಯಾನ ಕೊನೆಗೊಂಡಿದೆ. ಯುವ ಆಟಗಾರರಾದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್, ಆಸ್ಟ್ರಿಯಾದ ಡೊಮಿನಿಕ್ ಥೀಮ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಇದನ್ನೂ ಓದಿ: ಆಸ್ಟ್ರೇಲಿಯನ್ ಓಪನ್: ಫೆಡರರ್-ಜೋಕೋವಿಚ್ ಸೆಮೀಸ್ ಫೈಟ್
ಬುಧವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ನಡಾಲ್, ವಿಶ್ವ ನಂ.5 ಆಸ್ಟ್ರಿಯಾದ ಡೊಮಿನಿಕ್ ಥೀಮ್ ಎದುರು ಸೋಲಿಗೆ ಶರಣಾಗಿ ಟೂರ್ನಿಯಿಂದ ಹೊರ ನಡೆದರು. ನಡಾಲ್, ಥೀಮ್ ವಿರುದ್ಧ 6-7(3-7), 6-7(4-7), 6-4, 6-7(6-8) ಸೆಟ್‌ಗಳಲ್ಲಿ ಪರಾಭವಗೊಂಡರು. ಥೀಮ್, ಆಸ್ಪ್ರೇಲಿಯನ್ ಓಪನ್‌ನಲ್ಲಿ ಮೊದಲ ಬಾರಿ ಸೆಮೀಸ್‌ಗೇರಿದರು.
ಇದಕ್ಕೂ ಮುನ್ನ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್, 2014ರ ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ವಾವ್ರಿಂಕಾ ವಿರುದ್ಧ 1-6, 6-3, 6-4, 6-2 ಸೆಟ್‌ಗಳಿಂದ ಗೆಲುವು ಪಡೆದರು. ಈ ಜಯದೊಂದಿಗೆ ಜ್ವೆರೆವ್ ಮೊದಲ ಬಾರಿ ಗ್ರ್ಯಾಂಡ್‌ಸ್ಲಾಮ್ ಸೆಮೀಸ್ ಪ್ರವೇಶಿಸಿದ್ದಾರೆ.
ಇದನ್ನೂ ಓದಿ: ಆಸ್ಪ್ರೇಲಿಯನ್ ಓಪನ್: ಸೆರೆನಾಗೆ ಶಾಕ್, ಹೊರಬಿದ್ದ ಒಸಾಕ!
ಇಂದು ಫೆಡರರ್ vs ಜೋಕೋ: ಪುರುಷರ ಸಿಂಗಲ್ಸ್‌ನ ಮೊದಲ ಸೆಮಿಫೈನಲ್‌ನಲ್ಲಿ ಗುರುವಾರ ರೋಜರ್ ಫೆಡರರ್ ಹಾಗೂ ನೋವಾಕ್ ಜೋಕೋವಿಚ್ ಎದುರಾಗಲಿದ್ದಾರೆ. ಹಾಲಿ ಚಾಂಪಿಯನ್ ಜೋಕೋವಿಚ್ ದಾಖಲೆಯ 8ನೇ ಬಾರಿಗೆ ಆಸ್ಪ್ರೇಲಿಯನ್ ಓಪನ್ ಗೆಲ್ಲುವ ಗುರಿ ಹೊಂದಿದ್ದಾರೆ. ಫೆಡರರ್ 6 ಬಾರಿ ಆಸ್ಪ್ರೇಲಿಯನ್ ಓಪನ್ ಜಯಿಸಿದ್ದು, ಮತ್ತೊಂದು ಗೆಲುವಿನೊಂದಿಗೆ ತಮ್ಮ ಗ್ರ್ಯಾಂಡ್‌ಸ್ಲಾಂ ಗೆಲುವಿನ ಸಂಖ್ಯೆಯನ್ನು 21ಕ್ಕೇರಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಶುಕ್ರವಾರ ನಡೆಯಲಿರುವ 2ನೇ ಸೆಮಿಫೈನಲ್‌ನಲ್ಲಿ ಥೀಮ್ ಹಾಗೂ ಜ್ವೆರೆವ್ ಸೆಣಸಲಿದ್ದಾರೆ.
ಸೆಮೀಸ್‌ಗೆ ಹಾಲಿಪ್, ಮುಗುರುಜಾ
ಮಹಿಳಾ ಸಿಂಗಲ್ಸ್‌ನಲ್ಲಿ ನಿರೀಕ್ಷೆಯಂತೆ ರೋಮೇನಿಯಾದ ಸಿಮೋನಾ ಹಾಲೆಪ್ ಹಾಗೂ ಸ್ಪೇನ್‌ನ ಗಾರ್ಬೈನ್ ಮುಗುರುಜಾ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ 4ನೇ ಶ್ರೇಯಾಂಕಿತೆ ಹಾಲೆಪ್, ಎಸ್ಟೋನಿಯಾದ ಅನೆಟ್ ಕೊಂಟಾವಿಟ್ ವಿರುದ್ಧ 6-1, 6-1 ನೇರ ಸೆಟ್‌ಗಳಿಂದ ಸುಲಭ ಜಯ ಪಡೆದರು. 3ನೇ ಗ್ರ್ಯಾಂಡ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಹಾಲೆಪ್, 2018ರಲ್ಲಿ ಆಸ್ಪ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೇರಿದ್ದರು. 2 ಗ್ರ್ಯಾಂಡ್‌ಸ್ಲಾಂ ವಿಜೇತೆ ಸ್ಪೇನ್‌ನ ಗಾರ್ಬೈನ್ ಮುಗುರುಜಾ, ರಷ್ಯಾದ ಅನಾಸ್ಟಸಿಯಾ ವಿರುದ್ಧ 7-5, 6-3 ಸೆಟ್‌ಗಳಿಂದ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.