ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಇಂದಿನಿಂದ ಕುಸ್ತಿ ಸ್ಪರ್ಧೆಗಳು ಆರಂಭವಾಗಲಿದ್ದು, ಭಾರತ ಪದಕ ಬೇಟೆಯಾಡುವ ವಿಶ್ವಾಸದಲ್ಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್ ಒಲಿಂಪಿಕ್ಸ್‌ನ ಕುಸ್ತಿ ಸ್ಪರ್ಧೆಗಳು ಸೋಮವಾರ ದಿಂದ ಆರಂಭಗೊಳ್ಳಲಿದ್ದು, ಭಾರತದ 6 ಮಂದಿ ಕಣಕ್ಕಿಳಿಯಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ 5 ಹಾಗೂ ಪುರುಷರ ವಿಭಾಗದಲ್ಲಿ ಒಬ್ಬ ಕುಸ್ತಿ ಸ್ಪರ್ಧಿಸಲಿದ್ದು, ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಇಂದು ನಿಶಾ ದಹಿಯಾ ಮೂಲಕ ಭಾರತದ ಕುಸ್ತಿಪಟುಗಳ ಅಗ್ನಿ ಪರೀಕ್ಷೆ ಆರಂಭವಾಗಲಿದೆ.

ವಿನೇಶ್ ಫೋಗಟ್ ಮೇಲೆ ಎಲ್ಲರ ಕಣ್ಣಿದ್ದು, ಕಳೆದ ವರ್ಷ ಪೂರ್ತಿ ಪ್ರತಿಭಟನೆ, ಹೋರಾಟದಲ್ಲೇ ಸಮಯ ಕಳೆದಿರುವ ಅವರು ಒಲಿಂಪಿಕ್ ಸ್ಪರ್ಧೆಗೆ ಎಷ್ಟರ ಮಟ್ಟಿಗೆ ಸಜ್ಜಾಗಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ವಿನೇಶ್ 50 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. 68 ಕೆ.ಜಿ. ವಿಭಾಗದಲ್ಲಿ ನಿಶಾ ದಹಿಯಾ, 53 ಕೆ.ಜಿ. ವಿಭಾಗದಲ್ಲಿ ಅಂತಿಮ್ ಪಂಘಲ್, 57 ಕೆ.ಜಿ. ವಿಭಾಗದಲ್ಲಿ ಅನ್ನು ಮಲಿಕ್, 76 ಕೆ.ಜಿ. ವಿಭಾಗದಲ್ಲಿ ರೀತಿಕಾ ಹೂಡಾ ಸ್ಪರ್ಧಿಸಲಿದ್ದಾರೆ. 

Paris Olympics 2024: ರೆಫ್ರಿಗಳ ವಿರುದ್ಧ ದೂರು ನೀಡಿದ ಹಾಕಿ ಇಂಡಿಯಾ..!

ಕಳೆದ ಬಾರಿ ಪುರುಷರ ಕುಸ್ತಿಯಲ್ಲೇ ಭಾರತಕ್ಕೆ 2 ಪದಕ ದೊರೆತಿತ್ತು. ಆದರೆ ಈ ಬಾರಿ ಕೇವಲ ಒಬ್ಬ ಸ್ಪರ್ಧಿ ಈ ಮಾತ್ರ ಇದ್ದಾರೆ. 57 ಕೆ.ಜಿ. ವಿಭಾಗದಲ್ಲಿ ಅಮನ್ ಶೆರಾವತ್‌ ಅದೃಷ್ಟ ಪರೀಕೆಗಿಳಿಯಲಿದ್ದಾರೆ.

ಅಥ್ಲೆಟಿಕ್ಸ್: ಫೈನಲ್‌ಗೇರಲು ಪಾರುಲ್, ಜೆಸ್ವಿನ್ ವಿಫಲ

ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ನೀರಸ ಪ್ರದರ್ಶನ ಮುಂದುವರಿದಿದೆ. ಭಾನುವಾರ ಮಹಿಳೆಯರ 3000 ಮೀ. ಸ್ಟೀಪಲ್ ಚೇಸ್‌ನಲ್ಲಿ ಪಾರುಲ್ ಚೌಧರಿ ಫೈನಲ್‌ಗೇರಲು ವಿಫಲರಾದರು. ಈ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ 29 ವರ್ಷದ ಪಾರುಲ್, ಭಾನುವಾರ ಹೀಟ್ಸ್‌ನಲ್ಲಿ 9 ನಿಮಿಷ 23.39 ಸೆಕೆಂಡ್‌ಗಳಲ್ಲಿ ಕ್ರಮಿಸಿ 8ನೇ ಸ್ಥಾನ ಪಡೆದರು. ಹೀಟ್ಸ್‌ನಲ್ಲಿ ಅಗ್ರ -5ರಲ್ಲಿ ಸ್ಥಾನ ಪಡೆದಿದ್ದರೆ ಫೈನಲ್‌ಗೇರಬಹುದಿತ್ತು.

ಪಾರುಲ್ 5000 ಮೀ. ಓಟದ ಸ್ಪರ್ಧೆಯಲ್ಲೂ ಫೈನಲ್‌ಗೇರಲು ವಿಫಲರಾಗಿದ್ದರು. ಇನ್ನು, ಪುರುಷರ ಲಾಂಗ್‌ಜಂಪ್‌ನಲ್ಲಿ ಜೆಸ್ವಿನ್ ಆಸ್ಟಿನ್ ಕೂಡಾ ಅರ್ಹತಾ ಸುತ್ತಿನಲ್ಲೇ ಅಭಿಯಾನ ಕೊನೆಗೊಳಿಸಿದರು. ಅವರು 7.61 ಮೀ. ದೂರಕ್ಕೆ ನೆಗೆದು 26ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಸೆಮೀಸ್‌ ಕದನ ಸೋತ ಲಕ್ಷ್ಯ ಸೇನ್‌ಗಿದೆ ಇಂದು ಕಂಚು ಗೆಲ್ಲುವ ಬೆಸ್ಟ್ ಚಾನ್ಸ್..!

ರಾಜ್ಯ ಅಥ್ಲೆಟಿಕ್ಸ್‌: ಆರ್‍ಯನ್‌, ಲೋಕೇಶ್‌ ಸ್ವರ್ಣ ಸಾಧನೆ

ಬೆಂಗಳೂರು: ಕರ್ನಾಟಕ ರಾಜ್ಯ ಪುರುಷ ಹಾಗೂ ಮಹಿಳೆಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಆರ್ಯನ್‌ ಮನೋಜ್‌, ಲೋಕೇಶ್‌ ರಾಥೋಡ್‌ ಚಿನ್ನದ ಪದಕ ಗೆದ್ದಿದ್ದಾರೆ. ಕೂಟದ ಕೊನೆ ದಿನವಾದ ಭಾನುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪುರುಷರ 100 ಮೀ. ಓಟದ ಸ್ಪರ್ಧೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಆರ್ಯನ್‌ 10.42 ಸೆಕೆಂಡ್‌ಗಳಲ್ಲಿ ಕ್ರಮಿಸಿ ಅಗ್ರಸ್ಥಾನ ಪಡೆದರು. ಗಗನ್‌ ಗೌಡ(10.50 ಸೆಕೆಂಡ್‌), ಧನುಶ್‌(10.60 ಸೆಕೆಂಡ್‌) ಕ್ರಮವಾಗಿ ಬೆಳ್ಳಿ, ಕಂಚು ಜಯಿಸಿದರು. 

ಪುರುಷರ ಡೆಕಾಥ್ಲಾನ್‌ನಲ್ಲಿ ಯಾದಗಿರಿಯ ಲೋಕೇಶ್‌ 6189 ಅಂಕಗಳೊಂದಿಗೆ ಅಗ್ರಸ್ಥಾನಿಯಾದರೆ, ಚಿತ್ರದುರ್ಗದ ತ್ರಿಲೋಕ್‌ ಬೆಳ್ಳಿ, ಬೆಂಗಳೂರಿನ ಪ್ರತಾಪ್‌ ಕಂಚು ಪಡೆದರು. ಪುರುಷರ 10000 ಮೀ. ಓಟದಲ್ಲಿ ಬೆಳಗಾವಿಯ ವಿಜಯ್‌ ಚಿನ್ನ, ಸುರೇಶ್‌ ಬೆಳ್ಳಿ, ಲಕ್ಷ್ಮೀಶ ಕಂಚು ಜಯಿಸಿದರು. ಮಹಿಳೆಯರ ಹೆಪ್ಟಾಥ್ಲಾನ್‌ನಲ್ಲಿ ಉಡುಪಿಯ ರಕ್ಷಿತಾ, ಪುರುಷರ 400 ಮೀ. ಓಟದಲ್ಲಿ ಹಾಸನದ ಬಾಲಕೃಷ್ಣ ಸ್ವರ್ಣ ಪದಕ ಗೆದ್ದರು.