ಅಹಮದಾಬಾದ್[ಅ.16]: ಪವನ್ ಕುಮಾರ್ ಶೆರಾವತ್ ಮಿಂಚಿನ ದಾಳಿಯ ಹೊರತಾಗಿಯೂ ನವಿನ್ ಕುಮಾರ್ ಆಕರ್ಷಕ ಪ್ರದರ್ಶನದ ನೆರವಿನಿಂದ ದಬಾಂಗ್ ಡೆಲ್ಲಿ 44-38ರಿಂದ ಹಾಲಿ ಚಾಂಪಿಯನ್ ಬೆಂಗಳೂರು ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಪ್ರೊ ಕಬಡ್ಡಿ ಫೈನಲ್ ಪ್ರವೇಶಿಸಿದೆ.

ಜ್ಯಾಕ್ ಕಾಲಿಸ್’ಗೆ ಶುಭಕೋರಲು ಹೋಗಿ ಎಡವಟ್ಟು ಮಾಡಿಕೊಂಡ KP..!

ಇಲ್ಲಿನ ಟ್ರಾನ್ಸ್ ಸ್ಟೇಡಿಯಾ ಅರೇನಾ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಡೆಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಹೀಗಾಗಿ ಮೊದಲಾರ್ಧದ ಮೂರುವರೆ ನಿಮಿಷದಲ್ಲೇ ಬುಲ್ಸ್ ಪಡೆಯನ್ನು ಆಲೌಟ್ ಮಾಡಿ 9-3 ಅಂಕ ಹೆಚ್ಚಿಸಿಕೊಂಡಿತು. ಮಿಂಚಿನ ದಾಳಿ ನಡೆಸುವ ಮೂಲಕ ನವೀನ್ ಕುಮಾರ್ ಬೆಂಗಳೂರು ಪಾಳಯದಲ್ಲಿ ನಡುಕ ಹುಟ್ಟಿಸಿದರು. ಆದರೆ ಇದರ ಬೆನ್ನಲ್ಲೇ ಪವನ್ ಸೂಪರ್ ರೈಡ್ ನಡೆಸುವ ಮೂಲಕ ಅಂತರವನ್ನು 11-7ಕ್ಕೆ ತಗ್ಗಿಸಿದರು. ಇನ್ನು ಡಿಫೆಂಡಿಂಗ್’ನಲ್ಲೂ ಡೆಲ್ಲಿ ಸಂಘಟಿತ ಪ್ರದರ್ಶನ ತೋರಿತು. ಹೀಗಾಗಿ ಹನ್ನೊಂದನೇ ನಿಮಿಷದಲ್ಲಿ ಬುಲ್ಸ್ ಎರಡನೇ ಬಾರಿ ಆಲೌಟ್’ಗೆ ಗುರಿಯಾಯಿತು. ಇದರೊಂದಿಗೆ ಡೆಲ್ಲಿ 21-10 ಅಂಕಗಳ ಮುನ್ನಡೆ ಸಾಧಿಸಿತು. ಮೊದಲಾರ್ಧದ ಅಂತ್ಯದ ವೇಳಗೆ ದಬಾಂಗ್ ಡೆಲ್ಲಿ 26-18 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿತು.

ಇನ್ನು ಮೊದಲಾರ್ಧದ ಹಿನ್ನಡೆ ಮೆಟ್ಟಿ ನಿಲ್ಲಲು ಬುಲ್ಸ್ ಪಡೆ ಪ್ರಯತ್ನಿಸಿತಾದರೂ ನಿರೀಕ್ಷಿತ ಯಶಸ್ಸು ದಕ್ಕಲಿಲ್ಲ. ನವೀನ್’ರನ್ನು ಬುಲ್ಸ್ ಪಡೆ ಸೂಪರ್ ಟ್ಯಾಕಲ್ ಮಾಡಿತಾದರೂ, ರೇಡಿಂಗ್’ನಲ್ಲಿ ಯಶಸ್ವಿಯಾಗಲಿಲ್ಲ. ಇದರ ಬೆನ್ನಲ್ಲೇ ಕೊನೆಯ 4 ನಿಮಿಷವಿದ್ದಾಗ ಬುಲ್ಸ್ ಪಡೆ ಮತ್ತೊಮ್ಮೆ ಆಲೌಟ್ ಆಯಿತು. ಕೊನೆಯಲ್ಲಿ ಪವನ್ ಕೆಲ ಅಂಕಗಳನ್ನು ಗಳಿಸಿದರಾದರೂ ಅಷ್ಟರಲ್ಲಾಗಲೇ ಪಂದ್ಯ ಕೈತಪ್ಪಿ ಹೋಗಿತ್ತು. 

ದಬಾಂಗ್ ಡೆಲ್ಲಿ ಪರ ನವೀನ್ ಕುಮಾರ್ 15 ಅಂಕ ಪಡೆದರೆ, ಚಂದ್ರನ್ ರಂಜಿತ್ 9 ಅಂಕ ಪಡೆದರು. ಇನ್ನು ಬುಲ್ಸ್ ಪರ ಪವನ್ ಶೆರಾವತ್ 18 ಅಂಕ ಗಳಿಸಿದರೆ, ಸುಮಿತ್ ಸಿಂಗ್ 6 ಹಾಗೂ ರೋಹಿತ್ ಕುಮಾರ್ 5 ಅಂಕ ಪಡೆದರು. 
ಇದೀಗ ದಬಾಂಗ್ ಡೆಲ್ಲಿ ತಂಡವು ಅಕ್ಟೋಬರ್ 19ರಂದು ನಡೆಯಲಿರುವ ಫೈನಲ್’ನಲ್ಲಿ ಬೆಂಗಾಲ್ ವಾರಿಯರ್ಸ್ ಇಲ್ಲವೇ ಯು ಮುಂಬಾ ತಂಡವನ್ನು ಎದುರಿಸಲಿದೆ.