ನವದೆಹಲಿ(ಮೇ.25): ಯುವ ಕುಸ್ತಿಪಟುವೊಬ್ಬನ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಎರಡು ಬಾರಿಯ ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟು ಸುಶೀಲ್‌ ಕುಮಾರ್‌, ರೈಲ್ವೇಸ್‌ನಲ್ಲಿ ತನ್ನ ನೌಕರಿ ಕಳೆದುಕೊಳ್ಳುವ ಸಾಧ್ಯತೆ ಇದೆ. 

ಉತ್ತರ ರೈಲ್ವೆಯಲ್ಲಿ ಸಹಾಯಕ ವಾಣಿಜ್ಯ ವ್ಯವಸ್ಥಾಪಕ ಹುದ್ದೆ ಹೊಂದಿದ್ದ ಸುಶೀಲ್‌, 2015ರಿಂದ ದೆಹಲಿ ಸರ್ಕಾರದ ಹುದ್ದೆಯೊಂದಕ್ಕೆ ನಿಯೋಜಿತರಾಗಿದ್ದರು. ಅದರ ಅವಧಿ ವಿಸ್ತರಣೆಗೆ ದಿಲ್ಲಿ ಸರ್ಕಾರ ನಿರಾಕರಿಸಿದ್ದು, ಇದೀಗ ರೈಲ್ವೆ ಇಲಾಖೆಯೂ ಸುಶೀಲ್‌ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ನವದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದಿಗ್ಗಜ ಕುಸ್ತಿಪಟು ಸುಶೀಲ್‌ ಕುಮಾರ್‌ರನ್ನು ಇಲ್ಲಿನ ರೋಹಿಣಿ ಕೋರ್ಟ್‌ 6 ದಿನಗಳ ಪೊಲೀಸ್‌ ವಶಕ್ಕೆ ನೀಡಿದೆ.  ಕಳೆದ ಭಾನುವಾರ ದೆಹಲಿ ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಪಂಜಾಬ್‌ನಲ್ಲಿ ಸಿಕ್ಕಿಬಿದ್ದಿದ್ದ ಸುಶೀಲ್‌ರನ್ನು ಶನಿವಾರ ದೆಹಲಿಗೆ ಕರೆತರಲಾಗಿತ್ತು. ಸುಶೀಲ್‌ರನ್ನು ಪೊಲೀಸರು ಠಾಣೆಗೆ ಕರೆತರುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. 

ಸಹಚರನಿಗೆ ಗಲಾಟೆ ಘಟನೆ ವಿಡಿಯೋ ಮಾಡಲು ತಿಳಿಸಿದ್ದ ಸುಶೀಲ್ ಕುಮಾರ್..!

ಅಲ್ಲದೇ, ಅವರ ಬಂಧನಕ್ಕೆ ಭಾರತೀಯ ಕ್ರೀಡಾಪಟುಗಳು ಆಘಾತ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಸುಶೀಲ್‌ ಪಾತ್ರವಿರುವುದು ಖಚಿತವಾದರೆ ಭಾರತೀಯ ಕ್ರೀಡೆಯ ಗೌರವಕ್ಕೆ ಧಕ್ಕೆ ಉಂಟಾಗಲಿದೆ ಎಂದು ಹಲವು ತಾರಾ ಕ್ರೀಡಾಪಟುಗಳು ಅಭಿಪ್ರಾಯಿಸಿದ್ದಾರೆ.