ದಿನಲಿ ತರಲು ಮನೆಯಿಂದ ತೆರಳಿದ ರಾಷ್ಟ್ರೀಯ ಮಟ್ಟದ ಶೂಟರ್ ದಮಯಂತಿ ಸೇನ್ ನಾಪತ್ತೆಯಾಗಿರುವ ಘಟನೆ ನಡೆದಿದೆ. ರೈಲು ನಿಲ್ದಾಣದಲ್ಲಿ ಸಿಸಿಟವಿಯಲ್ಲಿ ಕ್ರೀಡಾಪಟು ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಹುಡುಕಾಟ ತೀವ್ರಗೊಂಡಿದೆ.
ಕೋಲ್ಕತಾ (ಜು.17) ರಾಷ್ಟ್ರೀಯ ಮಟ್ಟದ ಶೂಟರ್ ಆಗಿ ದೇಶದ ಗಮನಸೆಳೆದಿರವು ಹಾಗೂ ಹಲವು ಪದಕ ಗೆದ್ದಿರುವ 15 ವರ್ಷದ ದಮಯಂತಿ ಸೇನ್ ನಾಪತ್ತೆಯಾಗಿದ್ದಾರೆ. ಪಶ್ಚಿಮ ಬಂಗಾಳದ ಹೌರದಲ್ಲಿರುವ ಮನೆಯಿಂದ ದಿನಸಿ ತರಲೆಂದು ಹೊರಗಡೆ ಹೋದ ದಮಯಂತಿ ಸೇನ್ ಬಳಿಕ ಮನೆಗೆ ಮರಳಿಲ್ಲ. ಪೋಷಕರು ನೀಡಿದ ದೂರಿನ ಬೆನ್ನಲ್ಲೇ ಪೊಲೀಸರು ತಂಡ ರಚಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ದಮಯಂತಿ ಸೇನ್ ಕೊನೆಯದಾಗಿ ಹೌರ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ.
ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದ ದಮಯಂತಿ
ಗುರುವಾರ ಸಂಜೆ ಕೇಂದ್ರ ಹೌರಾದ ಉಮಚರಣ ಬಟ್ಟಾಚಾರ್ಜಿ ಲೇನ್ ಬಳಿ ಇರುವ ಮನೆಯಿಂದ ದಿನಸಿ ತರಲೆಂದು ಹೊರಗಡೆ ಹೋದ ದಮಯಂತಿ ಸೇನ್ ನಾಪತ್ತೆಯಾಗಿದ್ದಾಳೆ. ದಮಯಂತಿ ಸೇನ್ ರಾಷ್ಟ್ರೀಯ ತಂಡದ ಟ್ರಯಲ್ಸ್‌ಗೆ ಆಯ್ಕೆಯಾಗಿದ್ದಳು. ಟ್ರಯಲ್ಸ್ ನಡೆಯುತ್ತಿದ್ದ ನಡುವೆ ದಮಯಂತಿ ನಾಪತ್ತೆ ತೀವ್ರ ಅನುಮಾನಕ್ಕೆ ಕಾರಣವಾಗಿದೆ. ಇತ್ತ ಪೋಷಕರು ಆತಂಕಗೊಂಡಿದ್ದು, ಮಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಸರಿಸುಮಾರು 1 ಗಂಟೆ ಕಳೆದರೂ ದಮಯಂತಿ ಮನಗೆ ಬಾರದ ಕಾರಣ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಆದರೆ ಪತ್ತೆಯಾಗಿಲ್ಲ. ಕೊನೆಗೆ ಗೆಳೆಯರು, ಆಪ್ತರು, ಸಂಬಂದಿಕರಿಗೆ ಕರೆ ಮಾಡಿದ್ದಾರೆ. ಎಲ್ಲೂ ಸುಳಿವು ಪತ್ತೆಯಾಗದ ಬೆನ್ನಲ್ಲೇ ಹೌರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ಪೊಲೀಸರು ತಂಡ ರಚಿಸಿ ತನಿಖೆ ಆರಂಭಿಸಿದ್ದಾರೆ.
ಹೌರ ನಿಲ್ದಾಣದ ಸಿಸಿಟಿವಿಯಲ್ಲಿ ಕೊನೆಯದಾಗಿ ಪತ್ತೆ
ಹೌರ ನಿಲ್ದಾಣ ರೈಲು ನಿಲ್ದಾಣ ಪ್ಲಾಟ್‌ಫಾರ್ಮ್ ನಂಬರ್ 4 ಹಾಗೂ 5 ರ ನಡುವೆ ಸಾಗುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ. ದಮಯಂತಿ ತನ್ನ ಮೊಬೈಲ್ ಫೋನ್ ಹಿಡಿದು ಮನೆಯಿಂದ ಹೊರಗಡೆ ಹೋಗಿದ್ದಾಳೆ. ಆದರೆ ಮೊಬೈಲ್ ಫೋನ್ ಸ್ವಿಚ್ ಆಫ್ ಬರುತ್ತಿದೆ. ಹೀಗಾಗಿ ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ. ಅತ್ಯಂತ ಶಿಸ್ತಿನ ದಿನಚರಿ ಹೊಂದಿದ್ದ ದಮಯಂತಿ ನಾಪತ್ತೆ ಪ್ರಕರಣದ ಕುರಿತು ಪೊಲೀಸರು ಕಾರ್ಯಾಚರಣ ತೀವ್ರಗೊಳಿಸಿದ್ದಾರೆ.


