ಪ್ರೊ ಕಬಡ್ಡಿ 2019: ಬೆಂಗಾಲ್ ವಾರಿಯರ್ಸ್’ಗೆ ಫೈನಲ್ ಟಿಕೆಟ್
7ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಯು ಮುಂಬಾ ತಂಡವನ್ನು ಮಣಿಸಿದ ಬೆಂಗಾಲ್ ವಾರಿಯರ್ಸ್ ಫೈನಲ್ ಪ್ರವೇಶಿಸಿದೆ. ಇದೀಗ ಬೆಂಗಾಲ್ ವಾರಿಯರ್ಸ್ ಹಾಗೂ ದಬಾಂಗ್ ಡೆಲ್ಲಿ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಅಹಮದಾಬಾದ್[ಅ.16]: ಸಾಕಷ್ಟು ರೋಚಕತೆಯಿಂದ ಕೂಡಿದ್ದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಯು ಮುಂಬಾ ತಂಡವನ್ನು ಕೇವಲ 2 ಅಂಕಗಳಿಂದ ಮಣಿಸಿದ ಬೆಂಗಾಲ್ ವಾರಿಯರ್ಸ್ ಫೈನಲ್ ಪ್ರವೇಶಿಸಿದೆ. ಏಳನೇ ಆವೃತ್ತಿಯ ಫೈನಲ್’ನಲ್ಲಿ ಪ್ರಶಸ್ತಿಗಾಗಿ ದಬಾಂಗ್ ಡೆಲ್ಲಿ ಹಾಗೂ ಬೆಂಗಾಲ್ ವಾರಿಯರ್ಸ್ ಕಾದಾಡಲಿವೆ.
ಅಭಿಷೇಕ್ ಮುಂಬಾಗೆ ಮೊದಲ ಅಂಕ ತಂದಿತ್ತರು. ನಭೀಭಕ್ಷ್ ಬೆಂಗಾಲ್’ಗೆ ಬೋನಸ್ ಮೂಲಕ ಅಂಕಗಳ ಖಾತೆ ತೆರೆದರು. ಉಭಯ ತಂಡಗಳು ನಾಲ್ಕನೇ ನಿಮಿಷದಲ್ಲಿ 3-3, 6ನೇ ನಿಮಿಷದಲ್ಲಿ 6-6, 11ನೇ ನಿಮಿಷದಲ್ಲಿ 9-9 ಅಂಕಗಳ ಸಮಬಲ ಸಾಧಿಸಿದ್ದವು. ಪಂದ್ಯದ 14ನೇ ನಿಮಿಷದಲ್ಲಿ ಮುಂಬಾ ತಂಡವನ್ನು ಆಲೌಟ್ ಮಾಡುವ ಮೂಲಕ ಬೆಂಗಾಲ್ 14-10 ಅಂಕಗಳ ಮುನ್ನಡೆ ಗಳಿಸಿಕೊಂಡಿತು. ಇದೇ ಮುನ್ನಡೆ ಕಾಯ್ದುಕೊಂಡ ಬೆಂಗಾಲ್ ಮೊದಲಾರ್ಧ ಮುಕ್ತಾಯದ ವೇಳೆಗೆ 18-12 ಅಂಕಗಳೊಂದಿಗೆ ಮುನ್ನಡೆದಿತ್ತು.
ಪ್ರೊ ಕಬಡ್ಡಿ 2019: ಬುಲ್ಸ್ ಕನಸು ಭಗ್ನ; ಫೈನಲ್’ಗೆ ದಬಾಂಗ್ ಡೆಲ್ಲಿ
ಇನ್ನು ದ್ವಿತಿಯಾರ್ಧದಲ್ಲೂ ಬೆಂಗಾಲ್ ತಮ್ಮ ಹಿಡಿತ ಸಡಿಲಿಸಲಿಲ್ಲ. ಸುಕೇಶ್ ಹೆಗ್ಡೆ ದ್ವಿತಿಯಾರ್ಧದ 06ನೇ ನಿಮಿಷದಲ್ಲಿ 4 ಅಂಕಗಳ ಸೂಪರ್ ರೈಡ್ ಮಾಡುವ ಮೂಲಕ ಬೆಂಗಾಲ್ ಅಂತರವನ್ನು 25-16ಕ್ಕೆ ಹೆಚ್ಚಿಸಿದರು. ಇದರ ಬೆನ್ನಲ್ಲೇ ಉತ್ತರಾರ್ಧದ 10ನೇ ನಿಮಿಷದಲ್ಲಿ ಮತ್ತೊಮ್ಮೆ ಮುಂಬಾ ಪಡೆಯನ್ನು ಆಲೌಟ್ ಮಾಡುವಲ್ಲಿ ಬೆಂಗಾಲ್ ತಂಡ ಯಶಸ್ವಿಯಾಯಿತು. ಇದರ ಜತೆಗೆ 30-20 ಅಂಕಗಳೊಂದಿಗೆ ಬೆಂಗಾಲ್ 10 ಅಂಕಗಳಿಂದ ಮುಂದಿತ್ತು. ಆದರೆ ಕೊನೆಯ 5 ನಿಮಿಷಗಳಿದ್ದಾಗ ಯು ಮುಂಬಾದ ರೈಡರ್ ಅಜಿಂಕ್ಯ ಕಾಪ್ರೆ ಸೂಪರ್ ರೈಡ್ ಮೂಲಕ ಅಂಕಗಳಿಸಿ ಪಂದ್ಯಕ್ಕೆ ರೋಚಕತೆ ತಂದಿತ್ತರು. ಕೊನೆಯ 4 ನಿಮಿಷವಿದ್ದಾಗ ಬೆಂಗಾಲ್ ತಂಡವನ್ನು ಆಲೌಟ್ ಮಾಡುವುದರೊಂದಿಗೆ ಮುಂಬಾ [35-33] ಅಂಕಗಳ ಅಂತರವನ್ನು ಕಡಿಮೆ ಮಾಡಿಕೊಂಡಿತು. ಕೊನೆಯ 2 ನಿಮಿಷಗಳಿದ್ದಾಗ 35-35 ಅಂಕಗಳ ಸಮಬಲ ಸಾಧಿಸಿತು. ನಂತರ ಜೀವಾ ಕುಮಾರ್ ಮಾಡಿದ ಡ್ಯಾಷ್ ನಿಂದ ಬೆಂಗಾಲ್ 36-35 ಮುನ್ನಡೆ ಗಳಿಸಿತು. ಆ ಬಳಿಕ ಮುಂಬಾಗೆ ಅಂಕ ಗಳಿಸಲು ಅವಕಾಶ ನೀಡಲಿಲ್ಲ. ಕೊನೆಯ ರೇಡ್’ನಲ್ಲಿ ಬಲದೇವ್ ಸಿಂಗ್’ರನ್ನು ಟ್ಯಾಕಲ್ ಮಾಡುವುದರೊಂದಿಗೆ ಫೈನಲ್’ಗೆ ಲಗ್ಗೆಯಿಟ್ಟಿತು.
ಬೆಂಗಾಲ್ ವಾರಿಯರ್ಸ್ ಪರ ಸುಕೇಶ್ ಹೆಗ್ಡೆ 8 ಅಂಕ ಪಡೆದರೆ, ನಬೀಭಕ್ಷ್ 5, ಪ್ರಪಂಜನ್ 4, ರಿಂಕು ನರ್ವಾಲ್ 4 ಹಾಗೂ ಜೀವಾ ಕುಮಾರ್ 3 ಅಂಕ ಪಡೆದರು. ಇನ್ನು ಯು ಮುಂಬಾ ಪರ ಅಭಿಷೇಕ್ ಸಿಂಗ್ 11 ಅಂಕ ಗಳಿಸಿದರೆ, ಸಂದೀಪ್ ನರ್ವಾಲ್ ಹಾಗೂ ಅಜಿಂಕ್ಯ ಕಾಪ್ರೆ 5, ಅರ್ಜುನ್ ದೇಶ್ವಾಲ್ ಮತ್ತು ಸುರೀಂದರ್ ಸಿಂಗ್ ತಲಾ 4 ಅಂಕ ಗಳಿಸಿದರು.