ಆಸ್ಪ್ರೇಲಿಯನ್ ಓಪನ್: ಸೆರೆನಾಗೆ ಶಾಕ್, ಹೊರಬಿದ್ದ ಒಸಾಕ!
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿವೆ. ಸೆರೆನಾ ವಿಲಿಯಮ್ಸ್, ನವೊಮಿ ಒಸಾಕ ಅಭಿಯಾನ ಅಂತ್ಯಗೊಂಡಿದೆ. ಇನ್ನು ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಆಸ್ಪ್ರೇಲಿಯನ್ ಓಪನ್‌ನಲ್ಲಿ 100ನೇ ಗೆಲುವು ದಾಖಲಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..
ಮೆಲ್ಬರ್ನ್(ಜ.25): ದಾಖಲೆಯ 24ನೇ ಗ್ರ್ಯಾಂಡ್‌ಸ್ಲಾಮ್ ಮೇಲೆ ಕಣ್ಣಿಟ್ಟಿದ ಅಮೆರಿಕದ ಸೆರೆನಾ ವಿಲಿಯಮ್ಸ್, ಹಾಲಿ ಚಾಂಪಿಯನ್ ಜಪಾನ್‌ನ ನವೊಮಿ ಒಸಾಕ ಹಾಗೂ ಡೆನ್ಮಾರ್ಕ್ನ ಕ್ಯಾರೋಲಿನ್ ವೋಜ್ನಿಯಾಕಿ ಆಸ್ಪ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲಾಂನ 3ನೇ ಸುತ್ತಲ್ಲೇ ಸೋಲಿನ ಆಘಾತ ಅನುಭವಿಸಿ ಹೊರಬಿದ್ದಿದ್ದಾರೆ.
ತಾಯಿಯಾದ ಬಳಿಕ ಮೊದಲ ಗ್ರ್ಯಾಂಡ್‌ಸ್ಲಾಂ ಗೆಲ್ಲುವ ಉತ್ಸಾಹದಲ್ಲಿದ್ದ ಸೆರೆನಾಗೆ ಅನಿರೀಕ್ಷಿತವಾಗಿ ಎದುರಾದ ಸೋಲು ನಿರಾಸೆ ತಂದಿದೆ. ಶುಕ್ರವಾರ ಮಹಿಳಾ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ಸೆರೆನಾ, ಚೀನಾದ ವಾಂಗ್ ಕಿಯಾಂಗ್ ವಿರುದ್ಧ 4-6, 7-6(7-2), 5-7 ಸೆಟ್‌ಗಳಲ್ಲಿ ಪರಾಭವಗೊಂಡರು.
ಆಸ್ಪ್ರೇಲಿಯನ್ ಓಪನ್: ನಡಾಲ್, ಹಾಲೆಪ್ 3ನೇ ಸುತ್ತಿಗೆ ಲಗ್ಗೆ
ಹಾಲಿ ಚಾಂಪಿಯನ್ ಜಪಾನ್‌ನ ನವೊಮಿ ಒಸಾಕ, ಭವಿಷ್ಯದ ಸೆರೆನಾ ಎಂದೇ ಕರೆಸಿಕೊಳ್ಳುತ್ತಿರುವ ಅಮೆರಿಕದ 15 ವರ್ಷದ ಕೊಕೊ ಗಾಫ್ ವಿರುದ್ಧ 3-6, 4-6 ನೇರ ಸೆಟ್‌ಗಳಲ್ಲಿ ಸೋತು ಹೊರಬಿದ್ದರು. ಸುಲಭ ಜಯ ಪಡೆದ ಕೊಕೊ ಗಾಫ್, 4ನೇ ಸುತ್ತಿನಲ್ಲಿ ಅಮೆರಿಕದವರೇ ಆದ ಸೋಫಿಯಾ ಕೆನಿನ್‌ರನ್ನು ಎದುರಿಸಲಿದ್ದಾರೆ. ವಿಶ್ವ ನಂ.1 ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ, ಪೆಟ್ರಾ ಕ್ವಿಟೋವಾ ಸಹ ಅಂತಿಮ 16ರ ಸುತ್ತು ಪ್ರವೇಶಿಸಿದ್ದಾರೆ.
ವೋಜ್ನಿಯಾಕಿ ನಿವೃತ್ತಿ
ಮಾಜಿ ನಂ.1 ಡೆನ್ಮಾರ್ಕ್ನ ಕ್ಯಾರೋಲಿನ್ ವೋಜ್ನಿಯಾಕಿ, ಟೆನಿಸ್‌ನಿಂದ ನಿವೃತ್ತಿ ಪಡೆದಿದ್ದಾರೆ. ಇದು ತಮ್ಮ ವೃತ್ತಿಬದುಕಿನ ಕೊನೆ ಟೂರ್ನಿ ಎಂದು ಅವರು ಮೊದಲೇ ಘೋಷಿಸಿದ್ದರು. 3ನೇ ಸುತ್ತಿನಲ್ಲಿ ಟ್ಯುನಿಶಿಯಾದ ಒನ್ಸ್ ಜಬೆಯುರ್ ವಿರುದ್ಧ 5-7, 6-3, 5-7 ಸೆಟ್‌ಗಳಲ್ಲಿ ಸೋತು, ಕಣ್ಣೀರಿಡುತ್ತಾ ಹೊರನಡೆದರು. 2005ರಲ್ಲಿ ವೃತ್ತಿಬದುಕು ಆರಂಭಿಸಿದ್ದ ವೋಜ್ನಿಯಾಕಿ 2018ರಲ್ಲಿ ಆಸ್ಪ್ರೇಲಿಯನ್ ಓಪನ್ ಗೆದ್ದಿದ್ದರು.
ಫೆಡರರ್‌ಗೆ 100ನೇ ಜಯ
20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್, ಆಸ್ಪ್ರೇಲಿಯನ್ ಓಪನ್‌ನಲ್ಲಿ 100ನೇ ಗೆಲುವು ದಾಖಲಿಸಿದ್ದಾರೆ. ಆಸ್ಪ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್ ಎರಡರಲ್ಲೂ 100 ಗೆಲುವು ಸಾಧಿಸಿದ ಮೊದಲ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನಲ್ಲಿ ಫೆಡರರ್, ಸ್ಥಳೀಯ ಟೆನಿಸಿಗ ಜಾನ್ ಮಿಲ್‌ಮನ್ ವಿರುದ್ಧ 4-6, 7-6(7-2), 6-4, 4-6, 7-6(10-8) ಸೆಟ್‌ಗಳಲ್ಲಿ ಪ್ರಯಾಸದ ಗೆಲುವು ಪಡೆದರು. ಈ ಜಯದೊಂದಿಗೆ ಫೆಡರರ್, ಆಸ್ಪ್ರೇಲಿಯನ್ ಓಪನ್‌ನಲ್ಲಿ 18ನೇ ಬಾರಿ 4ನೇ ಸುತ್ತು ಪ್ರವೇಶಿಸಿದರು.
ಹಾಲಿ ಚಾಂಪಿಯನ್ ಸರ್ಬಿಯಾದ ನೋವಾಕ್ ಜೋಕೋವಿಚ್, ಜಪಾನ್‌ನ ಯೊಶಿಹಿತೊ ನಿಶಿಯೊಕಾ ವಿರುದ್ಧ 6-3, 6-2, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.
ದಿವಿಜ್ ಶರಣ್ ಔಟ್
ಪುರುಷರ ಡಬಲ್ಸ್‌ನ 2ನೇ ಸುತ್ತಲ್ಲಿ ಭಾರತದ ದಿವಿಜ್ ಶರಣ್ ಹಾಗೂ ನ್ಯೂಜಿಲೆಂಡ್‌ನ ಆರ್ಟಮ್ ಸಿಟಾಕ್ ಜೋಡಿ, ಬ್ರೆಜಿಲ್‌ನ ಬ್ರುನೊ ಸೊರೆನ್, ಕ್ರೊವೇಷಿಯಾದ ಮೇಟ್ ಪಾವಿಕ್ ಜೋಡಿ ವಿರುದ್ಧ 6-7(2-7), 3-6 ಸೆಟ್‌ಗಳಲ್ಲಿ ಸೋಲುಂಡು ಹೊರಬಿತ್ತು.