ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಗುಳಿದ ಲಕ್ಷ್ಯ ಸೆನ್
* ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿದ ಲಕ್ಷ್ಯ ಸೆನ್
* ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದ 20 ವರ್ಷದ ಶಟ್ಲರ್
* ಬೆಂಗಳೂರಿನಲ್ಲಿ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲಿರುವ ತಾರಾ ಆಟಗಾರ
ನವದೆಹಲಿ(ಮಾ.21): ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ (All England Badminton Tournament) ಫೈನಲ್ ಪ್ರವೇಶಿಸಿ, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ ಲಕ್ಷ್ಯ ಸೆನ್ (Lakshya Sen), ಸ್ವಿಸ್ ಓಪನ್ (Swiss Open) ಸೂಪರ್ 300 ಟೂರ್ನಮೆಂಟ್‌ನಿಂದ ಹೊರಗುಳಿಯಲು ತೀರ್ಮಾನಿಸಿದ್ದಾರೆ. ಬಿಡುವಿರದ ಬ್ಯಾಡ್ಮಿಂಟನ್ (Badminton) ಟೂರ್ನಿಯಲ್ಲಿ ಪಾಲ್ಗೊಂಡಿದ್ದ 20 ವರ್ಷದ ಲಕ್ಷ್ಯ ಸೆನ್ ಇದೀಗ ಕೆಲ ಕಾಲ ಬ್ಯಾಡ್ಮಿಂಟನ್‌ನಿಂದ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ.
20 ವರ್ಷದ ಅಲ್ಮೋರ ಮೂಲದ ಶಟ್ಲರ್ ಲಕ್ಷ್ಯ ಸೆನ್ ಕಳೆದ ಎರಡು ವಾರಗಳಲ್ಲಿ ಜರ್ಮನ್ ಓಪನ್ ಹಾಗೂ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರಿದ ಸಾಧನೆ ಮಾಡಿದ್ದರು. ಅವರು ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ತಾವು ಸಾಕಷ್ಟು ದಣಿದಿರುವುದಾಗಿ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಗೆ ತಿಳಿಸಿದ್ದಾರೆ. ಹೀಗಾಗಿ ಅವರು ಬೆಂಗಳೂರಿಗೆ ವಾಪಾಸ್ಸಾಗಲಿದ್ದಾರೆ. 7 ರಿಂದ 10 ದಿನಗಳ ವಿಶ್ರಾಂತಿಯ ಬಳಿಕ ಅವರು ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾಲ್ಗೊಳ್ಳಿದ್ದಾರೆ ಎಂದು ಲಕ್ಷ್ಯ ಸೆನ್ ಮೆಂಟರ್ ವಿಮಲ್ ಕುಮಾರ್ ಹೇಳಿದ್ದಾರೆ. ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಲಕ್ಷ್ಯ ಸೆನ್ ಮೊದಲ ಪಂದ್ಯದಲ್ಲೇ ಭಾರತೀಯ ಸಹ ಆಟಗಾರ ಸಮೀರ್ ವರ್ಮಾ ವಿರುದ್ದ ಸೆಣಸಲಿದ್ದಾರೆ.
ಬೆಂಗಳೂರಿನಲ್ಲಿರುವ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯ ಪ್ರತಿಭೆಯಾಗಿರುವ ಲಕ್ಷ್ಯ ಸೆನ್, ಕಳೆದ ಆರು ತಿಂಗಳಿನಿಂದ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಲಕ್ಷ್ಯ ಸೆನ್, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಇದಾದ ಬಳಿಕ ಜನವರಿಯಲ್ಲಿ ನಡೆದ ಇಂಡಿಯ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ವೃತ್ತಿಜೀವನದ ಮೊದಲ ಸೂಪರ್ 500 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಇದಾದ ಬಳಿಕ ಕಳೆದ ವಾರ ನಡೆದ ಜರ್ಮನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
All England Open 2022: ಫೈನಲ್‌ನಲ್ಲಿ ಚಿನ್ನ ಗೆಲ್ಲುವ ಲಕ್ಷ್ಯ ಸೆನ್ ಕನಸು ಭಗ್ನ..!
ಲಕ್ಷ್ಯ ಸೆನ್, ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಗುರುವಿನ ಹಾದಿಯಲ್ಲಿಯೇ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್‌ನಲ್ಲಿ ವಿಶ್ವದ ನಂ.1 ಶಟ್ಲರ್, ಡೆನ್ಮಾರ್ಕ್ನ ವಿಕ್ಟರ್ ಆಕ್ಸೆಲ್ಸೆನ್ ವಿರುದ್ಧ ರೋಚಕ ಸೋಲು ಕಾಣುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇತ್ತೀಚೆಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ವೃತ್ತಿಬದುಕಿನ ಶ್ರೇಷ್ಠ 11ನೇ ಸ್ಥಾನ ಪಡೆದ 20 ವರ್ಷದ ಲಕ್ಷ್ಯ, 10-21, 11-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ತೋರಿ, ಘಟಾನುಘಟಿಗಳನ್ನು ಸೋಲಿಸಿದ್ದ ಲಕ್ಷ್ಯ, ಕೆಲ ವಾರಗಳ ಹಿಂದಷ್ಟೇ ಜರ್ಮನ್ ಓಪನ್ ಟೂರ್ನಿಯಲ್ಲಿ ಆಕ್ಸೆಲ್ಸೆನ್ ವಿರುದ್ಧ ಜಯಿಸಿದ್ದರು. ಅವರಿಂದ ಮತ್ತೊಂದು ಭರ್ಜರಿ ಪ್ರದರ್ಶನ ನಿರೀಕ್ಷೆ ಮಾಡಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಯಿತು.
1980ರಲ್ಲಿ ಪ್ರಕಾಶ್ ಪಡುಕೋಣೆ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಎನ್ನುವ ದಾಖಲೆ ಬರೆದಿದ್ದರು. ಆ ಬಳಿಕ 2001ರಲ್ಲಿ ಪುಲ್ಲೇಲಾ ಗೋಪಿಚಂದ್ ಪ್ರತಿಷ್ಠಿತ ಪ್ರಶಸ್ತಿ ಜಯಿಸಿದ 2ನೇ ಭಾರತೀಯ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಆ ಬಳಿಕ ಭಾರತದ ಯಾವ ಶಟ್ಲರ್‌ರಿಂದಲೂ ಈ ಸಾಧನೆ ಮಾಡಲು ಆಗಿಲ್ಲ. 2015ರಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೈನಾ ನೆಹ್ವಾಲ್ ಸಹ ಫೈನಲ್‌ನಲ್ಲಿ ಎಡವಿದ್ದರು. ಮುಂಬರುವ ದಿನಗಳಲ್ಲಿ ಭಾರತೀಯ ಶಟ್ಲರ್‌ಗಳಿಗೆ ಸತತವಾದ ಟೂರ್ನಿಗಳು ಎದುರಿಗಿವೆ. ಈ ಪೈಕಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್‌ಗಳು ಸೇರಿದಂತೆ ಹಲವು ಟೂರ್ನಿಗಳಲ್ಲಿ ಭಾರತದ ಬ್ಯಾಡ್ಮಿಂಟನ್ ಪಟುಗಳು ಪಾಲ್ಗೊಳ್ಳಲಿವೆ.