ಮೆಲ್ಬೋರ್ನ್(ಫೆ.02): ಸರ್ಬಿಯಾ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಚ್ ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್ ಟೆನಿಸ್ ಗ್ರ್ಯಾಂಡ್ ಸ್ಲಾಂ ಟೂರ್ನಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫೈನಲ್ ಪಂದ್ಯದಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ವಿರುದ್ಧ 6-4, 4-6, 2-6, 6-3, 6-4 ಅಂತರದಲ್ಲಿ ಗೆಲುವು ಸಾಧಿಸಿದ ಜೊಕೊವಿಚ್ 8ನೇ ಬಾರಿಗೆ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

 

ಇದನ್ನೂ ಓದಿ: ಆಸ್ಟ್ರೇಲಿಯನ್ ಓಪನ್: ಮುಗ್ಗರಿಸಿದ ಮುಗುರುಜಾ, ಕೆನಿನ್‌ ಮುಡಿಗೆ ಚಾಂಪಿಯನ್ ಗರಿ

ಸತತ 4 ಗಂಟೆಗಳ ಹೋರಾಟದಲ್ಲಿ ಜೊಕೊವಿಚ್ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ 17ನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಇಷ್ಟೇ ಅಲ್ಲ 8 ಅಥವಾ ಅದಕ್ಕಿಂತ ಹೆಚ್ಚು ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದ 3ನೇ ಟೆನಿಸ್ ಪಟು ಅನ್ನೋ ಹೆಗ್ಗಳಿಕೆಗೂ ಜೊಕೊವಿಚ್ ಪಾತ್ರರಾಗಿದ್ದಾರೆ.

 

ಇದನ್ನೂ ಓದಿ: ಫೆ.10ರಿಂದ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿ.

ಗರಿಷ್ಠ ಗ್ರ್ಯಾಂಡ್ ಸ್ಲಾಂ ಸಾಧಕರು
ರೋಡರ್ ಫೆಡರರ್ (20)
ರಾಫೆಲ್ ನಡಾಲ್(19)
ನೋವಾಕ್ ಜೋಕೊವಿಚ್(17)
ಪೀಟ್ ಸ್ಯಾಂಪ್ರಾಸ್(14)
ರೊಯ್ ಎಮರ್ಸನ್(12)

ಒಂದೇ ಟೂರ್ನಿಯಲ್ಲಿ 8 + ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಸಾಧಕರು
ರಾಫೆಲ್ ನಡಾಲ್( 12 ಫ್ರೆಂಚ್ ಓಪನ್)
ರೋಜರ್ ಫೆಡರರ್(8 ವಿಂಬಲ್ಡನ್)
ನೋವಾಕ್ ಜೊಕೊವಿಚ್(9 ಆಸ್ಟ್ರೇಲಿಯಾ ಓಪನ್)

ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದ ನೋವಾಕ್ ಜೊಕೋವಿಚ್ ಸೋಮವಾರ(ಫೆ.03) ಬಿಡುಗಡೆಯಾಗಲಿರುವ ಟೆನಿಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿಯಲಿದ್ದಾರೆ. ಇನ್ನು ರಾಫೆಲ್ ನಡಾಲ್ 2, ಫೆಡರರ್ 3 ಹಾಗೂ ಡೊಮಿನಿಕ್ ಥೀಮ್ 4ನೇ ಸ್ಥಾನಕ್ಕೆ ಲಗ್ಗೆ ಇಡಲಿದ್ದಾರೆ. ಫೈನಲ್ ಪಂದ್ಯಕ್ಕೂ ಮುನ್ನ ಡೊಮಿನಿಕ್ ಥೀಮ್ 5ನೇ ಸ್ಥಾನದಲ್ಲಿದ್ದರು.

ಸೆಮಿಫೈನಲ್ ಪಂದ್ಯದಲ್ಲಿ ನೋವಾಕ್ ಜೋಕೊವಿಚ್, 20 ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ವಿಜೇತ ರೋಜರ್ ಫೆಡರರ್ ವಿರುದ್ಧ ಗೆಲುವು ಸಾಧಿಸಿ,ಫೈನಲ್ ಪ್ರವೇಶಿಸಿದ್ದರು. ತೀವ್ರ ಪೈಪೋಟಿಯಿಂದ ಕೂಡಿದ ಫೈನಲ್ ಪಂದ್ಯದಲ್ಲಿ ಜೋಕೊವಿಚ್‌ಗೆ, ಥೀಮ್  ಅವರ ಪ್ರಬಲ ಸರ್ವೀಸ್ ಕಂಟಕವಾಗಿ ಪರಿಣಮಿಸಿತ್ತು. ಆದರೆ ಅಷ್ಟೇ ವೇಗವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ನೋವಾಕ್ ಜೋಕೊವಿಚ್ ಸುದೀರ್ಘ ಹೋರಾಟದಲ್ಲಿ ಪ್ರಶಸ್ತಿ ಗೆದ್ದುಕೊಂಡರು.