Lakshya Sen ರನ್ನರ್ ಅಪ್ ಆಗಿದ್ದಕ್ಕೆ ಬೇಸರವಿಲ್ಲ, ಫಲಿತಾಂಶದ ಬಗ್ಗೆ ತೃಪ್ತಿ ಇದೆ
ನನ್ನ ಸಾಧನೆ ಬಗ್ಗೆ ಖುಷಿ ಇದೆ
ವಿಶ್ವದ ಪ್ರಮುಖ ಆಟಗಾರರನ್ನು ಸೋಲಿಸಿದ್ದು ಆತ್ಮವಿಶ್ವಾಸ ನೀಡಿದೆ
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಷಪ್ ರನ್ನರ್ ಅಪ್ ಲಕ್ಷ್ಯ ಸೆನ್ ಹೇಳಿಕೆ
ಬೆಂಗಳೂರು (ಮಾ.22): ನನ್ನ ಸಾಧನೆ ಬಗ್ಗೆ ನಿಜಕ್ಕೂ ಖುಷಿ ಇದೆ. ಕಳೆದ ಆರು ತಿಂಗಳಲ್ಲಿ ಹಲವು ಪ್ರಮುಖ ಟೂರ್ನಿಗಳಲ್ಲಿ ಆಡಿ ತುಂಬಾ ಕಲಿತಿದ್ದೇನೆ. ವಿಶ್ವದ ಪ್ರಮುಖ ಆಟಗಾರರನ್ನು ಸೋಲಿಸಿದ್ದು ಆತ್ಮವಿಶ್ವಾಸ ಹೆಚ್ಚಿಸಿದೆ. ಮೊದಲಿಗಿಂತ ಹೆಚ್ಚಿನ ಆತ್ಮವಿಶ್ವಾಸ ಈಗ ಇದೆ. ಮುಂಬರುವ ಟೂರ್ನಿಗಳಲ್ಲಿ ಆಡಲು ಇದು ಸಹಕಾರಿಯಾಗಲಿದೆ ಎಂದು ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ (All England Badminton Championship) ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದ ಭಾರತದ ಲಕ್ಷ್ಯ ಸೆನ್ (Lakshya Sen ) ಹೇಳಿದ್ದಾರೆ.
ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಲಕ್ಷ್ಯ ಸೆನ್, ಮಂಗಳವಾರ ಬೆಂಗಳೂರಿಗೆ ವಾಪಾಸ್ ಆಗಮಿಸಿದ್ದಾರೆ. ಫೈನಲ್‌ನಲ್ಲಿ ವಿಶ್ವದ ನಂ.1 ಷಟ್ಲರ್, ಡೆನ್ಮಾರ್ಕ್ನ ವಿಕ್ಟರ್ ಆಕ್ಸೆಲ್ಸೆನ್ (Victor Axelson) ವಿರುದ್ಧ 10-21, 11-21 ನೇರ ಗೇಮ್ಗಳಿಂದ ಪರಾಭವಗೊಂಡಿದ್ದರು.
ಕೋವಿಡ್ (Covid-19) ಸಮಯದಲ್ಲೂ ಅಭ್ಯಾಸಕ್ಕೆ ಉತ್ತಮ ಸಮಯ ಸಿಕ್ಕಿತು. ನನ್ನ ಆಟ, ಫಿಟ್ನೆಸ್ ಸುಧಾರಣೆ ಹಿಂದೆ ಪೋಷಕರು, ಅಕಾಡೆಮಿಯ ಪಾತ್ರ ದೊಡ್ಡದು. ಅಗ್ರ ಆಟಗಾರರ ಆಟವನ್ನು ಟಿವಿಯಲ್ಲಿ ನೋಡುತ್ತಿದ್ದೆ. ಅದರಿಂದ ಅವರ ತಂತ್ರಗಳ ಬಗ್ಗೆ ಕಲಿಯುತ್ತಿದ್ದೆ ಎಂದು ಪಡುಕೋಣೆ ದ್ರಾವಿಡ್ ಸ್ಟೋರ್ಟ್ಸ್ ಸೆಂಟರ್ನಲ್ಲಿ (Padukone Dravid Centre for Sports Excellence) ನಡೆದ ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಯ ಸೆನ್ ಹೇಳಿಕೊಂಡಿದ್ದಾರೆ.
ಮುಂದೆ ಕೊರಿಯಾ ಓಪನ್, ಥಾಮಸ್ ಕಪ್, ಥಾಯ್ಲೆಂಡ್ ಓಪನ್‌ನಲ್ಲೂ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ. ಸತತ ಎರಡು ವಾರಗಳ ಕಾಲ ಆಡಿ ದಣಿದಿದ್ದೇನೆ. ದೇಹ ಸುಸ್ತಾಗಿದೆ. ಹೀಗಾಗಿ ಸ್ವಿಸ್ ಓಪನ್‌ನಲ್ಲಿ ಆಡುತ್ತಿಲ್ಲ. ಮುಂದೆ ದೊಡ್ಡ ದೊಡ್ಡ ಟೂರ್ನಿಗಳಲ್ಲಿ ಆಡಬೇಕಿದೆ. ಅಲ್ಲಿಯೂ ಪದಕ ಗೆಲ್ಲುವ ಗುರಿ ಹೊಂದಿದ್ದೇನೆ ಎಂದು ಬೆಂಗಳೂರಿನಲ್ಲಿರುವ ಪಡುಕೋಣೆ ದ್ರಾವಿಡ್ ಸ್ಟೋರ್ಟ್ಸ್ ಸೆಂಟರ್ನಲ್ಲಿ ಅಭ್ಯಾಸ ನಡೆಸಿದ್ದ ಸೆನ್ ಹೇಳಿದ್ದಾರೆ.
ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಗುಳಿದ ಲಕ್ಷ್ಯ ಸೆನ್
20 ವರ್ಷದ ಅಲ್ಮೋರ ಮೂಲದ ಶಟ್ಲರ್ ಲಕ್ಷ್ಯ ಸೆನ್ ಕಳೆದ ಎರಡು ವಾರಗಳಲ್ಲಿ ಜರ್ಮನ್ ಓಪನ್ ಹಾಗೂ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರಿದ ಸಾಧನೆ ಮಾಡಿದ್ದರು. ಇದರ ಬೆನ್ನಲ್ಲೇ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ತಾವು ಸಾಕಷ್ಟು ದಣಿದಿರುವುದಾಗಿ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಗೆ ತಿಳಿಸಿದ್ದಾರೆ. ಹೀಗಾಗಿ ಅವರು ಬೆಂಗಳೂರಿಗೆ ವಾಪಾಸ್ಸಾಗಲಿದ್ದಾರೆ. 7 ರಿಂದ 10 ದಿನಗಳ ವಿಶ್ರಾಂತಿಯ ಬಳಿಕ ಅವರು ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾಲ್ಗೊಳ್ಳಿದ್ದಾರೆ ಎಂದು ಲಕ್ಷ್ಯ ಸೆನ್ ಮೆಂಟರ್ ವಿಮಲ್ ಕುಮಾರ್ ಹೇಳಿದ್ದಾರೆ. ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಲಕ್ಷ್ಯ ಸೆನ್ ಮೊದಲ ಪಂದ್ಯದಲ್ಲೇ ಭಾರತೀಯ ಸಹ ಆಟಗಾರ ಸಮೀರ್ ವರ್ಮಾ ವಿರುದ್ದ ಸೆಣಸಲಿದ್ದಾರೆ.
ಲಕ್ಷ್ಯ ಸೆನ್ ಸಾಧನೆಗೆ ಅಭಿನಂದನೆಗಳ ಸುರಿಮಳೆ, ಪ್ರಧಾನಿ ಮೋದಿಯಿಂದ ಶ್ಲಾಘನೆ
1980ರಲ್ಲಿ ಪ್ರಕಾಶ್ ಪಡುಕೋಣೆ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಎನ್ನುವ ದಾಖಲೆ ಬರೆದಿದ್ದರು. ಆ ಬಳಿಕ 2001ರಲ್ಲಿ ಪುಲ್ಲೇಲಾ ಗೋಪಿಚಂದ್ ಪ್ರತಿಷ್ಠಿತ ಪ್ರಶಸ್ತಿ ಜಯಿಸಿದ 2ನೇ ಭಾರತೀಯ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಆ ಬಳಿಕ ಭಾರತದ ಯಾವ ಶಟ್ಲರ್‌ರಿಂದಲೂ ಈ ಸಾಧನೆ ಮಾಡಲು ಆಗಿಲ್ಲ. 2015ರಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೈನಾ ನೆಹ್ವಾಲ್ ಸಹ ಫೈನಲ್‌ನಲ್ಲಿ ಎಡವಿದ್ದರು. ಮುಂಬರುವ ದಿನಗಳಲ್ಲಿ ಭಾರತೀಯ ಶಟ್ಲರ್‌ಗಳಿಗೆ ಸತತವಾದ ಟೂರ್ನಿಗಳು ಎದುರಿಗಿವೆ. ಈ ಪೈಕಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್‌ಗಳು ಸೇರಿದಂತೆ ಹಲವು ಟೂರ್ನಿಗಳಲ್ಲಿ ಭಾರತದ ಬ್ಯಾಡ್ಮಿಂಟನ್ ಪಟುಗಳು ಪಾಲ್ಗೊಳ್ಳಲಿವೆ.