ಒಂದು ರುಪಾಯಿಯಿಂದ 45 ಕೋಟಿ ವರೆಗೆ, ತಮ್ಮದೇ ಬಯೋಪಿಕ್‌ಗೆ ಕ್ರೀಡಾಪಟುಗಳು ಪಡೆದ ಹಣವೆಷ್ಟು..?
ಬೆಂಗಳೂರು: ಭಾರತೀಯ ಕ್ರೀಡಾತಾರೆಯರು ತಾವು ದಿಗ್ಗಜ ಆಟಗಾರರಾಗಿ ಬೆಳೆಯುವ ಮುನ್ನ ತಮ್ಮ ಜೀವನದಲ್ಲಿ ಎದುರಿಸಿದ ಸಂಕಷ್ಟ ಹಾಗೂ ಸವಾಲುಗಳನ್ನು ಪ್ರೇಕ್ಷಕರು ಪರದೆಯ ಮೇಲೆ ನೋಡಲು ಹಲವು ಜೀವನಾಧಾರಿತ ಚಿತ್ರಗಳು ಬಾಲಿವುಡ್‌ನಲ್ಲಿ ತೆರೆ ಕಂಡಿವೆ. ಅದರಲ್ಲೂ ಕಳೆದ ಎಂಟರಿಂದ ಹತ್ತು ವರ್ಷಗಳ ಅವಧಿಯಲ್ಲಿ ಹೆಚ್ಚು ಬಯೋಪಿಕ್‌ಗಳು ತೆರೆ ಕಂಡಿವೆ. ಮಿಲ್ಖಾ ಸಿಂಗ್‌ರಿಂದ ಹಿಡಿದು ಎಂ ಎಸ್ ಧೋನಿವರೆಗೂ ಹಲವು ಬಯೋಪಿಕ್‌ಗಳು ಬಾಲಿವುಡ್‌ನಲ್ಲಿ ಧೂಳೆಬ್ಬಿಸಿವೆ. ತಮ್ಮ ಜೀವನ ಕಥೆಯನ್ನು ಸಿನೆಮಾ ಮಾಡಲು ಒಪ್ಪಿಕೊಂಡು ಕಥೆ ಹೇಳಿದ ಹಲವು ಕ್ರೀಡಾತಾರೆಯರು ಭರ್ಜರಿಯಾಗಿಯೇ ಸಂಪಾದನೆ ಮಾಡಿದ್ಧರೆ. ಕೆಲವರು ಕೋಟಿಗಟ್ಟಲೆ ಸಂಪಾದನೆ ಮಾಡಿದರೆ, ಮತ್ತೆ ಕೆಲವರು ಕೇವಲ ಒಂದು ರುಪಾಯಿ ಪಡೆದು ತಮ್ಮ ಜೀವನ ಕಥೆ ತೆರೆಕಾಣಲು ಒಪ್ಪಿದ್ದಾರೆ.
ಎಂ.ಎಸ್ ಧೋನಿ:
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ ಚಿತ್ರ, ಎಂ ಎಸ್ ಧೋನಿ; ದಿ ಅನ್‌ಟೋಲ್ಡ್ ಸ್ಟೋರಿ 2016ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಸುಶಾಂತ್ ಸಿಂಗ್ ರಜಪೂತ್, ಧೋನಿ ಪಾತ್ರಕ್ಕೆ ಜೀವ ತುಂಬಿದ್ದರು. ಈ ಚಿತ್ರಕ್ಕೆ ತಮ್ಮದೇ ಜೀವನ ಕಥೆಯನ್ನು ಹಂಚಿಕೊಳ್ಳಲು ಮಹೇಂದ್ರ ಸಿಂಗ್ ಧೋನಿ 45 ಕೋಟಿ ರುಪಾಯಿ ಪಡೆದಿದ್ದರು ಎನ್ನಲಾಗಿದೆ.
ಸೈನಾ ನೆಹ್ವಾಲ್
ಒಲಿಂಪಿಕ್ಸ್ ಪದಕ ವಿಜೇತೆ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನಾಧಾರಿತ ಚಿತ್ರ ಈ ವರ್ಷ OTT ಪ್ಲಾಟ್‌ಫಾರ್ಮ್‌ನಲ್ಲಿ ತೆರೆಕಂಡು ಹಿಟ್ ಆಗಿತ್ತು. ಸೈನಾ ಪಾತ್ರದಲ್ಲಿ ಪರಿಣಿತಿ ಚೋಪ್ರಾ ಕಾಣಿಸಿಕೊಂಡಿದ್ದರು. 2015ರಲ್ಲಿ ನಂ.1 ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿ ಎನಿಸಿಕೊಂಡಿದ್ದ ಸೈನಾ ತಮ್ಮ ಬಯೋಪಿಕ್‌ಗಾಗಿ 50 ಲಕ್ಷ ರುಪಾಯಿ ಪಡೆದಿದ್ದಾರೆ ಎನ್ನಲಾಗಿದೆ.
ಮಿಥಾಲಿ ರಾಜ್
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಜೀವನಾಧಾರಿತ ಚಿತ್ರವು ತೆರೆ ಕಾಣಲು ಸಜ್ಜಾಗುತ್ತಿದೆ. ಎರಡು ದಶಕಗಳಿಂದ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಮಿಥಾಲಿ ಪಾತ್ರವನ್ನು ಖ್ಯಾತ ನಟಿ ತಾಪ್ಸಿ ಪನ್ನು ನಿರ್ವಹಿಸುತ್ತಿದ್ದಾರೆ. ಮಿಥಾಲಿ ತಮ್ಮ ಚಿತ್ರಕ್ಕೆ ಕಥೆ ಹೇಳಲು ಬರೋಬ್ಬರಿ 1 ಕೋಟಿ ರುಪಾಯಿ ಪಡೆಯಲಿದ್ದಾರೆ ಎನ್ನಲಾಗಿದೆ.
ಮಿಲ್ಖಾ ಸಿಂಗ್:
ಪ್ಲೈಯಿಂಗ್ ಸಿಂಗ್ ಖ್ಯಾತಿಯ ಮಿಲ್ಖಾ ಸಿಂಗ್ ಜೀವಾನಾಧಾರಿತ ಚಿತ್ರ 'ಭಾಗ್ ಮಿಲ್ಖಾ ಭಾಗ್' ಜನ ಮನಸೂರೆಗೊಂಡಿತ್ತು. ಮಿಲ್ಖಾ ಸಿಂಗ್ ಪಾತ್ರಕ್ಕೆ ಫರ್ಹಾನ್ ಅಖ್ತರ್ ಜೀವ ತುಂಬಿದ್ದರು. ಈ ಚಿತ್ರಕ್ಕೆ ಮಿಲ್ಖಾ ಸಿಂಗ್ ಕೇವಲ ಒಂದು ರುಪಾಯಿ ಪಡೆದಿದ್ದರು. ಚಿತ್ರಕ್ಕೆ ತಮ್ಮ ಜೀವನ ಕಥೆ ಹೇಳಲು ಮಿಲ್ಖಾ ಸಿಂಗ್ ಹಣ ಪಡೆದಿರಲು ತೀರ್ಮಾನಿಸಿದ್ದರಂತೆ. ಆದರೆ ಚಿತ್ರನಿರ್ಮಾಪಕರು ಪಟ್ಟು ಹಿಡಿದಾಗ ಔಪಚಾರಿಕವಾಗಿ ಕೇವಲ ಒಂದು ರುಪಾಯಿ ಸಂಭಾವನೆ ಪಡೆದಿದ್ದರು.
ಸಚಿನ್ ತೆಂಡುಲ್ಕರ್:
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಜೀವನಾಧಾರಿತ ಚಿತ್ರವೂ ತೆರೆ ಕಂಡಿದೆ. 2017ರಲ್ಲಿ ತೆರೆ ಕಂಡ ಸಚಿನ್; ಎ ಬಿಲಿಯನ್ ಡ್ರೀಮ್ಸ್ ಚಿತ್ರಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 40 ಕೋಟಿ ರುಪಾಯಿ ಪಡೆದಿದ್ದರು.
ಮಹಾವೀರ್ ಸಿಂಗ್ ಪೋಗತ್
ಭಾರತೀಯ ಮಹಿಳಾ ಕುಸ್ತಿಪಟುಗಳಾದ ಗೀತಾ ಹಾಗೂ ಬಬಿತಾ ಜೀವನಾಧಾರಿತ ಚಿತ್ರ ದಂಗಲ್‌ನಲ್ಲಿ ತಂದೆಯ ಪರಿಶ್ರಮ ಹಾಗೂ ಹೋರಾಟವನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಬಿಂಬಿಸಲಾಗಿದೆ. ಮಹಾವೀರ್ ಸಿಂಗ್ ಪೋಗತ್ ಪಾತ್ರಕ್ಕೆ ಆಮೀರ್ ಖಾನ್ ಜೀವ ತುಂಬಿದ್ದರು. ದಂಗಲ್ ಚಿತ್ರಕ್ಕಾಗಿ ಮಹಾವೀರ್ ಸಿಂಗ್ ಪೋಗತ್ 80 ಲಕ್ಷ ರುಪಾಯಿ ಪಡೆದಿದ್ದರು.
ಕಪಿಲ್ ದೇವ್
ಭಾರತಕ್ಕೆ ಚೊಚ್ಚಲ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಜೀವಾನಾಧಾರಿತ ಚಿತ್ರವೂ ಸದ್ಯದಲ್ಲೇ ತೆರೆ ಕಾಣಲು ಸಿದ್ದವಾಗುತ್ತಿದೆ. ಈ ಚಿತ್ರದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಕಪಿಲ್ ದೇವ್ ತಮ್ಮ ಬಯೋಪಿಕ್‌ಗಾಗಿ 20 ಕೋಟಿ ಪಡೆಯುವ ಕುರಿತಂತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಮೇರಿ ಕೋಮ್
ಭಾರತದ ಖ್ಯಾತ ಬಾಕ್ಸಿಂಗ್ ತಾರೆ, ಒಲಿಂಪಿಕ್ಸ್ ಪದಕ ವಿಜೇತೆ ಮೇರಿ ಕೋಮ್ ಜೀವನಾಧಾರಿತ ಚಿತ್ರ 2014ರಲ್ಲಿ ನಿರ್ಮಾಣವಾಗಿತ್ತು. ಮೇರಿ ಕೋಮ್ ಪಾತ್ರದಲ್ಲಿ ಪ್ರಿಯಾಂಕ ಚೋಪ್ರಾ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ಮೇರಿ ಕೋಮ್ 25 ಲಕ್ಷ ರುಪಾಯಿ ಪಡೆದಿದ್ದರು.
ಪಿ ವಿ ಸಿಂಧು
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಪಿ.ವಿ. ಸಿಂಧು ಜೀವನಾಧಾರಿತ ಚಿತ್ರವು ನಿರ್ಮಾಣವಾಗುತ್ತಿದೆ. ಸಿಂಧು ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಸಿಂಧು ಒಂದು ಕೋಟಿ ರುಪಾಯಿ ಪಡೆಯಲಿದ್ದಾರೆ ಎನ್ನಲಾಗಿದೆ.
ಪಾನ್ ಸಿಂಗ್ ತೋಮರ್
2010ರಲ್ಲಿ ತೆರೆ ಕಂಡ ಪಾನ್ ಸಿಂಗ್ ತೋಮರ್ ಜೀವನಾಧಾರಿತ ಚಿತ್ರದಲ್ಲಿ ಇರ್ಫಾನ್ ಖಾನ್ ಮನೋಜ್ಞವಾಗಿ ನಟಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದರು. ಈ ಚಿತ್ರಕ್ಕಾಗಿ ಪಾನ್ ಸಿಂಗ್ ತೋಮರ್ ಕುಟುಂಬದವರು 15 ಲಕ್ಷ ರುಪಾಯಿ ಪಡೆದಿದ್ದರು. ಪಾನ್ ಸಿಂಗ್ ತೋಮರ್ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು. ಇದರ ಜತೆಗೆ ಸ್ಟೇಪಲ್‌ಚೇಸ್‌ನಲ್ಲಿ 7 ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.