ಕೊಲೆ ಪ್ರಕರಣ: ಸುಶೀಲ್ ಕುಮಾರ್ ಶಸ್ತ್ರಾಸ್ತ್ರ ಪರವಾನಗಿ ಅಮಾನತು
* ಸುಶೀಲ್ ಕುಮಾರ್ ಶಸ್ತ್ರಾಸ್ತ್ರ ಪರವಾನಿಗೆ ರದ್ದು ಪಡಿಸಲು ಮುಂದಾದ ಡೆಲ್ಲಿ ಪೊಲೀಸರು
* ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸುಶೀಲ್ ಕುಮಾರ್
* ಸುಶೀಲ್ ಕುಮಾರ್ ಮನೆಗೆ ನೋಟಿಸ್ ಕಳಿಸಿದ ಡೆಲ್ಲಿ ಪೊಲೀಸರು
ನವದೆಹಲಿ(ಜೂ.02): ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ದಿಗ್ಗಜ ಕುಸ್ತಿಪಟು ಸುಶೀಲ್ ಕುಮಾರ್‌ರ ಶಸ್ತ್ರಾಸ್ತ್ರ ಪರವಾನಗಿಯನ್ನು ದೆಹಲಿ ಪೊಲೀಸರು ಮಂಗಳವಾರ ಅಮಾನತುಗೊಳಿಸಿದ್ದಾರೆ.
ಪರವಾನಗಿಯನ್ನು ಏಕೆ ರದ್ದುಗೊಳಿಸಬಾರದು ಎಂದು ಪೊಲೀಸರು ಸುಶೀಲ್‌ಗೆ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿರುವ ವೇಳೆ ಈ ಕ್ರಮ ಅಗತ್ಯ ಎಂದಿದ್ದಾರೆ. ಡೆಲ್ಲಿ ಪೊಲೀಸರು ನೇರವಾಗಿ ಸುಶೀಲ್ ಕುಮಾರ್ ಮನೆಗೆ ನೋಟಿಸ್ ಕಳಿಸಿದ್ದಾರೆ. ಈ ನೋಟಿಸ್‌ಗೆ ಉತ್ತರಿಸುವಂತೆ 10 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ. 2012ರಲ್ಲಿ ಸುಶೀಲ್ ಶಸ್ತ್ರಾಸ್ತ್ರ ಪರವಾನಗಿ ಪಡೆದಿದ್ದರು.
ನವದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ಮೇ 04ರಂದು ನಡೆದ ಹಲ್ಲೆ ಪ್ರಕರಣದಲ್ಲಿ ಜೂನಿಯರ್ ನ್ಯಾಷನಲ್ ಕುಸ್ತಿ ಚಾಂಪಿಯನ್ ಸಾಗರ್ ರಾಣಾ ಮೇಲೆ ಸುಶೀಲ್ ಕುಮಾರ್ ಹಾಗೂ ಮತ್ತವರ ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮೇ 05ರಂದು ಸಾಗರ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು. ಈ ಘಟನೆಯ ಬಳಿಕ ತಲೆ ಮರೆಸಿಕೊಂಡಿದ್ದ ಸುಶೀಲ್ ಕುಮಾರ್ ಅವರನ್ನು ದೆಹಲಿಯ ವಿಶೇಷ ಪೊಲೀಸ್ ಪಡೆ ಮೇ 24ರಂದು ಪಂಜಾಬ್‌ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಕುಸ್ತಿಪಟು ಸಾವು ಬಳಿಕ 18 ದಿನ 7 ರಾಜ್ಯ ಸುತ್ತಿದ್ದ ಸುಶೀಲ್ ಕುಮಾರ್!
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆಲ್ಲಿ ಪೊಲೀಸರು ಈವರೆಗೆ 9 ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಪರಾಧ ವಿಭಾಗದ ಪೊಲೀಸರು ಭಾನುವಾರ(ಮೇ.30) ಸುಶೀಲ್ ಅವರನ್ನು ಹೆಚ್ಚಿನ ವಿಚಾರಣೆಗೆ ಹರಿದ್ವಾರಕ್ಕೆ ಕರೆದೊಯ್ದು ತನಿಖೆ ನಡೆಸಿದ್ದರು. ಹರಿದ್ವಾರದಲ್ಲಿ ಸುಶೀಲ್ ಕುಮಾರ್ ಬಳಸಿದ್ದ ಬಟ್ಟೆ ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎನ್ನಲಾಗುತ್ತಿದೆ.