ಪ್ರೊ ಕಬಡ್ಡಿ ಫೈನಲ್: ಹೊಸ ಚಾಂಪಿಯನ್ ಉದಯಕ್ಕೆ ಕ್ಷಣಗಣನೆ
ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಹೊಸ ಚಾಂಪಿಯನ್ ಉಗಮಕ್ಕೆ ಕ್ಷಣಗಣನೆ ಆರಂಭವಾಗಿದೆ. ದಬಾಂಗ್ ಡೆಲ್ಲಿ ಹಾಗೂ ಬೆಂಗಾಲ್ ವಾರಿಯರ್ಸ್ ಚೊಚ್ಚಲ ಪ್ರಶಸ್ತಿಗಾಗಿ ಕಾದಾಡಲಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಅಹಮದಾಬಾದ್[ಅ.19]: ಪ್ರೊ ಕಬಡ್ಡಿ 7ನೇ ಆವೃತ್ತಿಗೆ ಶನಿವಾರ ತೆರೆ ಬೀಳಲಿದೆ. 3 ತಿಂಗಳ ಸುದೀರ್ಘ ಪಂದ್ಯಾವಳಿಯ ಫೈನಲ್ ಪಂದ್ಯ ಇಲ್ಲಿನ ಟ್ರ್ಯಾನ್ಸ್ ಸ್ಟೇಡಿಯಾ ಅರೇನಾದಲ್ಲಿ ನಡೆಯಲಿದ್ದು, ಡಬಲ್ ರೌಂಡ್ ರಾಬಿನ್ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆದಿದ್ದ ದಬಾಂಗ್ ಡೆಲ್ಲಿ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಯಾರೇ ಗೆದ್ದರೂ ಹೊಸ ಚಾಂಪಿಯನ್ನ ಉದಯವಾಗಲಿದೆ. ಕಾರಣ, ಎರಡೂ ತಂಡಗಳು ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದು, ಚೊಚ್ಚಲ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ.
ಪ್ರೊ ಕಬಡ್ಡಿ 2019: ಬೆಂಗಾಲ್ ವಾರಿಯರ್ಸ್’ಗೆ ಫೈನಲ್ ಟಿಕೆಟ್
ರೈಡರ್‌ಗಳೇ ಆಧಾರ!: ಡೆಲ್ಲಿ ಹಾಗೂ ಬೆಂಗಾಲ್ ಎರಡೂ ತಂಡಗಳಿಗೆ ರೈಡರ್‌ಗಳೇ ಆಧಾರವೆನಿಸಿದ್ದಾರೆ. ಟೂರ್ನಿಯಲ್ಲಿ ಆಡಿರುವ 23 ಪಂದ್ಯಗಳಿಂದ ಡೆಲ್ಲಿ ರೈಡರ್‌ಗಳು ಒಟ್ಟು 505 ಅಂಕ ಕಲೆಹಾಕಿದರೆ, ಬೆಂಗಾಲ್ ರೈಡರ್‌ಗಳಿಂದ 491 ಅಂಕಗಳು ದಾಖಲಾಗಿವೆ. ಡೆಲ್ಲಿ ತಂಡ ತನ್ನ ತಾರಾ ರೈಡರ್ ನವೀನ್ ಕುಮಾರ್ ಮೇಲೆ ಅವಲಂಬಿತಗೊಂಡಿದ್ದರೆ, ಬೆಂಗಾಲ್ ಮಣೀಂದರ್ ಸಿಂಗ್‌ರನ್ನು ನೆಚ್ಚಿಕೊಂಡಿದೆ.
ಸೆಮಿಫೈನಲ್ನಲ್ಲಿ ಆಡದ ಮಣೀಂದರ್, ಫೈನಲ್ ಪಂದ್ಯಕ್ಕೆ ಪೂರ್ಣ ಫಿಟ್ ಆಗಿದ್ದಾರಾ ಎನ್ನುವ ಬಗ್ಗೆ ಅನುಮಾನವಿದೆ. ಎರಡೂ ತಂಡಗಳಿಗೆ ದ್ವಿತೀಯ ಹಾಗೂ ತೃತೀಯ ರೈಡರ್‌ಗಳ ಬಲವಿದೆ. ಡೆಲ್ಲಿ ಪರ ಚಂದ್ರನ್ ರಂಜಿತ್ ಹಾಗೂ ವಿಜಯ್ ಉತ್ತಮ ಪ್ರದರ್ಶನ ತೋರಿದ್ದಾರೆ. ಬೆಂಗಾಲ್‌ಗೆ ಸುಕೇಶ್ ಹೆಗ್ಡೆ ಹಾಗೂ ಪ್ರಪಂಜನ್ ಆಸರೆಯಾಗಿದ್ದಾರೆ. ಇರಾನ್‌ನ ಆಲ್ರೌಂಡರ್ ಮೊಹಮದ್ ನಬೀಬಕ್ಷ್ ಸಹ ರೈಡಿಂಗ್‌ನಲ್ಲಿ ಯಶಸ್ಸು ಕಂಡಿದ್ದಾರೆ.
ಪ್ರೊ ಕಬಡ್ಡಿ 2019: ಬುಲ್ಸ್ ಕನಸು ಭಗ್ನ; ಫೈನಲ್’ಗೆ ದಬಾಂಗ್ ಡೆಲ್ಲಿ
ಡಿಫೆಂಡರ್‌ಗಳದ್ದೇ ಚಿಂತೆ!: ಡೆಲ್ಲಿ ಹಾಗೂ ಬೆಂಗಾಲ್ ತಂಡಗಳ ರಕ್ಷಣಾ ಪಡೆ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲವಾಗಿವೆ. ಆದರೆ ಸೆಮೀಸ್‌ನಲ್ಲಿ ತಮ್ಮ ತಂಡಗಳು ಗೆಲ್ಲಲು ಡಿಫೆಂಡರ್‌ಗಳು ದೊಡ್ಡ ಮಟ್ಟದಲ್ಲಿ ನೆರವಾಗಿದ್ದರು. ಟೂರ್ನಿಯಲ್ಲಿ ಆಡಿರುವ 23 ಪಂದ್ಯಗಳಿಂದ ಎರಡೂ ತಂಡಗಳ ಡಿಫೆಂಡರ್‌ಗಳು ತಲಾ 219 ಟ್ಯಾಕಲ್ ಅಂಕಗಳನ್ನು ಕಲೆಹಾಕಿದ್ದಾರೆ. ಒಟ್ಟಾರೆ ಟ್ಯಾಕಲ್ ಅಂಕಗಳ ಪಟ್ಟಿಯಲ್ಲಿ ಡೆಲ್ಲಿ 10ನೇ ಸ್ಥಾನದಲ್ಲಿದ್ದರೆ, ಬೆಂಗಾಲ್ 11ನೇ ಸ್ಥಾನದಲ್ಲಿದೆ.
ಫೈನಲ್ ಹಾದಿ
ದಬಾಂಗ್ ಡೆಲ್ಲಿ
ಲೀಗ್ ಹಂತದಲ್ಲಿ 22 ಪಂದ್ಯ, 15 ಗೆಲುವು, 4 ಸೋಲು, 3 ಟೈ, 85 ಅಂಕ
ಸೆಮಿಫೈನಲ್ನಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ 44-38ರ ಜಯ
ಬೆಂಗಾಲ್ ವಾರಿಯರ್ಸ್
ಲೀಗ್ ಹಂತದಲ್ಲಿ 22 ಪಂದ್ಯ, 14 ಗೆಲುವು, 5 ಸೋಲು, 3 ಟೈ, 83 ಅಂಕ
ಸೆಮಿಫೈನಲ್ನಲ್ಲಿ ಯು ಮುಂಬಾ ವಿರುದ್ಧ 37-35ರ ಜಯ
3 ಕೋಟಿ ರುಪಾಯಿ ಬಹುಮಾನ
ಚಾಂಪಿಯನ್ ಆಗುವ ತಂಡಕ್ಕೆ 3 ಕೋಟಿ ರುಪಾಯಿ ಬಹುಮಾನ ಮೊತ್ತ ಸಿಗಲಿದ್ದು, ರನ್ನರ್-ಅಪ್ ಆಗುವ ತಂಡ 1.8 ಕೋಟಿ ರುಪಾಯಿ ಬಹುಮಾನ ಮೊತ್ತ ಪಡೆದುಕೊಳ್ಳಲಿದೆ.
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1