ಮೆಲ್ಬರ್ನ್‌(ಜ.29): ಟೆನಿಸ್‌ನ ಮಾಂತ್ರಿಕ ಸ್ವಿಜರ್‌ಲೆಂಡ್‌ನ ರೋಜರ್‌ ಫೆಡರರ್‌, ಹಾಲಿ ಚಾಂಪಿಯನ್‌ ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಹಾಗೂ ವಿಶ್ವ ನಂ.1 ಆಸ್ಪ್ರೇಲಿಯಾದ ಆ್ಯಶ್ಲೆ ಬಾರ್ಟಿ, ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ಸ್ಲಾಂ ಟೆನಿಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ದಾಖಲೆ ಗ್ರ್ಯಾಂಡ್‌ಸ್ಲಾಂ ವಿಜೇತ ಫೆಡರರ್‌, ಸರ್ಬಿಯಾದ ಬಲಾಢ್ಯ ಆಟಗಾರ ಜೋಕೊವಿಕ್‌ ಅವರನ್ನು ಎದುರಿಸಲಿದ್ದಾರೆ.

ಆಸ್ಪ್ರೇಲಿಯನ್‌ ಓಪನ್‌ ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಫೆಡರರ್‌

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಫೆಡರರ್‌, ಅಮೆರಿಕದ ಸ್ಯಾಂಡ್‌ಗ್ರೆನ್‌ ವಿರುದ್ಧ 6-3, 2-6, 2-6, 7-6(10/8), 6-3 ಸೆಟ್‌ಗಳಿಂದ ಜಯ ಸಾಧಿಸಿ ನಿಟ್ಟುಸಿರು ಬಿಟ್ಟರು. ಫೆಡರರ್‌ ಅವರ ಗೆಲುವಿನ ಓಟವನ್ನು ದುರ್ಗಮ ಗೊಳಿಸಿದ ಸ್ಯಾಂಡ್‌ಗ್ರೆನ್‌ ಎರಡು ಸೆಟ್‌ನಲ್ಲಿ ಗೆದ್ದು 6 ಬಾರಿ ಚಾಂಪಿಯನ್‌ ಆಗಿರುವ ಫೆಡರರ್‌ ಬೆವರಿಳಿಸಿಬಿಟ್ಟರು. ನಾಲ್ಕಕ್ಕೂ ಹೆಚ್ಚು ಟೈ ಬ್ರೇಕ್‌ ಪಡೆದುಕೊಂಡ ರೋಜರ್‌ 4ನೇ ಸೆಟ್‌ನಲ್ಲಿ ತಮ್ಮ ಅನುಭವಗಳನ್ನೆಲ್ಲ ಒರೆಗೆ ಹಚ್ಚಬೇಕಾಯಿತು. ಅಂತಿಮ ಸೆಟ್‌ನಲ್ಲಿ ಎದುರಾಳಿ ಬೆಚ್ಚಿ ಬೀಳುವಂತೆ ಸರ್ವ್ ಮಾಡಿದ ಫೆಡರರ್‌ ಕಡೆಗೂ ಗೆಲುವಿನ ನಗೆ ಬೀರಿ ಸೆಮಿಫೈನಲ್‌ ಪ್ರವೇಶಿಸಿದರು.

ಆಸ್ಪ್ರೇಲಿಯನ್‌ ಓಪನ್‌: ಕ್ವಾರ್ಟರ್‌ಗೆ ನಡಾಲ್‌, ಹಾಲೆಪ್‌

ನೋವಾಕ್‌ ಜೋಕೋವಿಚ್‌, ಕೆನಡಾದ ಮಿಲೋಸ್‌ ರೋನಿಕ್‌ ವಿರುದ್ಧ 6-4, 6-3, 7-6(7/1) ಸೆಟ್‌ಗಳಿಂದ ಗೆಲುವು ಸಾಧಿಸಿ ಸೆಮೀಸ್‌ಗೇರಿದರು. ಅಂತಿಮ ಸೆಟ್‌ನಲ್ಲಿ ಮಿಲೋಸ್‌ ಅವರ ಡಿಫೆನ್ಸ್‌ ಎದುರಿಸುವಲ್ಲಿ ಜೋಕೋ, ಕೊಂಚ ಎಡವಟ್ಟು ಮಾಡಿಕೊಂಡರಾದರೂ ಅಂತಿಮವಾಗಿ ಜಯ ತಮ್ಮದಾಗಿಸಿಕೊಂಡರು. ಜೋಕೋ, ಸೆಮೀಸ್‌ನಲ್ಲಿ ಫೆಡರರ್‌ರನ್ನು ಎದುರಿಸಲಿದ್ದಾರೆ.

ಬಾರ್ಟಿ ಇತಿಹಾಸ:

ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.1 ಆ್ಯಶ್ಲೆ ಬಾರ್ಟಿ, ಚೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ವಿರುದ್ಧ 7-6(8-6), 6-2 ನೇರ ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. 36 ವರ್ಷಗಳ ಬಳಿಕ ತವರಿನ ಆಟಗಾರ್ತಿಯೊಬ್ಬರು ಆಸ್ಪ್ರೇಲಿಯಾ ಓಪನ್‌ನ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ ಇತಿಹಾಸವನ್ನು ಸೃಷ್ಟಿಸಿದ ಗೌರವಕ್ಕೆ ಬಾರ್ಟಿ ಪಾತ್ರರಾಗಿದ್ದಾರೆ. ಎಂಟರ ಘಟ್ಟಕ್ಕೇರಿದ್ದ ಅರಬ್‌ ರಾಷ್ಟ್ರದ ಮೊದಲ ಆಟಗಾರ್ತಿ ಎನಿಸಿದ್ದ ಒನ್ಸ್‌ ಜಬೆಯುರ್‌ ವಿರುದ್ಧ ಅಮೆರಿಕದ ಸೋಫಿಯಾ ಕೆನಿನ್‌ 4-6, 4-6 ಸೆಟ್‌ಗಳಲ್ಲಿ ಜಯಿಸಿ ಸೆಮೀಸ್‌ಗೇರಿದರು.

2ನೇ ಸುತ್ತಲ್ಲಿ ಸೋತು ಹೊರಬಿದ್ದ ಪೇಸ್‌

ಮಿಶ್ರ ಡಬಲ್ಸ್‌ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಭಾರತದ ಲಿಯಾಂಡರ್‌ ಪೇಸ್‌ ಹಾಗೂ ಲಾತ್ವಿಯಾದ ಜೆಲೆನಾ ಒಸ್ಟಪೆಂಕೋ ಜೋಡಿ, ಬ್ರಿಟನ್‌ನ ಜಾಮಿ ಮರ್ರೆ, ಅಮೆರಿಕದ ಮಾಟೆಕ್‌-ಸ್ಯಾಂಡ್ಸ್‌ ಜೋಡಿ ವಿರುದ್ಧ 2-6, 5-7 ಸೆಟ್‌ಗಳಲ್ಲಿ ಸೋಲುಂಡು ಟೂರ್ನಿಯಿಂದ ಹೊರಬಿತ್ತು. ಈ ಸೋಲಿನೊಂದಿಗೆ ಪೇಸ್‌ ವೃತ್ತಿ ಜೀವನ ಅಂತ್ಯವಾಗಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಪೇಸ್‌ 2020ರ ಆಸ್ಪ್ರೇಲಿಯಾ ಓಪನ್‌ ವೃತ್ತಿ ಜೀವನದ ಕೊನೆಯ ಟೂರ್ನಿ ಎಂದು ಘೋಷಿಸಿದ್ದರು.

ರೋಹನ್‌ ಬೋಪಣ್ಣ, ಉಕ್ರೇನ್‌ನ ನಾಡಿಯಾ ಕಿಚೆನೊಕ್‌ ಜೋಡಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದು, 5ನೇ ಶ್ರೇಯಾಂಕಿತ ನಿಕೋಲಾ ಮೆಕ್ಟಿಕ್‌, ಬಾರ್ಬೊರಾ ಕ್ರೆಜಿಕೊವಾ ಜೋಡಿ ವಿರುದ್ಧ ಗುರುವಾರ ಸೆಣಸಲಿದೆ.