* ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕುಸ್ತಿಪಟು ಸುಶೀಲ್ ಕುಮಾರ್* ಬಂಧನವಾಗಿ 48 ಗಂಟೆ ತುಂಬುವುದರೊಳಗಾಗಿ ಸುಶೀಲ್‌ಗೆ ಮತ್ತೊಂದು ಶಾಕ್‌*  ಸುಶೀಲ್‌ ಕುಮಾರ್‌ರನ್ನು ರೈಲ್ವೇ ಇಲಾಖೆ ಅಮಾನತುಗೊಳಿಸಿ ಆದೇಶ ಹೊರಬಿದ್ದಿದೆ.

ನವದೆಹಲಿ(ಮೇ.26): ಕುಸ್ತಿಪಟು ಸಾಗರ್‌ ರಾಣಾ ಸಾವು ಕೇಸ್‌ನಲ್ಲಿ ಪ್ರಮುಖ ಆರೋಪಿಯಾಗಿರುವ 2 ಬಾರಿ ಒಲಿಂಪಿಕ್‌ ಪದಕ ವಿಜೇತ, ದಿಗ್ಗಜ ಕುಸ್ತಿಪಟು ಸುಶೀಲ್‌ ಕುಮಾರ್‌ರನ್ನು ರೈಲ್ವೇ ಇಲಾಖೆ ಅಮಾನತುಗೊಳಿಸಿದೆ. 

ಸುಶೀಲ್ ಕುಮಾರ್ ಉತ್ತರ ರೈಲ್ವೇಯಲ್ಲಿ ಸುಶೀಲ್‌ ಹಿರಿಯ ಕಮರ್ಷಿಯಲ್‌ ವ್ಯವಸ್ಥಾಪಕಾರಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೇ ಅವರನ್ನು ದೆಹಲಿ ಸರ್ಕಾರ, ಛತ್ರಾಸಲ್‌ ಕ್ರೀಡಾಂಗಣದಲ್ಲಿ ಶಾಲಾ ಮಟ್ಟದ ಕ್ರೀಡಾಭಿವೃದ್ಧಿ ಯೋಜನೆಗೆ ವಿಶೇಷ ಅಧಿಕಾರಿಯಾಗಿ ನೇಮಿಸಲಾಗಿತ್ತು.

ಒಂದು ರುಪಾಯಿಯಿಂದ 45 ಕೋಟಿ ವರೆಗೆ, ತಮ್ಮದೇ ಬಯೋಪಿಕ್‌ಗೆ ಕ್ರೀಡಾಪಟುಗಳು ಪಡೆದ ಹಣವೆಷ್ಟು..?

ಸುಶೀಲ್‌ರನ್ನು ಮಂಗಳವಾರ ತನಿಖೆ ನಡೆಸುವ ಸಲುವಾಗಿ, ಘಟನೆಗೆ ಸಂಬಂಧಿಸಿದ 3 ಸ್ಥಳಗಳಿಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು. ಗಾಬರಿಗೊಂಡಿರುವ ಸುಶೀಲ್‌ ಪದೇಪದೆ ಹೇಳಿಕೆಗಳನ್ನು ಬದಲಿಸಿದರು ಎನ್ನಲಾಗಿದೆ. ಇದೇ ವೇಳೆ ಅವರಿಗೆ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್‌ ಪಡೆಯುವ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಮತ್ತಷ್ಟು ದಿನಗಳ ಕಾಲ ಕಾದು, ಪ್ರಕರಣದ ಇನ್ನಷ್ಟು ಮಾಹಿತಿ ಸಿಕ್ಕ ಬಳಿಕ ನಿರ್ಧರಿಸಲು ಸರ್ಕಾರ ಚಿಂತಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಸುಶೀಲ್ ಕುಮಾರ್ ಹಾಗೂ ಮತ್ತವರ ಬೆಂಬಲಿಗರು ನವದೆಹಲಿ ಛತ್ರಸಾಲ್ ಸ್ಟೇಡಿಯಂನಲ್ಲಿ ಜೂನಿಯರ್ ನ್ಯಾಷನಲ್ ಕುಸ್ತಿ ಚಾಂಪಿಯನ್ ಸಾಗರ್ ರಾಣಾ ಅವರ ಮೇಲೆ ಮೇ 04ರಂದು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಬಳಿಕ ರಾಣಾ ಸ್ನೇಹಿತರು ಆತನನ್ನು ಆಸ್ಪತ್ರಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಮೇ 05ರಂದು ಆಸ್ಪತ್ರೆಯಲ್ಲಿಯೇ ರಾಣಾ ಕೊನೆಯುಸಿರೆಳೆದಿದ್ದರು. ಇದರ ಬೆನ್ನಲ್ಲೇ ಸುಶೀಲ್‌ ಕುಮಾರ್ ತಲೆ ಮರೆಸಿಕೊಂಡಿದ್ದರು. 

ಕೊಲೆ ಪ್ರಕರಣ: ಸುಶೀಲ್‌ ಕುಮಾರ್‌ ರೈಲ್ವೆ ನೌಕರಿ ಖೋತಾ?

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡೆಲ್ಲಿ ಪೊಲೀಸರು, ಪಂಜಾಬ್‌ನಲ್ಲಿದ್ದ ಸುಶೀಲ್ ಕುಮಾರ್ ಹಾಗೂ ಆತನ ಸಹಚರರನ್ನು ಬಂಧಿಸಿ ಕರೆ ತರುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಡೆಲ್ಲಿ ರೋಹಿಣಿ ಕೋರ್ಟ್‌ ವಿಚಾರಣೆಗಾಗಿ ಸುಶೀಲ್ ಕುಮಾರ್ ಅವರನ್ನು 6 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.