ಚೀನಾ ಓಪನ್: ಮೊದಲ ಸುತ್ತಿನಲ್ಲೇ ಹೊರಬಿದ್ದ ಸಿಂಧು!
ಹಾಲಿ ವಿಶ್ವಚಾಂಪಿಯನ್ ಪಿ.ವಿ ಸಿಂಧು ಮತ್ತೊಮ್ಮೆ ಆಘಾತಕಾರಿ ಸೋಲು ಕಂಡು ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಬಳಿಕ ಸಿಂಧುವಿನಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿಲ್ಲ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಫುಝೋ (ನ.06): ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ ಸಿಂಧು ಚೀನಾ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದು ನಿರಾಸೆ ಮೂಡಿಸಿದ್ದಾರೆ. ಚೀನಾ, ಕೊರಿಯಾ, ಡೆನ್ಮಾರ್ಕ್ ಓಪನ್ ಟೂರ್ನಿಗಳಲ್ಲಿ ಬೇಗನೆ ಹೊರಬಿದ್ದ ಸಿಂಧು ಮತ್ತೊಮ್ಮೆ ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಫ್ರೆಂಚ್ ಓಪನ್: ಸಾತ್ವಿಕ್-ಚಿರಾಗ್‌ಗೆ ರನ್ನರ್‌ಅಪ್ ಪ್ರಶಸ್ತಿ!
ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಚೈನೀಸ್ ತೈಪೆಯ ಪೈ ಯು ಪೊ ವಿರುದ್ಧ 13-21, 21-18, 19-21ರಲ್ಲಿ ಸಿಂಧು ಸೋಲುಂಡರು. 74 ನಿಮಿಷ ಹೋರಾಡಿದರೂ ವಿಶ್ವ ನಂ.6 ಸಿಂಧು, ತಮಗಿಂತ 36 ರಾರಯಂಕ್ ಕೆಳಗಿರುವ ಪೈ ಯು ಮುಂದೆ ಮಂಡಿಯೂರಿದರು.
ಡೆಂಗ್ಯೂ ಜ್ವರದಿಂದ ಚೇತರಿಸಿಕೊಂಡ ಶಟ್ಲರ್ ಎಚ್.ಎಸ್ ಪ್ರಣಯ್ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಡೆನ್ಮಾರ್ಕ್ನ ರಾಸ್ಮಸ್ ಗೆಮಕೆ ವಿರುದ್ಧ 17-21, 18-21 ನೇರ ಗೇಮ್‌ಗಳಲ್ಲಿ ಸೋತು ಆಘಾತ ಅನುಭವಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಶುಭಾರಂಭ ಮಾಡಿತು. ಕೆನಡಾದ ಜೋಶುವಾ ಹಲ್‌ರ್‍ಬರ್ಟ್ ಹಾಗೂ ಜೋಸೆಫೈನ್ ವು ವಿರುದ್ಧ 21-19, 21-19 ನೇರ ಗೇಮ್‌ಗಳಲ್ಲಿ ಜಯಿಸಿತು.
ಫ್ರೆಂಚ್ ಓಪನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ, ಇಲ್ಲಿ ಅಮೆರಿಕ ಜೋಡಿಯನ್ನು ಮಣಿಸಿ ಶುಭಾರಂಭ ಮಾಡಿತು. ಅಮೆರಿಕದ ರಯಾನ್ ಚ್ಯೂ ಹಾಗೂ ಫಿಲಿಪ್ ಚ್ಯೂ ಜೋಡಿಯನ್ನು 21-9, 21-15 ನೇರ ಗೇಮ್‌ಗಳಲ್ಲಿ ಸೋಲಿಸಿತು.