ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟದಲ್ಲಿ ವಿಪಕ್ಷಗಳ ಪ್ರಮುಖ ನಾಯಕರು ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಗಾಂಧಿ, ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರು ಪ್ರತಿಭಟೆಗೆ ಬೆಂಬಲ ನೀಡಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ನವದೆಹಲಿ(ಮೇ.01) ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಜೈಲಿನಿಂದ ಬಿಡುಗಡೆಯಾದ ಬಳಿಕ ಹೆಚ್ಚು ಸಕ್ರಿಯರಾಗಿದ್ದಾರೆ. ಇದೀಗ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಹೋರಾಟದಲ್ಲಿ ನವಜೋತ್ ಸಿಂಗ್ ಸಿಧು ಪಾಲ್ಗೊಂಡಿದ್ದಾರೆ. ಬಿಜೆಪಿ ಸಂಸದ, ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಆರೋಪ ಮಾಡಿರುವ ಕುಸ್ತಿಪಟುಗಳು ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಈ ಪ್ರತಿಭಟನೆಗೆ ಹಲವು ರಾಜಕೀಯ ನಾಯಕರು ಪಾಲ್ಗೊಂಡು ಬೆಂಬಲ ಸೂಚಿಸುತ್ತಿದ್ದಾರೆ. ಇದೀಗ ಸಿಧು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದ್ದಾರೆ.

34 ವರ್ಷದ ಹಳೇ ಪ್ರಕರಣದಲ್ಲಿ ಕೋರ್ಟ್ ಜೈಲು ಶಿಕ್ಷೆ ವಿಧಿಸಿತ್ತು. ಪಟಿಯಾಲ ಕೋರ್ಟ್‌ನಲ್ಲಿ 10 ತಿಂಗಳು ಜೈಲು ಶಿಕ್ಷೆ ಅನುಭವಿಸಿದ ಸಿಧು, ಸನ್ನಡತೆ ಆಧಾರದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದರು. ಜೈಲಿನಿಂದ ಹೊರಬಂದ ಸಿಧು ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಕುಸ್ತಿಗಳ ಪ್ರತಿಭಟೆಯಲ್ಲಿ ಪಾಲ್ಗೊಂಡು ಬಿಜೆಪಿ ವಿರುದ್ದ ಹೋರಾಟ ಶುರುವಮಾಡಿದ್ದಾರೆ.

Wrestlers Protest: ಮಾಧ್ಯ​ಮ​ಗಳ ವಿರು​ದ್ಧ ಕುಸ್ತಿ​ಪ​ಟು​ಗಳ ಆಕ್ರೋ​ಶ!

ಕುಸ್ತಿಪಟುಗಳ ಹೋರಾಟಕ್ಕೆ ಇದೀಗ ರಾಜಕೀಯ ನಾಯಕರ ಬೆಂಬಲ ಹೆಚ್ಚಾಗುತ್ತಿದೆ. ನವಜೋತ್ ಸಿಂಗ್ ಸಿಧು ಭೇಟಿಗೂ ಮುನ್ನ ಕಾಂಗ್ರೆಸ್ ನಾಯಕ, ಉತ್ತರಖಂಡ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾ ನಿರತರ ನಡುವೆ ಮಾತನಾಡಿದ ಹರೀಶ್ ರಾವತ್, ಬಿಜೆಪಿ ಕ್ರೀಡೆಯಲ್ಲೂ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದರು. 

ಶನಿವಾರ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಕುಸ್ತಿಪಟುಗಳ ಜೊತೆ ಕೆಲ ಕಾಲ ಕೂತು ಚರ್ಚಿಸಿದ ಪ್ರಿಯಾಂಕ, ಮಾಧ್ಯಮಗಳ ಜೊತೆ ಮಾತನಾಡುತ್ತಾ ‘ಎಫ್‌ಐಆರ್‌ ವಿವರಗಳನ್ನು ಪೊಲೀಸರು ಬಹಿರಂಗಪಡಿಸುತ್ತಿಲ್ಲ ಏಕೆ?, ಕುಸ್ತಿಪಟುಗಳು ಪದಕ ಗೆದ್ದಾಗ ನಾವೆಲ್ಲಾ ಟ್ವೀಟ್‌ ಮಾಡಿ ಸಂಭ್ರಮಿಸುತ್ತೇವೆ. ಆದರೆ ಈಗ ಅವರು ರಸ್ತೆಯಲ್ಲಿ ಕೂತು ಪ್ರತಿಭಟಿಸುತ್ತಿದ್ದಾರೆ. ಅವರಿಗೆ ನ್ಯಾಯ ಸಿಗುತ್ತಿಲ್ಲ. ಸರ್ಕಾರ ಬ್ರಿಜ್‌ಭೂಷಣ್‌ ಸಿಂಗ್‌ರನ್ನು ಏಕೆ ರಕ್ಷಿಸುತ್ತಿದೆ ಎಂದು ನನಗೆ ತಿಳಿಯುತ್ತಿಲ್ಲ’ ಎಂದರು.

ಪ್ರತಿಭಟನೆ ಹಿಂದೆ ಕಾಂಗ್ರೆಸ್‌ ಕೈವಾಡ: ಬ್ರಿಜ್‌ಭೂಷಣ್‌ ಸಿಂಗ್ ಆರೋಪ

ಬಳಿಕ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿಯಾಗಿ ಬೆಂಬಲ ಸೂಚಿಸಿದ ಕೇಜ್ರಿವಾಲ್‌, ‘ಪಕ್ಷ ಯಾವುದೇ ಇರಲಿ, ಎಲ್ಲರೂ ಆಗಮಿಸಿ ಕುಸ್ತಿಪಟುಗಳಿಗೆ ಬೆಂಬಲ ನೀಡಬೇಕಿದೆ. ಕುಸ್ತಿಪಟುಗಳಿಗೆ ಬೇಕಿರುವ ಎಲ್ಲಾ ಸೌಕರ್ಯವನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ’ ಎಂದರು. ಬಳಿಕ ಟ್ವೀಟ್‌ ಮೂಲಕವೂ ಪ್ರತಿಕ್ರಿಯಿಸಿರುವ ಕೇಜ್ರಿವಾಲ್‌, ‘ಈ ವನಿತೆಯರು ನಮ್ಮ ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು. ಆರೋಪಿ ಎಷ್ಟೇ ಬಲಿಷ್ಠನಾಗಿದ್ದರೂ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು’ ಎಂದಿದ್ದಾರೆ.